ಜೆರೋಸಾ ಶಾಲೆ ಪ್ರಕರಣ ವೈಜ್ಞಾನಿಕ ತನಿಖೆ ಆಧರಿಸಿದೆ ಎಂದ ನ್ಯಾಯಾಲಯ: ಶಾಸಕರಾದ ಕಾಮತ್‌, ಶೆಟ್ಟಿ ಸೇರಿ ಐವರಿಗೆ ಜಾಮೀನು

ಚರ್ಚೆಯ ಭಾಗವಾಗಿ ವೈರಲ್‌ ಆಗಿರುವ ಆಡಿಯೊ ಸಂದೇಶವನ್ನು ಪರಿಗಣಿಸಿದರೆ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ.
Bengaluru City Civil Court and MLAs Vedavyas Kamath and Dr. Y Bharath Shetty
Bengaluru City Civil Court and MLAs Vedavyas Kamath and Dr. Y Bharath Shetty

ಮಂಗಳೂರಿನ ಸೇಂಟ್‌ ಜೆರೋಸಾ ಪ್ರೌಢಶಾಲೆಯ ಇಡೀ ಪ್ರಕರಣವು ವೈಜ್ಞಾನಿಕ ತನಿಖೆಯನ್ನು ಆಧರಿಸಿರುವುದು ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಶಾಸಕರಾದ ವೇದವ್ಯಾಸ್‌ ಕಾಮತ್‌ ಮತ್ತು ಡಾ. ವೈ ಭರತ್‌ ಶೆಟ್ಟಿ ಸೇರಿ ಐವರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿ ಬುಧವಾರ ಆದೇಶಿಸಿದೆ. ಸಾಮಾನ್ಯ ಜಾಮೀನು ಅರ್ಜಿ ನಿರ್ಧಾರವಾಗುವವರಿಗೆ ಅರ್ಜಿದಾರರಿಗೆ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿತ್ತು.

ಆರೋಪಿಗಳಾಗಿರುವ ಶಾಸಕರಾದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕಾಮತ್‌, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ಹಾಗೂ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್‌ ಕುಮಾರ್‌ ಅಲಿಯಾಸ್‌ ಶರಣ್‌ ಪಂಪ್‌ವೆಲ್‌, ಸಂದೀಪ್‌ ಮತ್ತು ಭರತ್‌ ಕುಮಾರ್‌ ಅವರಿಗೆ ವಿಶೇಷ ಜನಪ್ರತಿನಿಧಿಗಳ (ಸತ್ರ) ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ವಾಟ್ಸಾಪ್‌ನಲ್ಲಿ ವೈರಲ್‌ ಆಗಿರುವ ಆಡಿಯೊ ಸಂದೇಶಗಳನ್ನು ಆಧರಿಸಿ ದೂರು ದಾಖಲಿಸಲಾಗಿದೆ. ಆಡಿಯೊ ಸಂದೇಶವನ್ನು ಯಾರು ಪ್ರಕಟಿಸಿದ್ದಾರೆ ಅಥವಾ ಹಂಚಿಕೆ ಮಾಡಿದ್ದಾರೆ ಎಂಬುದನ್ನು ತನಿಖೆಯ ಸಂದರ್ಭದಲ್ಲಿ ತಿಳಿಯಬೇಕಿದೆ. ಈ ಆಡಿಯೊದಲ್ಲಿ ಶಾಲೆಯ ಆವರಣದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಿಸಲು ಪ್ರಚೋದನೆ ನೀಡಲಾಗಿದೆ. ಪ್ರಾಸಿಕ್ಯೂಷನ್‌ನ ಇಡೀ ಪ್ರಕರಣವು ಎಲೆಕ್ಟ್ರಾನಿಕ್‌ ಸಾಕ್ಷ್ಯ ಅವಲಂಬಿಸಿದ್ದು, ದೂರುದಾರ ಅನಿಲ್‌ ಜೆರಾಲ್ಡ್‌ ಲೋಬೊ ಅವರೂ ಅದನ್ನೇ ಆಧರಿಸಿದ್ದಾರೆ. ಚರ್ಚೆಯ ಭಾಗವಾಗಿ ವೈರಲ್‌ ಆಗಿರುವ ಆಡಿಯೊ ಸಂದೇಶವನ್ನು ಪರಿಗಣಿಸಿದರೆ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯ ಕಾಣುತ್ತಿಲ್ಲ. ಏಕೆಂದರೆ ಇಡೀ ಪ್ರಕರಣ ವೈಜ್ಞಾನಿಕ ತನಿಖೆ ಆಧರಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಜನರಿಗೆ ಪ್ರಚೋದನೆ ನೀಡುವ ಮೂಲಕ ಶಾಲೆಯ ಆವರಣದಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಗೆ ಅರ್ಜಿದಾರರು ಕಾರಣ ಅಥವಾ ಶಿಕ್ಷಕಿ ಸಿಸ್ಟರ್‌ ಪ್ರಭಾ ಅವರಿಗೆ ಬೆದರಿಕೆ ಅಥವಾ ಶಿಕ್ಷಕಿಯ ತಪ್ಪಿಲ್ಲದಿದ್ದೂ ಆಕೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿಯನ್ನು ಅರ್ಜಿದಾರರು ಒತ್ತಾಯಿಸಿದ್ದಾರೆ ಎಂಬುದನ್ನು ಗುರುತಿಸದೇ ಇರುವಾಗ ಅರ್ಜಿದಾರರಿಗೆ ಜಾಮೀನು ನಿರಾಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರಿಗೆ ಜಾಮೀನು ನೀಡುವುದರಿಂದ ಸ್ಥಳೀಯವಾಗಿ ಅವರು ಕೋಮಗಲಭೆಗೆ ಪ್ರಚೋದನೆ ನೀಡಬಹುದು ಎಂಬ ಏಕೈಕ ಆತಂಕವನ್ನು ಪ್ರಾಸಿಕ್ಯೂಷನ್‌ ವ್ಯಕ್ತಪಡಿಸಿದೆ. ಇದಕ್ಕೆ ಷರತ್ತುಗಳನ್ನು ವಿಧಿಸಿ ಅವರಿಗೆ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ, ಅರ್ಜಿದಾರರು ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಅಥವಾ ಆಮಿಷ ಒಡ್ಡಬಾರದು. ಇಂಥದ್ದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅರ್ಜಿದಾರರ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

Also Read
ಜೆರೋಸಾ ಶಾಲೆ ಪ್ರಕರಣ: ಬಿಜೆಪಿ ಶಾಸಕರಾದ ವೇದವ್ಯಾಸ್‌ ಕಾಮತ್‌, ಭರತ್‌ ಶೆಟ್ಟಿ ಸೇರಿ ಐವರಿಗೆ ಮಧ್ಯಂತರ ಜಾಮೀನು

ಪ್ರಕರಣದ ಹಿನ್ನೆಲೆ: 2024ರ ಫೆಬ್ರವರಿ 12ರಂದು ಸೇಂಟ್‌ ಜೆರೋಸಾ ಪ್ರೌಢಶಾಲೆಯ ಸಿಸ್ಟರ್‌ ಪ್ರಭಾ ಎಂಬ ಶಿಕ್ಷಕಿ ಅವರು ರವೀಂದ್ರನಾಥ್‌ ಟ್ಯಾಗೋರ್‌ ಅವರು ರಚಿಸಿರುವ 'ವರ್ಕ್‌ ಈಸ್‌ ವರ್ಷಿಪ್‌' (ಕಾಯಕವೇ ಕೈಲಾಸ) ವಿಷಯ ಬೋಧಿಸುವಾಗ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆಡಿಯೊ ಸಂದೇಶ ವೈರಲ್‌ ಆಗಿದ್ದು, ಅದಕ್ಕೆ ಆಕ್ಷೇಪಿಸಿ ಪ್ರತಿಭಟನೆ ನಡೆಸಲಾಗಿತ್ತು.

ಶಾಸಕರಾದ ವೇದವ್ಯಾಸ್‌ ಕಾಮತ್‌ ಮತ್ತು ಭರತ್‌ ಶೆಟ್ಟಿ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್‌ ಪಂಪ್‌ವೆಲ್‌, ಸಂದೀಪ್‌ ಮತ್ತು ಭರತ್‌ ಕುಮಾರ್‌ ಅವರು ಜನರನ್ನು ಉದ್ರೇಕಿಸಿ ಶಾಲೆಯ ಮುಂದೆ ಬಿಗುವಿನ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ತಮ್ಮ ಸ್ಥಾನ ಘನತೆ ಮರೆತು ಆರೋಪಿಗಳು ನಡೆದುಕೊಂಡಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನಿಲ್‌ ಜೆರಾಲ್ಡ್‌ ಲೋಬೊ ಅವರು ಫೆಬ್ರವರಿ 14ರಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 149, 153A, 295A, 505(2) ಮತ್ತು 506 ಅಡಿ ಪ್ರಕರಣ ದಾಖಲಿಸಲಾಗಿದೆ.

Attachment
PDF
Vedavyas Kamath and others Vs State of Karnataka Bail order.pdf
Preview

Related Stories

No stories found.
Kannada Bar & Bench
kannada.barandbench.com