
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆಯುವ ಕುರಿತಾದ ಮನವಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳದಿದ್ದರೆ ತಾನೇ ಆದೇಶ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಎಚ್ಚರಿಸಿದ್ದ ಬೆನ್ನಿಗೇ ಇಂದು ಐವರು ಪೊಲೀಸ್ ಅಧಿಕಾರಿಗಳ ಪೈಕಿ ನಾಲ್ವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತುಪಾಲನಾ ಪ್ರಕ್ರಿಯೆ ಬಾಕಿ ಇಟ್ಟು ರಾಜ್ಯ ಸರ್ಕಾರವು ಸೇವೆಗೆ ಮರು ನೇಮಕ ಮಾಡಿದೆ. ಆದರೆ, ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ.
ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯ ಲೋಪದ ಮೇಲೆ ಅಮಾನತುಗೊಂಡಿದ್ದ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ, ಕೇಂದ್ರೀಯ ವಿಭಾಗದ ಡಿಸಿಪಿಯಾಗಿದ್ದ ಶೇಖರ್ ಎಚ್. ತೆಕ್ಕಣ್ಣವರ್, ಕಬ್ಬನ್ ಪಾರ್ಕ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ ಕೆ ಗಿರೀಶ್ ಅವರನ್ನು ಸೇವೆಗೆ ಮರು ನಿಯೋಜಿಸಿದೆ. ಆದರೆ, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಮರು ನೇಮಕ ಮಾಡಲಾಗಿಲ್ಲ. ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು ವಿಕಾಸ್ ಕುಮಾರ್ ಅಮಾನತು ಆದೇಶ ಬದಿಗೆ ಸರಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಜೂನ್ 4ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ್ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದು, ಅವರು ವರದಿ ಸಲ್ಲಿಸಿದ್ದಾರೆ. ಆನಂತರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಚಾರಣಾ ಆಯೋಗವು ಜುಲೈ 11ರಂದು ವರದಿ ಸಲ್ಲಿಸಿದೆ. ಆನಂತರ ಅಧಿಕಾರಿಗಳು ಸೇವೆಗೆ ಮರು ನೇಮಕ ಕೋರಿ ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಶಿಸ್ತುಪಾಲನಾ ಕ್ರಮವನ್ನು ಬಾಕಿ ಉಳಿಸಿ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲಾಗಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಗೆ ಮರು ನೇಮಕ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜುಲೈ 26ರಂದು ಹೈಕೋರ್ಟ್‌ನಲ್ಲಿ ನಡೆದಿದ್ದ ವಿಚಾರಣೆಯಲ್ಲಿ ರಾಜ್ಯ ಸರ್ಕಾರವು ಸ್ವಲ್ಪ ಕಾಲಾವಕಾಶ ನೀಡಿದರೆ ಅಮಾನತು ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಹೈಕೋರ್ಟ್ ಸಹ ಆಗಸ್ಟ್ 1ರೊಳಗೆ ವಿಕಾಸ್ ಕುಮಾರ್ ಅವರ ಅಮಾನತಿನ ಸಂಬಂಧ ಅವರು ನೀಡುವ ಮನವಿ ಪರಿಗಣಿಸಬೇಕು. ಇಲ್ಲವಾದಲ್ಲಿ ತಾನೇ ಆದೇಶ ಮಾಡುವುದಾಗಿ ತಿಳಿಸಿತ್ತು. ಈ ಬೆಳವಣಿಗೆಯ ಬೆನ್ನಿಗೇ ಸರ್ಕಾರವು ಅಮಾನತು ಆದೇಶ ಹಿಂಪಡೆದಿದೆ.
ಜೂನ್ 5ರಂದು ಅಖಿಲ ಭಾರತೀಯ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969, ನಿಯಮ 3(1)(ಎ) ಅಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರೀಯ ವಿಭಾಗದ ಡಿಸಿಪಿ ಶೇಖರ್ ಎಚ್. ತೆಕ್ಕಣ್ಣವರ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ಪ್ರಕ್ರಿಯೆ) ನಿಯಮಗಳು 1965, ನಿಯಮ 5ರ ಅಡಿ ಕಬ್ಬನ್ ಪಾರ್ಕ್ ಡಿವೈಎಸ್‌ಪಿ ಸಿ ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ ಕೆ ಗಿರೀಶ್ ಅವರನ್ನು ಅಮಾನತುಗೊಳಿಸಿತ್ತು.