
ಸರ್ಕಾರದ ಅತ್ಯಗತ್ಯ ಕಾರ್ಯವನ್ನು ನಿರ್ವಹಿಸುವುದರಿಂದ ಭ್ರಷ್ಟಾಚಾರ ತಡೆ (ಪಿಸಿ) ಕಾಯಿದೆಯಡಿ ವ್ಯಾಖ್ಯಾನಿಸಲಾದ ಸ್ಟಾಂಪ್ ಮಾರಾಟಗಾರರು ಸಹ ಸಾರ್ವಜನಿಕ ಸೇವಕರು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಅಮನ್ ಭಾಟಿಯಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿಯಲ್ಲಿ 'ಸಾರ್ವಜನಿಕ ಸೇವಕ' ಎಂಬ ಪದದ ವ್ಯಾಖ್ಯಾನಕ್ಕೆ, ಕಾಯಿದೆಗೆ ಆಧಾರವಾಗಿರುವ ಉದ್ದೇಶವನ್ನು ಈಡೇರಿಸಲು ಉದ್ದೇಶಪೂರ್ವಕ ಮತ್ತು ವಿಶಾಲವಾದ ವ್ಯಾಖ್ಯಾನ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.
"ದೇಶದ ಎಲ್ಲಾ ಸ್ಟಾಂಪ್ ಮಾರಾಟಗಾರರು, ಪ್ರಮುಖ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವ ಮತ್ತು ಅಂತಹ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಸರ್ಕಾರದಿಂದ ಸಂಭಾವನೆ ಪಡೆಯುವ ಕಾರಣದಿಂದಾಗಿ, ನಿಸ್ಸಂದೇಹವಾಗಿ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 2(ಸಿ)(i) ವ್ಯಾಪ್ತಿಯಲ್ಲಿ ಸಾರ್ವಜನಿಕ ಸೇವಕರಾಗಿರುತ್ತಾರೆ " ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಯಾವುದೇ ಸಾರ್ವಜನಿಕ ಕರ್ತವ್ಯದ ನಿರ್ವಹಣೆಗಾಗಿ ಸರ್ಕಾರದಿಂದ ಸಂಭಾವನೆ ಪಡೆಯುವ ಯಾವುದೇ ವ್ಯಕ್ತಿ ಅಥವಾ ಯಾವುದೇ ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಅಧಿಕಾರ ಹೊಂದಿರುವ ಅಥವಾ ಅಗತ್ಯವಿರುವ ಹುದ್ದೆ ಹೊಂದಿರುವ ಯಾವುದೇ ವ್ಯಕ್ತಿ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 2(ಸಿ) ಅಡಿಯ ವ್ಯಾಖ್ಯಾನದ ಅರ್ಥದಲ್ಲಿ 'ಸಾರ್ವಜನಿಕ ಸೇವಕ' ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 2(ಸಿ)(i) ಅಡಿಯಲ್ಲಿ 'ಸಾರ್ವಜನಿಕ ಸೇವಕ' ಎಂಬ ಪದದ ವ್ಯಾಖ್ಯಾನ ಮೂರು ವಿಧದ ಜನರನ್ನು ಒಳಗೊಂಡಿದೆ - ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ, ಸರ್ಕಾರದಿಂದ ವೇತನ ಪಡೆಯುವ ವ್ಯಕ್ತಿ ಮತ್ತು ಯಾವುದೇ ಸರ್ಕಾರಿ ಕರ್ತವ್ಯದ ನಿರ್ವಹಣೆಗಾಗಿ ಶುಲ್ಕ ಅಥವಾ ಆಯೋಗದ ಮೂಲಕ ಸಂಭಾವನೆ ಪಡೆಯುವ ವ್ಯಕ್ತಿ.
ಒಬ್ಬ ವ್ಯಕ್ತಿ ಸಾರ್ವಜನಿಕ ಸೇವಕನಾಗಲು ಅರ್ಹನೇ ಎಂಬುದನ್ನು ನಿರ್ಧರಿಸುವಲ್ಲಿ ಕರ್ತವ್ಯದ ಸ್ವರೂಪ ನಿರ್ಣಾಯಕ ಅಂಶವಾಗುತ್ತದೆಯೇ ಹೊರತು ನೇಮಕಾತಿ ವಿಧಾನ ಅಥವಾ ಸಂಭಾವನೆಯ ವಿಧಾನವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಕೆಲ ನಿರ್ದಿಷ್ಟ ದಾಖಲೆಗಳಿಗೆ ಸ್ಟಾಂಪ್ ಸುಂಕ ವಿಧಿಸುವ ಮೂಲಕ ಸರ್ಕಾರಕ್ಕೆ ಆದಾಯ ತಂದುಕೊಡುವ ಪ್ರಾಮುಖ್ಯತೆಯನ್ನು ಪರಿಗಣಿಸಿದ ನ್ಯಾಯಾಲಯ ಸ್ಟಾಂಪ್ ಮಾರಾಟಗಾರರು ಸರ್ಕಾರದ ಪರವಾಗಿ ಅತ್ಯಗತ್ಯ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತೀರ್ಮಾನಿಸಿತು.
ದಶಕಗಳ ಹಿಂದಿನ ಅಂದರೆ 2003ರ ಭ್ರಷ್ಟಾಚಾರ ಪ್ರಕರಣದಲ್ಲಿ ಸ್ಟಾಂಪ್ ಮಾರಾಟಗಾರ ಅಮನ್ ಭಾಟಿಯಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪರವಾನಗಿ ಪಡೆದ ಮಾರಾಟಗಾರರಾಗಿರುವ ಭಾಟಿಯಾ ₹10ರ ಸ್ಟಾಂಪ್‌ಗೆ ₹12 ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಆರೋಪ ಕೇಳಿಬಂದಿತ್ತು.
2013ರಲ್ಲಿ, ಆರೋಪಿ ಅಮನ್ ಭಾಟಿಯಾ ತಪ್ಪಿತಸ್ಥ ಎಂದು ಘೋಷಿಸಿ ಆರು ತಿಂಗಳ ಅವಧಿಗೆ ಅವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಹೈಕೋರ್ಟ್ ಭಾಟಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಉದ್ದೇಶಗಳಿಗಾಗಿ ಸ್ಟಾಂಪ್ ಮಾರಾಟಗಾರ ಸಾರ್ವಜನಿಕ ಸೇವಕ ಎಂದು ಅದು ತೀರ್ಪು ನೀಡಿತ್ತು.
ಸರ್ಕಾರ ಮತ್ತು ಸಾರ್ವಜನಿಕರಿಗೆ ಆಸಕ್ತಿಯಿರುವ ಕರ್ತವ್ಯವನ್ನು ಭಾಟಿಯಾ ನಿರ್ವಹಿಸುತ್ತಿರುವುದರಿಂದ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ವ್ಯಾಖ್ಯಾನಿಸಲಾದ ಸಾರ್ವಜನಿಕ ಸೇವಕರ ವ್ಯಾಖ್ಯಾನದ ವ್ಯಾಪ್ತಿಗೆ ಅವರು ಬರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ ಆರೋಪಿಯಿಂದ ಲಂಚದ ಬೇಡಿಕೆ ಇತ್ತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ಭಾಟಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ಅವರಿಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]