

ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿದಿರುವುದನ್ನು ಎಲ್ಲಾ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ) ಗಮನಕ್ಕೆ ತಂದಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಮುಂದಿನ ಪ್ರಕ್ರಿಯೆ ಆರಂಭಿಸುವುದು ಎಸ್‌ಇಸಿಗೆ ಬಿಟ್ಟ ವಿಚಾರ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.
ಈ ಬೆಳೆವಣಿಗೆಯ ಹಿನ್ನೆಲೆಯಲ್ಲಿ ಹಳ್ಳಿ ಫೈಟ್‌ಗೆ ಶೀಘ್ರವಾಗಿ ಮುಹೂರ್ತ ನಿಗದಿಯಾಗುವ ಸಾಧ್ಯತೆ ದಟ್ಟವಾಗಿದೆ.
ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ವಾಡ್೯ಗಳ ಸಂಖ್ಯೆ ಮತ್ತು ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಗ್ರಾಮ ಪಂಚಾಯಿತಿಗಳಿಗೆ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲಾಗಿದೆ. ಮುಂದಿನ ಕ್ರಮಕೈಗೊಳ್ಳುವುದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಎಲ್ಲಾ ಪ್ರಕ್ರಿಯೆ ಮುಗಿದಿದೆ. ಈ ಸಂಬಂಧ 8.9.2026ರಂದು ಅಫಿಡವಿಟ್ ಅನ್ನೂ ಸಲ್ಲಿಸಲಾಗಿದೆ. ಮೀಸಲಾತಿ ನಿಗದಿಪಡಿಸಿರುವುದರಿಂದ ಅರ್ಜಿಯು ಈಗ ಅಸಿಂಧುವಾಗಿದೆ” ಎಂದರು.
ಆಗ ಪೀಠವು “ಅಗತ್ಯವಾದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದರಿಂದ ಅರ್ಜಿ ಅಸಿಂಧುವಾಗಿದೆ. ಈಗ ಮುಂದಿನ ಅಗತ್ಯ ಕ್ರಮಕೈಗೊಳ್ಳುವುದು ರಾಜ್ಯ ಚುನಾವಣಾ ಆಯೋಗದ ಕೆಲಸ” ಎಂದಿತು. ಅಲ್ಲದೇ, ಎಎಜಿ ಹೇಳಿಕೆಯನ್ನು ದಾಖಲಿಸಿಕೊಂಡು ಆಯೋಗದ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿತು.
ಇದೇ ವೇಳೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ದೇಶನದ ಪ್ರಕಾರ ಇಂದು ಕರಡು ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದೆ. ಹೀಗಾಗಿ, 10 ದಿನಗಳ ಬಳಿಕ ಕಾಲಾವಕಾಶ ನೀಡಿದರೆ ಈ ಸಂಬಂಧ ದಾಖಲೆಯನ್ನು ಹಾಜರುಪಡಿಸಲಾಗುವುದು ಎಂದು ಎಎಜಿ ಪ್ರತಿಮಾ ನ್ಯಾಯಾಲಯವನ್ನು ಕೋರಿದರು.
ಇದನ್ನು ಪುರಸ್ಕರಿಸಿದ ಪೀಠವು ಪೀಠವು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿತು.