ಮತ ಗಿಟ್ಟಿಸಲು ಸರ್ಕಾರದಿಂದ ಜಾತಿಯಾಧಾರಿತ ನಿಗಮ ಸೃಷ್ಟಿ: ಕರ್ನಾಟಕ ಹೈಕೋರ್ಟ್‌ನಲ್ಲಿ ರವಿವರ್ಮ ಕುಮಾರ್‌ ವಾದ ಮಂಡನೆ

ನಿರ್ದಿಷ್ಟ ಜಾತಿ, ಸಮುದಾಯ ಅಥವಾ ಧರ್ಮಗಳನ್ನು ಕೇಂದ್ರವಾಗಿಟ್ಟುಕೊಂಡು ಅವುಗಳ ಶ್ರೇಯೋಭಿವೃದ್ಧಿಗಾಗಿ ಸೃಷ್ಟಿಸಲಾಗಿರುವ ನಿಗಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿ ವಿಚಾರಣೆಯನ್ನು ಪೀಠ ನಡೆಸಿತು.
Karnataka High Court
Karnataka High Court

ಉಪಚುನಾವಣೆಗಳಲ್ಲಿ ಮತ ಸೆಳೆಯುವ ದೃಷ್ಟಿಯಿಂದ ಜಾತಿಯಾಧಾರಿತ ನಿಗಮಗಳ ಸೃಷ್ಟಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ರವಿವರ್ಮ ಕುಮಾರ್‌ ಸೋಮವಾರ ಬಲವಾಗಿ ಪ್ರತಿಪಾದಿಸಿದ್ದಾರೆ.

ನಿರ್ದಿಷ್ಟ ಜಾತಿ, ಸಮುದಾಯ ಅಥವಾ ಧರ್ಮಗಳನ್ನು ಕೇಂದ್ರವಾಗಿಟ್ಟುಕೊಂಡು ಅವುಗಳ ಶ್ರೇಯೋಭಿವೃದ್ಧಿಗಾಗಿ ಸೃಷ್ಟಿಸಲಾಗಿರುವ ನಿಗಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

CJI  A S Oka & Justice S S Magadum
CJI A S Oka & Justice S S Magadum

ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆ ರವಿವರ್ಮ ಕುಮಾರ್‌ ಅವರು ಮಧ್ಯಂತರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು. ಅಲ್ಲದೇ ನಾಲ್ಕು ಅವಕಾಶಗಳನ್ನು ಕಲ್ಪಿಸಿದರೂ ರಾಜ್ಯ ಸರ್ಕಾರವು ತನ್ನ ತಕರಾರು ಸಲ್ಲಿಸಿಲ್ಲ ಎಂದು ರವಿವರ್ಮ ಕುಮಾರ್‌ ವಾದಿಸಿದರು.

2007ರಲ್ಲಿ ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಅರ್ಜಿದಾರರಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹೇಳಿದರು. ನಿಗಮಗಳು ಮಾಡಿರುವ ಕೆಲಸದಿಂದ ಹಲವು ಸಮುದಾಯಗಳು ಸುಸ್ಥಿತಿಗೆ ಬಂದಿವೆ ಎಂದು ಹೇಳಿದ ನಾವದಗಿ ಅವರು ತಕರಾರು ಸಲ್ಲಿಸಲು ಹೆಚ್ಚುವರಿ ಸಮಯ ನೀಡುವಂತೆ ನ್ಯಾಯಾಲಯಕ್ಕೆ ಕೋರಿದರು.

ಸೂಚಿಸಲ್ಪಟ್ಟ ನಿಗಮ ಮತ್ತು ಮಂಡಳಿಗಳು ಕೈಗೊಂಡಿರುವ ಕ್ರಮಗಳು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಹಿಂದಿನ ಆದೇಶದಲ್ಲಿ ಪೀಠ ಹೇಳಿದೆ. ನಿರ್ದಿಷ್ಟ ಜಾತಿಗಳು, ಸಮುದಾಯ ಅಥವಾ ಧರ್ಮದ ಶ್ರೇಯೋಭಿವೃದ್ಧಿಗಾಗಿ ಮಂಡಳಿ ಮತ್ತು ನಿಗಮ ಸ್ಥಾಪಿಸುವ, ಆಡಳಿತ ನಿರ್ವಹಿಸುವ ಮತ್ತು ಅವುಗಳಿಗೆ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ನೀತಿ ಮತ್ತು ನಿರ್ಧಾರಗಳ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಮೊದಲಿಗೆ ಮನವಿ ಸಲ್ಲಿಸಿತ್ತು.

Also Read
ವಿಸ್ತೃತ ನ್ಯಾಯಪೀಠಕ್ಕೆ ಮರಾಠಾ ಮೀಸಲಾತಿ ಪ್ರಕರಣ; ಮರಾಠಾ ಕೋಟಾದಡಿ ಸದ್ಯಕ್ಕಿಲ್ಲ ಉದ್ಯೋಗ, ಪ್ರವೇಶಾತಿ

ಮರಾಠಾ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಆರ್ಯವೈಶ್ಯ ಅಭಿವೃದ್ಧಿ ನಿಗಮ ಆರಂಭವನ್ನು ಪ್ರಶ್ನಿಸಿ ಪ್ರಮುಖವಾಗಿ ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿತ್ತು. ಕಾನೂನು ಮತ್ತು ಸಾಂವಿಧಾನಿಕ ಮೌಲ್ಯ, ಜಾತ್ಯತೀತತೆ, ಸಮಾನತೆ ಮತ್ತು ತಾರತಮ್ಯ ನೀತಿಗೆ ವಿರುದ್ಧವಾಗಿ ರಾಜ್ಯ ಸರ್ಕಾರವು ಅತ್ಯಂತ ಮುಂದುವರಿದ ಮತ್ತು ಶಕ್ತಿಯುತ ಜಾತಿಗಳಿಗೆ ಪ್ರಾಧಾನ್ಯತೆ ನೀಡುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈಚೆಗೆ ಮುಗಿದ ಶಿರಾ, ಇನ್ನಷ್ಟೇ ನಡೆಯಬೇಕಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನವಾಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ನಿಗಮ ಮತ್ತು ಮಂಡಳಿಗಳನ್ನು ಸ್ಥಾಪಿಸಲಾಗಿದೆ ಎಂದು ಮನವಿಯಲ್ಲಿ ವಾದಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮವು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಅರ್ಜಿದಾರರು ಹೇಳಿದ್ದಾರೆ.

ಇದೇ ವಿಷಯದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿರುವ ಮತ್ತೊಂದು ಮನವಿಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನು ಪ್ರಶ್ನಿಸಲಾಗಿದೆ. ಪ್ರತಿವಾದಿಯಾಗಿ ನ್ಯಾಯಾಲಯದಲ್ಲಿ ಹಾಜರಾದ ವಕೀಲ ಎಸ್‌ ಬಸವರಾಜ್‌ ಅವರು ರಾಜ್ಯದಲ್ಲಿ ಶಾಶ್ವತವಾಗಿ ಅಸಾಂವಿಧಾನಿಕ ಸಂಸ್ಥೆ ಸೃಷ್ಟಿಸುವುದನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು. ಮಾರ್ಚ್‌ 17ಕ್ಕೆ ವಿಚಾರಣೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com