ಪರಿಶಿಷ್ಟ ಜಾತಿ ಪಟ್ಟಿ ಬದಲಾವಣೆಗೆ ರಾಜ್ಯಕ್ಕೆ ಅಧಿಕಾರವಿಲ್ಲ: ಬಿಹಾರ ಸರ್ಕಾರದ ಕಿವಿಹಿಂಡಿದ ಸುಪ್ರೀಂ

ಸಂವಿಧಾನದ 341ನೇ ವಿಧಿಯಡಿ ಪ್ರಕಟಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ.
Supreme Court
Supreme Court
Published on

ಅತ್ಯಂತ ಹಿಂದುಳಿದ ವರ್ಗಗಳ ಪಟ್ಟಿಯಿಂದ ತಂತಿ ತತ್ವ ಸಮುದಾಯವನ್ನು ತೆಗೆದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಪನ್‌/ಸವಾಸಿ ಜಾತಿಯೊಂದಿಗೆ ವಿಲೀನಗೊಳಿಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ [ಡಾ. ಭೀಮ್ ರಾವ್ ಅಂಬೇಡ್ಕರ್ ವಿಚಾರ್ ಮಂಚ್ ಬಿಹಾರ್, ಪಾಟ್ನಾ ಇನ್ನಿತರರು ಮತ್ತು ಬಿಹಾರ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಸಂವಿಧಾನದ 341ನೇ ವಿಧಿಯಡಿ ಪ್ರಕಟಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಬಿಹಾರ ಸರ್ಕಾರದ ಕಿವಿಹಿಂಡಿದೆ.  

Also Read
ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ಮೀಸಲಾತಿ ಶೇ.65ಕ್ಕೆ ಹೆಚ್ಚಿಸುವ ಬಿಹಾರ ಕಾಯಿದೆ ರದ್ದುಪಡಿಸಿದ ಪಾಟ್ನಾ ಹೈಕೋರ್ಟ್

ರಾಜ್ಯ ಹಿಂದುಳಿದ ಆಯೋಗದ ಶಿಫಾರಸಿನ ಮೇರೆಗೆ ತಂತಿ ತಂತ್ವಾ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದಿದ್ದಾಗಿ ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳಬಹುದು. ಇದರ ಹಿಂದೆ ಉತ್ತಮ, ಕೆಟ್ಟ ಅಥವಾ ಇನ್ನಾವುದೇ ಕಾರಣಗಳನ್ನು ರಾಜ್ಯ ಸರ್ಕಾರ ಆ ಸಂದರ್ಭದಲ್ಲಿ ಹೊಂದಿದ್ದರೂ 'ಪನ್, ಸವಾಸಿ, ಪನ್ರ್' ಸಮುದಾಯದೊಂದಿಗೆ ತಂತಿ ತಂತ್ವಾವನ್ನು ವಿಲೀನಗೊಳಿಸುವ ಕ್ರಮ ಯಾವುದೇ ದುರಾಚಾರಕ್ಕಿಂತ ಕಡಿಮೆಯಲ್ಲ. ಹೋಲಿಕೆ ಇರಲಿ ಇಲ್ಲದೇ ಇರಲಿ ಯಾವುದೇ ಜಾತಿ ಜನಾಂಗ ಅಥವಾ ಬುಡಕಟ್ಟುಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುವ ಇಲ್ಲವೇ ಹೊರಗಿಡುವ ಕ್ರಿಯೆ ಸಂಸತ್ತಿನ ಕಾಯಿದೆಯ ಮೂಲಕವೇ ನಡೆಯಬೇಕೆ ವಿನಾ ಬೇರಾವುದೇ ವಿಧಾನದಿಂದ ಅಲ್ಲ ಎಂದು ನ್ಯಾಯಾಲಯ ಸೋಮವಾರ ನೀಡಿದ ತೀರ್ಪಿನಲ್ಲಿ ಖಚಿತವಾಗಿ ತಿಳಿಸಿದೆ.

Also Read
ಮೀಸಲಾತಿ ಹೆಚ್ಚಳ ರದ್ದು: ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಬಿಹಾರ ಸರ್ಕಾರ

ಈ ಹಿಂದೆ  ಅತ್ಯಂತ ಹಿಂದುಳಿದ ವರ್ಗ ಎಂದು ಗುರುತಿಸಲಾಗಿದ್ದ ತಂತಿ ತತ್ವ ಸಮುದಾಯವನ್ನು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಜುಲೈ 1, 2015ರಂದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಬಿಹಾರ ಸರ್ಕಾರ ಅಂಗೀಕರಿಸಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸನ್ನು ಆಧರಿಸಿ ಹೀಗೆ ಮಾಡಲಾಗಿತ್ತು. ನಿರ್ಧಾರವನ್ನು ಪಾಟ್ನಾ ಹೈಕೋರ್ಟ್ 2017 ರಲ್ಲಿ ಎತ್ತಿ ಹಿಡಿದಿತ್ತು. ಹೈಕೋರ್ಟ್‌ ನಿರ್ಧಾರವನ್ನು ಎರಡು ಮೇಲ್ಮನವಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ತಂತಿ ತಂತ್ವಾ ಮತ್ತು ಪನ್‌- ಸವಾಸಿ ಸಮುದಾಯಗಳೆರಡನೂ ಸಮನಾಗಿ ಪರಿಗಣಿಸಬೇಕು ಎಂಬ ರಾಜ್ಯ ಸರ್ಕಾರದ  ವಾದವನ್ನು ಒಪ್ಪದ ಸುಪ್ರೀಂ ಕೋರ್ಟ್‌ ಹಾಗೆ ಪರಿಶಿಷ್ಟ ಜಾತಿ ಪಟ್ಟಿಗೆ ಯಾವುದೇ ಸಮುದಾಯವನ್ನು ಸೇರಿಸಬೇಕಾದರೂ ಸಂಸತ್ತಿನ ಕಾಯಿದೆಯ ಮೂಲಕವೇ ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 2015ರಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಅದು ಬದಿಗೆ ಸರಿಸಿದೆ.  

Kannada Bar & Bench
kannada.barandbench.com