ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಪರಿಹಾರ ನೀತಿ ರೂಪಿಸಿದ ಸರ್ಕಾರ: ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ಕೈದಿಗಳ ನಡುವಿನ ಹೊಡೆದಾಟದಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬದ ಅಥವಾ ಅವಲಂಬಿತರಿಗೆ ₹7.50 ಲಕ್ಷ ಪಾವತಿ. ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದರೆ ಆ ಕೈದಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
Jail
Jail

ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿಯೊಂದನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ 2017ರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವು ಸರ್ಕಾರದ ಆದೇಶದೊಂದಿಗೆ ಈಡೇರಿರುವುದರಿಂದ ಪಿಐಎಲ್‌ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸರ್ಕಾರದ ನೀತಿಯಲ್ಲಿ ಎರಡು ವಿಭಾಗಗಳಿವೆ. ಕೈದಿಗಳ ನಡುವಿನ ಹೊಡೆದಾಟದಲ್ಲಿ ಕೈದಿ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಅಥವಾ ಅವಲಂಬಿತರಿಗೆ 7.50 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗುವುದು. ಆತ್ಮಹತ್ಯೆ ಸೇರಿದಂತೆ ಅಸಹಜ ಸಾವಿಗೆ ಕೈದಿ ಈಡಾದರೆ ಆ ಕೈದಿಯ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Also Read
ಕೈದಿಗಳ ಅಸಹಜ ಸಾವು ಪ್ರಕರಣ: ಪರಿಹಾರದ ಮೊತ್ತ ಬಿಡುಗಡೆ ಪಟ್ಟಿ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಜೈಲಿನಲ್ಲಿ ಅಸಹಜವಾಗಿ ಸಾವನ್ನಪ್ಪಿದವರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಶಿಫಾರಸ್ಸು ಮಾಡಿದ ಪ್ರಕರಣಗಳಲ್ಲಿ ಮಾತ್ರ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹಿಂದೆ ವಾದಿಸಿತ್ತು. ಈ ವಾದದಿಂದ ಅಂತರ ಕಾಯ್ದುಕೊಂಡಿದ್ದ ನ್ಯಾಯಾಲಯವು ತಾನು ನಿಗದಿಪಡಿಸಿದ ಹಣವವನ್ನು ಪರಿಹಾರದ ರೂಪದಲ್ಲಿ ಪಾವತಿಸಬೇಕೆ ವಿನಾ ಮಾನವ ಹಕ್ಕುಗಳ ಆಯೋಗ ಶಿಫಾರಸ್ಸು ಮಾಡಿದಷ್ಟನ್ನು ಅಲ್ಲ ಎಂದಿತ್ತು. ಈಗ ರಾಜ್ಯ ಸರ್ಕಾರ ನೀತಿ ರೂಪಿಸಿರುವುದರಿಂದ ಹೈಕೋರ್ಟ್‌ ಪಿಐಎಲ್‌ ಇತ್ಯರ್ಥಪಡಿಸಿದೆ.

Related Stories

No stories found.
Kannada Bar & Bench
kannada.barandbench.com