

ಹಾಸನ ಜಿಲ್ಲೆಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಲು ನೇಮಕಗೊಂಡಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್ ಅವರಿಗೆ ₹2.41 ಕೋಟಿ ಸಂಭಾವನೆಯನ್ನು ಪಾವತಿಸಲಾಗಿದೆ ಎನ್ನುವ ಮಾಹಿತಿಯನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರು ಇತ್ತೀಚೆಗೆ ವಿಧಾನಸಭೆಗೆ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಪ್ರತಿ ಹಾಜರಾತಿಗೆ ₹15.50 ಲಕ್ಷ ಸಂಭಾವನೆಯನ್ನು ಸರ್ಕಾರ ನಿಗದಿಪಡಿಸಿರುವ ಮಾಹಿತಿಯನ್ನೂ ಸಹ ಪರಮೇಶ್ವರ್ ಅವರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಒದಗಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ವೇಳೆ ಬಿಜೆಪಿ ಶಾಸಕ ಮುನಿರತ್ನ ವಿಧಾನಸಭೆಯಲ್ಲಿ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಒದಗಿಸಿರುವ ವಿವರವಾದ ಉತ್ತರದಲ್ಲಿ ಮೇಲಿನ ಮಾಹಿತಿಗಳು ತಿಳಿದುಬಂದಿವೆ.
2023ರ ಏಪ್ರಿಲ್ 2ರಿಂದ ಎಷ್ಟು ಎಸ್‌ಐಟಿ ರಚಿಸಲಾಗಿದೆ, ಎಸ್‌ಐಟಿಗಳ ಪರವಾಗಿ ವಿಚಾರಣಾಧೀನ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಎಷ್ಟು ಮಂದಿ ಅಭಿಯೋಜಕರು, ವಿಶೇಷ ಸರ್ಕಾರಿ ಅಭಿಯೋಜಕರು ಮತ್ತು ಹಿರಿಯ ವಕೀಲರನ್ನು ನೇಮಕ ಮಾಡಲಾಗಿದೆ. ಅವರ ಹೆಸರು, ನಿಗದಿಪಡಿಸಿರುವ ಶುಲ್ಕ ಮತ್ತು ಬಾಕಿ ಪಾವತಿಸಬೇಕಿರುವ ಮಾಹಿತಿ, ತನಿಖೆಯ ಸ್ಥಿತಿಗತಿ ಮತ್ತು ಮೂರು ವರ್ಷಗಳಿಂದ ಎಸ್‌ಐಟಿಗೆ ವ್ಯಯಿಸಿರುವ ಮಾಹಿತಿ ಒದಗಿಸುವಂತೆ ಬಿಜೆಪಿ ಶಾಸಕ ಮುನಿರತ್ನ ಅವರು ಗೃಹ ಸಚಿವರನ್ನು ಕೋರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣಗಳ ತನಿಖೆ, ಬಿಟ್‌ಕಾಯಿನ್ ಪ್ರಕರಣ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಮತ್ತು ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಮಹತ್ವದ ಪ್ರಕರಣಗಳ ತನಿಖೆಗೆ ಏಳು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದೆ.
ಇವುಗಳಲ್ಲಿ ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಲು ನೇಮಕಗೊಂಡಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್ ಅವರಿಗೆ ₹2.41 ಕೋಟಿ ಸಂಭಾವನೆಯನ್ನು ಪಾವತಿಸಲಾಗಿದೆ. ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಪ್ರತಿ ಹಾಜರಾತಿಗೆ ₹15.50 ಲಕ್ಷ ಸಂಭಾವನೆಯನ್ನು ಸರ್ಕಾರ ನಿಗದಿಪಡಿಸಿದ್ದು, ಒಂದು ಹಾಜರಿಗೆ 15.50 ಲಕ್ಷ ಪಾವತಿಸಿದೆ.
ಪ್ರಜ್ವಲ್ ಭಾಗಿಯಾಗಿರುವ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಪ್ರೊ. ರವಿವರ್ಮ ಕುಮಾರ್ ಮತ್ತು ಬಿ ಎನ್ ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ. ಜಗದೀಶ್ ಅವರಿಗೆ ₹28,37,500 ಸಂಭಾವನೆ ಪಾವತಿಸಲಾಗಿದೆ.
ಇದೇ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರನ್ನಾಗಿ ಬಿ ಎನ್ ಜಗದೀಶ್ ಮತ್ತು ಅಶೋಕ್ ನಾಯಕ್ ಅವರನ್ನು ನೇಮಿಸಲಾಗಿದ್ದು, ಅವರಿಗೆ ₹12.70 ಲಕ್ಷ ಸಂಭಾವನೆ ಪಾವತಿಸಲಾಗಿದೆ.
ಪ್ರೊ. ರವಿವರ್ಮ ಕುಮಾರ್ ಅವರಿಗೆ ಕಾನ್ಫರೆನ್ಸ್ ಶುಲ್ಕವನ್ನಾಗಿ ₹1 ಲಕ್ಷ, ಪ್ಲೀಡಿಂಗ್ಸ್ ಸೆಟಲ್‌ಮೆಂಟ್‌ಗೆ ₹2 ಲಕ್ಷ, ಪರಿಣಾಮಾತ್ಮಕ ಹಾಜರಿಗೆ (ಎಫೆಕ್ಟಿವ್ ಹಿಯರಿಂಗ್) ₹5 ಲಕ್ಷ ಮತ್ತು ಪ್ರಕ್ರಿಯಾತ್ಮಕ ಹಾಜರಿಗೆ (ನಾನ್ ಎಫೆಕ್ಟಿವ್ ಹಿಯರಿಂಗ್) ₹2 ಲಕ್ಷ ನಿಗದಿಪಡಿಸಲಾಗಿದೆ. ಕ್ಲರ್ಕ್ ಶುಲ್ಕವನ್ನಾಗಿ ಸಂಭಾವನೆಯ ಒಟ್ಟು ಮೊತ್ತದ ಶೇ.10ರಷ್ಟು ನಿಗದಿಪಡಿಸಲಾಗಿದೆ ಎಂದು ವಿವರಿಸಲಾಗಿದೆ.
ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ವಕೀಲ ಪಿ ಪ್ರಸನ್ನ ಕುಮಾರ್ ಅವರು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕವಾಗಿದ್ದು, ಸತ್ರ ನ್ಯಾಯಾಲಯದಲ್ಲಿ ಪ್ರಕರಣವನ್ನು ನಿರ್ವಹಿಸಿದ್ದಕ್ಕಾಗಿ ಅವರಿಗೆ ₹15.79 ಲಕ್ಷ ಸಂಭಾವನೆ ಪಾವತಿಸಲಾಗಿದೆ.
ಹೈಕೋರ್ಟ್‌ನಲ್ಲಿ ಬಿಟ್ ಕಾಯಿನ್ ಪ್ರಕರಣ ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಪಿ ಪ್ರಸನ್ನ ಕುಮಾರ್ ಮತ್ತು ಬಿ ಎನ್ ಜಗದೀಶ್ ಅವರನ್ನು ನೇಮಿಸಲಾಗಿದ್ದು, ಕ್ರಮವಾಗಿ ₹13.05 ಲಕ್ಷ ಹಾಗೂ ₹91 ಸಾವಿರ ಪಾವತಿಸಲಾಗಿದೆ. ಜಗದೀಶ್ ಅವರಿಗೆ ಇಲ್ಲಿ ಕೆಎಲ್‌ಒ ನಿಯಮದ ಅನ್ವಯ ಸಂಭಾವನೆ ಪಾವತಿಸಲಾಗುವುದು ಎಂದು ವಿವರಿಸಲಾಗಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಬಿ ಎನ್ ಜಗದೀಶ್ ಅವರನ್ನು ನೇಮಿಸಲಾಗಿದ್ದು ₹7.28 ಲಕ್ಷ ಸಂಭಾವನೆ ಪಾವತಿಸಲಾಗಿದೆ. ಹೈಕೋರ್ಟ್‌ನಲ್ಲಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಜಗದೀಶ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದ್ದು, ಇದುವರೆಗೆ ಯಾವುದೇ ಸಂಭಾವನೆ ಪಾವತಿಯಾಗಿಲ್ಲ. ಕೆಎಲ್‌ಒ ನಿಯಮದ ಅನ್ವಯ ಸಂಭಾವನೆ ನೀಡಲಾಗುವುದು ಎಂದು ವಿವರಿಸಲಾಗಿದೆ.
ಹೈಕೋರ್ಟ್‌ನಲ್ಲಿ ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಲು ಬಿ ಎನ್ ಜಗದೀಶ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದ್ದು, ಈವರೆಗೆ ಯಾವುದೇ ಸಂಭಾವನೆ ಪಾವತಿಯಾಗಿಲ್ಲ. ಕೆಎಲ್‌ಒ ನಿಯಮದ ಅನ್ವಯ ಸಂಭಾವನೆ ಪಾವತಿಸಲಾಗುವುದು ಎಂದು ತಿಳಿಸಲಾಗಿದೆ.
ಶಾಸಕ ಮುನಿರತ್ನ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದಿಸಲು ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ ಎಸ್ ಪ್ರದೀಪ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರದೀಪ್ ಅವರಿಗೆ ₹21.08 ಲಕ್ಷ ಪಾವತಿಸಬೇಕಿದ್ದು ಇನ್ನು ಪಾವತಿಯಾಗಿರುವುದಿಲ್ಲ.
ಇದೇ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ನಡೆಸಲು ಸಿ ಎಸ್ ಪ್ರದೀಪ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ. ಆದರೆ, ಅವರಿಗೆ ಈವರೆಗೆ ಯಾವುದೇ ಸಂಭಾವನೆ ಪಾವತಿಯಾಗಿಲ್ಲ. ಕೆಎಲ್‌ಒ ನಿಯಮದ ಅನ್ವಯ ಸಂಭಾವನೆ ಪಾವತಿಸಲಾಗುವುದು ಎಂದು ತಿಳಿಸಲಾಗಿದೆ.
ಹೈಕೋರ್ಟ್‌ನಲ್ಲಿ ಪಿಎಸ್‌ಐ ನೇಮಕಾತಿ ಹಗರಣ ನಡೆಸಲು ಎಂ ಸುದರ್ಶನ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದ್ದು, ಅವರಿಗೂ ಈವರೆಗೆ ಯಾವುದೇ ಸಂಭಾವನೆ ಪಾವತಿಯಾಗಿಲ್ಲ.
ಧರ್ಮಸ್ಥಳ ವ್ಯಾಪ್ತಿಯ ಅತ್ಯಾಚಾರ ಮತ್ತು ಮತ ಕಳವು ಪ್ರಕರಣದಲ್ಲಿ ಸರ್ಕಾರವನ್ನು ಪ್ರತಿನಿಧಿಸಲು ವಿಶೇಷ ಅಭಿಯೋಜಕರ ನೇಮಕವಾಗಿಲ್ಲ ಎಂದು ಮಾಹಿತಿ ಒದಗಿಸಲಾಗಿದೆ.
ಬಿಟ್ ಕಾಯಿನ್ ಮತ್ತು ಡಾರ್ಕ್‌ನೆಟ್‌ಗಳ ಅವ್ಯವಹಾರ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗ, ಪೊಲೀಸ್ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇರ ನೇಮಕಾತಿ ಅವ್ಯವಹಾರ ಪ್ರಕರಣಗಳ ನೇತೃತ್ವವನ್ನು ಎಡಿಜಿಪಿ ಮನೀಶ್ ಖರ್ಭೀಕರ್ ವಹಿಸಿದ್ದಾರೆ.
ಪ್ರಜ್ವಲ್ ರೇವಣ್ಣ, ಅವರ ತಂದೆ ಶಾಸಕ ಎಚ್ ಡಿ ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಪ್ರಮುಖ ಆರೋಪಿಗಳಾಗಿರುವ ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಚಿತ್ರೀಕರಣ, ಮುನಿರತ್ನ ವಿರುದ್ಧದ ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ, ಲೈಂಗಿಕ ದೌರ್ಜನ್ಯ, ಕಲಬುರ್ಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಅನಧಿಕೃತವಾಗಿ ಕೈಬಿಟ್ಟಿರುವ ಕುರಿತು ಚುನಾವಣಾ ಆಯೋಗಕ್ಕೆ ನೀಡಿದ ದೂರಿಗೆ ಸಂಬಂಧಿಸಿದ ಪ್ರಕರಣಗಳ ನೇತೃತ್ವವನ್ನು ಎಡಿಜಿಪಿ ಬಿ ಕೆ ಸಿಂಗ್ ವಹಿಸಿದ್ದಾರೆ.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಅಸ್ವಾಭಾವಿಕ ಸಾವು, ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಹೊಣೆಯನ್ನು ಡಾ. ಪ್ರೊಣವ್ ಮೊಹಾಂತಿ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಹಿಸಿದೆ.
ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ₹39,98,068; ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್‌ಐಟಿಗೆ ₹33,91,885; ವಾಲ್ಮೀಕಿ ನಿಗಮದ ಹಗರಣದ ಎಸ್‌ಐಟಿಗೆ ₹1,55,818 ಮತ್ತು ಮುನಿರತ್ನ ಪ್ರಕರಣದ ಎಸ್‌ಐಟಿಗೆ ₹23,52,864 ವೆಚ್ಚ ಮಾಡಲಾಗಿದೆ ಎಂದು ಗೃಹ ಸಚಿವರು ಉತ್ತರಿಸಿದ್ದಾರೆ.