ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ್‌ ನೇಮಕ

ಅಡ್ವೊಕೇಟ್‌ ಜನರಲ್‌ ಅವರು ಸಂವಿಧಾನದ 162ನೇ ವಿಧಿಯ ಅನ್ವಯ ಟ್ರಸ್ಟಿನ ಸ್ವತ್ತನ್ನು ರಕ್ಷಿಸುವ ದೃಷ್ಟಿಯಿಂದ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಬಹುದು ಎಂದು ಅಭಿಪ್ರಾಯ ನೀಡಿದ್ದಾರೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಚಿತ್ರದುರ್ಗದ ಮುರುಘರಾಜೇಂದ್ರ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರವು ಮಂಗಳವಾರ ಆದೇಶ ಮಾಡಿದೆ.

ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಬಂಧಿತರಾಗಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಸಂಸ್ಥೆಯ ನಿರ್ವಹಣೆ ಹಾಗೂ ದಿನನಿತ್ಯದ ಕಾರ್ಯಚಟುವಟಿಕೆ ಹಾಗೂ ಮೇಲುಸ್ತುವಾರಿ ನಡೆಸಲು ಸಾರ್ವಜನಿಕ ಹಿತದೃಷ್ಟಿಯಿಂದ ಮಠದ ಚರ-ಸ್ಥಿರ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಸಂಸ್ಥೆಯ ಹಣ ದುರುಪಯೋಗವಾಗದಂತೆ ಲೆಕ್ಕಪತ್ರ ನಿರ್ವಹಿಸಲು, ಒಟ್ಟಾರೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸುವ ಹಿತದೃಷ್ಟಿಯಿಂದ ಸಂವಿಧಾನದ 167, 31 (ಎ) ವಿಧಿಯ ಅಡಿ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಶಿವಮೂರ್ತಿ ಮುರುಘಾ ಶರಣರು ಸೆಪ್ಟೆಂಬರ್‌ 1ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಕ್ಟೋಬರ್‌ 22ರಂದು ಚಿತ್ರದುರ್ಗದ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರು ಸಂವಿಧಾನದ 162ನೇ ವಿಧಿಯ ಅನ್ವಯ ಟ್ರಸ್ಟಿನ ಸ್ವತ್ತನ್ನು ರಕ್ಷಿಸುವ ದೃಷ್ಟಿಯಿಂದ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಬಹುದು ಎಂದು ಅಭಿಪ್ರಾಯ ನೀಡಿದ್ದಾರೆ ಎಂದು ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 4ರಂದು ವಾಸ್ತವಿಕ ವರದಿ ಸಲ್ಲಿಸುವಂತೆ ಚಿತ್ರದುರ್ಗದ ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರ ನಿರ್ದೇಶಿಸಿತ್ತು.

ಸರ್ಕಾರದ ನಿರ್ದೇಶನದ ಅನ್ವಯ ವರದಿ ಸಲ್ಲಿಸಿದ್ದ ಜಿಲ್ಲಾಧಿಕಾರಿಯವರು, ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ವಶದಲ್ಲಿರುವುದರಿಂದ ಮಠದ ಒಟ್ಟು ಸ್ಥಿರಾಸ್ತಿ ಮತ್ತು ಹಣಕಾಸು ನಿರ್ವಹಣೆ ನೋಡಿಕೊಳ್ಳುವುದು ಕಷ್ಟವಾಗಿದೆ. ಟ್ರಸ್ಟ್‌ ಸಾರ್ವಜನಿಕ ಆಸ್ತಿಯಾಗಿರುವುದರಿಂದ ಆಸ್ತಿಗಳ ನಿರ್ವಹಣೆಗೆ ತೊಡಕಾಗುತ್ತಿದೆ. ದುರಾಡಳಿತ ಹಾಗೂ ಹಣಕಾಸು ದುರುಪಯೋಗ ಆದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಂಭವ ಇರುತ್ತದೆ. ಶಿವಮೂರ್ತಿ ಮುರುಘಾ ಶರಣರು ಮಠದ ಆಜೀವ ಪೀಠಾಧಿಪತಿ ಹಾಗೂ ವಿದ್ಯಾ ಸಂಸ್ಥೆಗೆ ಆಜೀವ ಅಧ್ಯಕ್ಷರಾಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಮಠದ ಹಾಗೂ ವಿದ್ಯಾ ಸಂಸ್ಥೆಗೆ ಉಂಟಾಗುವ ಅನನುಕೂಲಗಳನ್ನು ತಪ್ಪಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ವಿವರಿಸಿದ್ದರು. ಇದೆಲ್ಲವನ್ನೂ ಪರಿಗಣಿಸಿ ಸರ್ಕಾರವು ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6, 7, ಐಪಿಸಿ ಸೆಕ್ಷನ್‌ಗಳಾದ 376(2), 376 (3), 149 ಅಡಿ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.

Kannada Bar & Bench
kannada.barandbench.com