ಆರೋಪ ಪಟ್ಟಿ ಸಲ್ಲಿಸಲು ಲಂಚ: ಸರ್ಕಾರಿ ಅಭಿಯೋಜಕ ಶ್ರೀನಿವಾಸ ರಾಜುಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಆರೋಪಿ ಶ್ರೀನಿವಾಸ ರಾಜು ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಅಧೀನ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ವರೆಗೆ ವಿವಿಧ ಒಟ್ಟು 81 ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆದರೆ, ಇವ್ಯಾವು ಅವರನ್ನು ಶಿಕ್ಷೆಯಿಂದ ಪಾರು ಮಾಡಲಿಲ್ಲ.
Jail

Jail

ಕ್ರಿಮಿನಲ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ದೂರುದಾರರಿಂದ ಲಂಚ ಬೇಡಿಕೆ ಇಟ್ಟು ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಬಲೆಗೆ ಬಿದ್ದಿದ್ದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಆರ್‌ ಶ್ರೀನಿವಾಸ ರಾಜು ಅವರಿಗೆ ವಿಶೇಷ ನ್ಯಾಯಾಲಯವು ಈಚೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ತೀರ್ಪು ನೀಡಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆ- 1988ರ ಸೆಕ್ಷನ್‌ 7ರ ಅಡಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿ ಶ್ರೀನಿವಾಸರಾಜು ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲಾಗಿದೆ.

ಸೆಕ್ಷನ್‌ 13(2) ರ ಅಪರಾಧಕ್ಕೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಪೀಠವು ಆದೇಶ ಮಾಡಿದೆ. ಎರಡು ಸೆಕ್ಷನ್‌ಗಳಲ್ಲಿ ವಿಧಿಸಲಾಗಿರುವ ಜೈಲು ಶಿಕ್ಷೆಯು ಒಟ್ಟಾಗಿ ಜಾರಿಗೆ ಬರಲಿವೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಿವಾಸಿ ವೈ ಶಂಕರ್‌ ನೀಡಿದ್ದ ದೂರಿನ ಅನ್ವಯ ವಂಚನೆ, ಕಳುವು ಮತ್ತಿತರ ಆರೋಪಕ್ಕೆ ಸಂಬಂಧಿಸಿದಂತೆ ಮುನಿಯಲ್ಲಪ್ಪ ಮತ್ತು ಅವರ ಪುತ್ರ ಕೃಷ್ಣಪ್ಪ ಎಂಬವರ ವಿರುದ್ಧ ಬೆಂಗಳೂರಿನ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಮೇಲೆ ನಿಗಾ ಇಡುವಂತೆ ಶಂಕರ್‌ ಅವರು ತಮ್ಮ ಸಂಬಂಧಿ ಸುಬ್ರಮಣಿ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವರ್ತೂರು ಪೊಲೀಸ್‌ ಠಾಣೆಗೆ ತೆರಳಿದ್ದ ಸುಬ್ರಮಣಿ ಅವರಿಗೆ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ರವಾನಿಸಿರುವುದಾಗಿ ತಿಳಿಸಿದ್ದರು.

ಸದರಿ ಆರೋಪ ಪಟ್ಟಿಯು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ರಾಜು ಅವರ ಬಳಿ ಇರುವುದು ಗೊತ್ತಾಗಿತ್ತು. ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕ್ರಿಯೆ ಆರಂಭಿಸುವಂತೆ ಶ್ರೀನಿವಾಸ ರಾಜು ಅವರಿಗೆ ಸುಬ್ರಮಣಿ ಕೋರಿದ್ದರು. ಇದಕ್ಕಾಗಿ ಶ್ರೀನಿವಾಸರಾಜು ಅವರು ಸುಬ್ರಮಣಿಗೆ 50,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.

2015ರ ಜನವರಿ 23ರಂದು ಆರೋಪಿ ಶ್ರೀನಿವಾಸ ರಾಜು ಅವರು 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು 5,000 ಪಡೆದಿದ್ದರು. ಬಳಿಕ ಲಂಚ ನೀಡುವುದಕ್ಕೆ ಒಲ್ಲದ ಸುಬ್ರಮಣಿ ಅವರು ಲೋಕಾಯುಕ್ತ ಪೊಲೀಸರಿಗೆ 2015ರ ಜನವರಿ 24ರಂದು ಶ್ರೀನಿವಾಸರಾಜು ಅವರ ವಿರುದ್ಧ ದೂರು ನೀಡಿದ್ದರು.

ಇದನ್ನು ಆಧರಿಸಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸಂಕೀರ್ಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿದ್ದ ಆರ್‌ ಶ್ರೀನಿವಾಸ ರಾಜು ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ- 1988ರ ಸೆಕ್ಷನ್‌ಗಳಾದ 7, 13(1)(ಡಿ) ಜೊತೆಗೆ ಸೆಕ್ಷನ್‌ 13(2)ರ ಅಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Also Read
ಪ್ರೇಮ್‌ಜಿ, ಪತ್ನಿ ಹಾಗೂ ಟ್ರಸ್ಟ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ದೂರಿನ ಹಿನ್ನೆಲೆಯಲ್ಲಿ ಶ್ರೀನಿವಾಸ ರಾಜು ಅವರನ್ನು ಬಲೆಗೆ ಕೆಡವಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಮಾಹಿತಿದಾರರ ಜೊತೆ ಸ್ಥಳಕ್ಕೆ ತೆರಳಿದ್ದರು. ಮಾಹಿತಿದಾರ ತಮ್ಮ ಕೆಲಸದ ಹಿನ್ನೆಲೆಯಲ್ಲಿ ಶ್ರೀನಿವಾಸ ರಾಜು ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ 10,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶ್ರೀನಿವಾಸ ರಾಜು ಅವರನ್ನು ಪೂರ್ವನಿಗದಿತ ಯೋಜನೆಯಂತೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆರೋಪಿ ಶ್ರೀನಿವಾಸ ರಾಜು ಅವರಿಂದ 10,000 ರೂಪಾಯಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಯನ್ನು ರಾಸಾಯನಿಕಗಳಿಂದ ಕೈ ತೊಳೆಯುವ ಪರೀಕ್ಷೆಗೆ (ಕೆಮಿಕಲ್‌ ವಾಷ್‌ ಟೆಸ್ಟ್‌) ಒಳಪಡಿಸಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದರ ಬೆನ್ನಿಗೇ, ಆರೋಪಿ ಶ್ರೀನಿವಾಸ ರಾಜು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಸಮರ್ಥನೆಗೆ 81 ತೀರ್ಪುಗಳ ಉಲ್ಲೇಖ

ಆರೋಪಿ ಶ್ರೀನಿವಾಸ ರಾಜು ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಅಧೀನ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ವರೆಗೆ ವಿವಿಧ ಒಟ್ಟು 81 ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆದರೆ, ಇವ್ಯಾವು ಅವರನ್ನು ಶಿಕ್ಷೆಯಿಂದ ಪಾರು ಮಾಡಲಿಲ್ಲ.

Attachment
PDF
SPP Versus ACB.pdf
Preview

Related Stories

No stories found.
Kannada Bar & Bench
kannada.barandbench.com