ಮಾಸಿಕ ₹ 150 ವೇತನದ ಹುದ್ದೆ: ಮಾನವ ಶ್ರಮದ ಶೋಷಣೆ, ಹಕ್ಕುಗಳ ಉಲ್ಲಂಘನೆ ಎಂದು ಉ.ಪ್ರ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ

ಅತ್ಯಂತ ನಿಕೃಷ್ಟವಾಗಿ ಕಡಿಮೆ ದರದಲ್ಲಿ ಉತ್ತರ ಪ್ರದೇಶ ಸರ್ಕಾರ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸರ್ಕಾರದ ಕಿವಿ ಹಿಂಡಿದ ನ್ಯಾಯಾಲಯ.
Allahabad High Court, Lucknow Bench
Allahabad High Court, Lucknow Bench

ಮಾಸಿಕ ₹ 150 ವೇತನ ನೀಡಿ ಕಾವಲುಗಾರನನ್ನು ನೇಮಿಸಿಕೊಳ್ಳುವುದು ಶೋಷಣೆಯಾಗಿದ್ದು, ಬಲವಂತದ ದುಡಿಸಿಕೊಳ್ಳುವುದಕ್ಕೆ ಸಮ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಛೀಮಾರಿ ಹಾಕಿದೆ [ಅಮರ್‌ ಸಿಂಗ್‌ ಮತ್ತು ಸರ್ಕಾರ ನಡುವಣ ಪ್ರಕರಣ].

ಶಾಲೆಯಲ್ಲಿ ಕಾವಲುಗಾರರಾದ ಅರ್ಜಿದಾರರ ಉದ್ಯೋಗದ ಸ್ವರೂಪ, ನಿಯಮಿತತೆ, ಜವಾಬ್ದಾರಿ ಹಾಗೂ ಕೆಲಸದ ಅವಧಿಯನ್ನು ಗಮನಿಸಿದರೆ ಅವರನ್ನು ಸಾಮಾನ್ಯ ಉದ್ಯೋಗಿಗೆ ಹೋಲಿಸಬಹುದು ಎಂದು ನ್ಯಾ. ಇರ್ಷಾದ್‌ ಅಲಿ ಹೇಳಿದರು.

Also Read
ಪೋಕ್ಸೊ ಸಂತ್ರಸ್ತರ ಬೆಂಬಲಿಸುವ ವ್ಯಕ್ತಿಗಳ ಆಯ್ಕೆ, ತರಬೇತಿ, ವೇತನ ಕುರಿತು ನಿಯಮಾವಳಿ ರೂಪಿಸಲು ಸುಪ್ರೀಂ ಮಾರ್ಗಸೂಚಿ

"ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯು ಜೀವನ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲದ, ಅಸ್ತಿತ್ವದಲ್ಲಿಯೇ ಇರಲಾಗದಂತಹ ನಿಕೃಷ್ಟ ಪ್ರಮಾಣದ, ಕಡಿಮೆ ದರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಒತ್ತಾಯಿಸುವುದು ಮಾನವನ ಶ್ರಮದ ಶೋಷಣೆಯಾಗುತ್ತದೆ. ಮೂಲಭೂತ ಹಕ್ಕುಗಳು ಮತ್ತು ಘನತೆಯಿಂದ ಕೆಲಸ ಮಾಡುವ ಹಕ್ಕನ್ನು ಒದಗಿಸುವ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗುತ್ತದೆ. ರಾಜ್ಯ ಸರ್ಕಾರದ ಅಡಿ ತಿಂಗಳಿಗೆ ₹ 150 ಮೊತ್ತದ ವೇತನ ನೀಡುವ ಉದ್ಯೋಗವೆಂದರೆ ಅದು ಕಾನೂನಿನಲ್ಲಿ ಮಾನ್ಯತೆ ಇಲ್ಲದ ಬಲವಂತದ ದುಡಿಮೆಯಾಗುತ್ತದೆ” ಎಂದು ಆದೇಶ ತಿಳಿಸಿದೆ.

ಕಾವಲುಗಾರನಾಗಿ ನೇಮಕವಾಗಿದ್ದ ವ್ಯಕ್ತಿಯೊಬ್ಬರು 2004 ರಲ್ಲಿ ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನ ಅವಲೋಕನಗಳನ್ನು ಮಾಡಿತು. ಡಿಸೆಂಬರ್ 1992 ರಲ್ಲಿ ಅರ್ಜಿದಾರರು ಮಾಸಿಕ ₹ 30 ವೇತನ ಪಡೆಯುತ್ತಿದ್ದರು. ಮರುವರ್ಷ ಅವರು ಅಧಿಕೃತವಾಗಿ ಕಾವಲುಗಾರನಾಗಿ ನೇಮಕಗೊಂಡರು. 1998ರಲ್ಲಿ ಅವರ ವೇತನವನ್ನು ₹ 30 ರಿಂದ ₹ 150 ಕ್ಕೆ ಏರಿಸಲಾಯಿತು. ಅಂದಿನಿಂದ ಅವರು ಅದೇ ಮೊತ್ತ ಪಡೆಯುತ್ತಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿದಾರರ ನೇಮಕಾತಿಯು ಮಾಸಿಕ ಭತ್ಯೆಯ ಮೇಲೆ ನೇಮಿತವಾಗಿದೆಯೇ ಹೊರತು ನಾಲ್ಕನೇ ದರ್ಜೆಯ ಸಿಬ್ಬಂದಿಯಾಗಿ ಅಲ್ಲ. ಅವರು ಅರೆಕಾಲಿಕ ಉದ್ಯೋಗಿಯಾಗಿದ್ದು ಪೂರ್ಣಕಾಲೀನ ಹುದ್ದೆಗೆ ನೀಡುವ ವೇತನ ಶ್ರೇಣಿಯನ್ನು ನೀಡಲಾಗದು ಎಂದು ವಾದಿಸಿದ್ದರು.

ವಾದವನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ, ನಾಲ್ಕನೇ ದರ್ಜೆಯ ಉದ್ಯೋಗಿಗಳಿಗೆ ನೀಡಲಾಗುವ ಕನಿಷ್ಠ ವೇತನ ಶ್ರೇಣಿಗೆ ತತ್ಸಮನಾದ ವೇತನವನ್ನು ಅರ್ಜಿದಾರರಿಗೆ ನೀಡಲು ಸರ್ಕಾರಕ್ಕೆ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com