ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ಸ್ಥಿರ, ಚರಾಸ್ತಿ ಹಸ್ತಾಂತರಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“23 ವರ್ಷದಿಂದ ಬಾಕಿ ಇರುವ ಪ್ರಕರಣದಲ್ಲಿ ಆದೇಶ ಬರುವವರೆಗೆ ಕಾಯುವುದು ಅಥವಾ ನಿಯಮ 161 ಕಾಯಿದೆ ಜಾರಿಗೊಳಿಸಲು ಅಡ್ಡಿಯಾಗಿರುವುದರಿಂದ ಅದನ್ನು ಬೇಗ ನಿರ್ಧರಿಸಲು ಕೋರಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ?” ಎಂದ ಅರ್ಜಿದಾರರ ವಕೀಲರು.
Mysore Chamundi temple and Karnataka HC
Mysore Chamundi temple and Karnataka HC
Published on

ಮೈಸೂರಿನ ಸುಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಹಸ್ತಾಂತರಿಸದಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಇದರೊಂದಿಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ಮಧ್ಯಂತರ ಆದೇಶವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ದಿವಂಗತ ಶ್ರೀಕಂಠ ದತ್ತ ಒಡೆಯರ್‌ ಪತ್ನಿ ಪ್ರಮೋದಾ ದೇವಿ ಒಡೆಯರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕಾಯಿದೆ ಜಾರಿಗೆ ತಡೆ ವಿಧಿಸಬೇಕು ಎಂಬ ಅರ್ಜಿದಾರರ ಮಧ್ಯಂತರ ಕೋರಿಕೆಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಾಲಯವು ಆಲಿಸಿತು. ಆನಂತರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಹಸ್ತಾಂತರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಈಚೆಗೆ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬ ಕುರಿತಾದ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ‌ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್‌ ಅವರು “22.08.2024ರ ಆದೇಶದಲ್ಲಿ ಕಾಯಿದೆ ಜಾರಿಗೆ ಬಂದಿದೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಆಗಸ್ಟ್‌ 30ರಂದು ರಿಜಿಸ್ಟ್ರಿಗೆ ಬೇರೊಂದು ಪ್ರಕರಣವನ್ನು ಡಿ-ಲಿಂಕ್‌ ಮಾಡುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ಇರಲಿಲ್ಲ. ಇದನ್ನು ನ್ಯಾಯಾಲಯ ಸ್ಪಷ್ಟಪಡಿಸಬೇಕು” ಎಂದು ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲಿನ ಆದೇಶ ಮಾಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ “ಚಾಮುಂಡಿ ದೇವಸ್ಥಾನದ ಮಾಲೀಕತ್ವಕ್ಕೆ ಸಂಬಂಧಿಸಿದ ಮೇಲ್ಮನವಿಯು ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ. ಕರ್ನಾಟಕ ಶಾಸನ ಸಭೆ ಪ್ರಕ್ರಿಯೆ ನಿಯಮ ಮತ್ತು ನಡಾವಳಿಯ ನಿಯಮ 161ರ ಪ್ರಕಾರ ಯಾವುದಾದರೂ ಪ್ರಕರಣ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿದ್ದರೆ ಆ ವಿಚಾರಕ್ಕೆ ಸಂಬಂಧಿಸಿದ ನಿರ್ಣಯವನ್ನು ವಿಧಾಸನಭೆಯಲ್ಲಿ ಮಂಡಿಸುವಂತಿಲ್ಲ. ಹಾಲಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಕೆಯಾಗಿರುವುದರಿಂದ ಅದನ್ನು ಕನಿಷ್ಠ ಪಕ್ಷ ವಿಧಾನಸಭೆಯಲ್ಲಿ ಚರ್ಚೆಗೆ ಇಡಬೇಕಿತ್ತು. ಅದನ್ನು ಮಾಡದ ಸರ್ಕಾರವು 2024ರ ಫೆಬ್ರವರಿ 19ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, 21ರಂದು ಅನುಮೋದನೆ ಪಡೆದಿದೆ. ಇಲ್ಲಿ ನಿಯಮ 161ರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ” ಎಂದು ಆಕ್ಷೇಪಿಸಿದರು.

“ಪಂಜಾಬ್‌ ವಿಧಾನಸಭೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಂಜ್ಞೆ ಪರಿಗಣಿಸಿದೆ. ಅಧಿಕಾರ ಪ್ರತ್ಯೇಕತೆ ಸಿದ್ಧಾಂತ ರಕ್ಷಿಸಿದೆ. ಇದರ ಅರ್ಥ ನ್ಯಾಯಾಂಗದ ಪರಿಶೀಲನೆಗೆ ಪ್ರಕರಣ ಒಳಪಟ್ಟಿದ್ದರೆ ವಿಧಾನಸಭೆಯಲ್ಲಿ ನಿರ್ಣಯ (ಮೋಷನ್‌) ಮಂಡಿಸಲಾಗದು” ಎಂದರು.

“ಚಾಮುಂಡಿ ದೇವಸ್ಥಾದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2001ರಲ್ಲಿ ರಿಟ್‌ ಅರ್ಜಿ ಸರ್ಕಾರದ ಪರವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅದನ್ನು ಪ್ರಶ್ನಿಸಿ ರಾಜಮನೆತನದವರು ಮೇಲ್ಮನವಿ ಸಲ್ಲಿಸಿರುವುದನ್ನು ಸರ್ಕಾರ ಹೇಳುತ್ತಿಲ್ಲ. 23 ವರ್ಷದಿಂದ ಮೇಲ್ಮನವಿ ಬಾಕಿ ಇದೆ. ಕಳೆದ ಒಂದು ವರ್ಷದಿಂದ ಮೇಲ್ಮನವಿಯನ್ನು ತುರ್ತಾಗಿ ಆಲಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದೇವೆ. ಕಾನೂನು ಜಾರಿಗೂ ಮುಂಚೆಯಿಂದಲೂ ಸರ್ಕಾರ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ” ಎಂದು ಆಕ್ಷೇಪಿಸಿದರು.

ಆಗ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್‌ ಅವರು “ಕಳೆದ 23 ವರ್ಷಗಳಿಂದ ಮೇಲ್ಮನವಿ ಬಾಕಿ ಇದೆ. ಹೀಗಾಗಿ, ಅವರು ಕಾಯಿದೆಯ ಸಿಂಧುತ್ವ ಪ್ರಶ್ನಿಸಬಹುದೇ ವಿನಾ, ಶಾಸನ ಸಭೆಯ ಪ್ರಕ್ರಿಯೆಯನ್ನು ಅರ್ಜಿದಾರರು ಪ್ರಶ್ನಿಸಲಾಗದು. ಶಾಸನಭೆಯ ಪ್ರಕ್ರಿಯೆಯನ್ನು ಪ್ರಶ್ನಿಸಲು ಅವರಿಗೆ ಇರುವ ಅವಕಾಶವನ್ನು ತೋರಿಸಬೇಕು” ಎಂದರು.

ಈ ಹಂತದಲ್ಲಿ ಪೀಠವು “ಮಸೂದೆಯನ್ನು ಮಂಡಿಸುವಂತಿರಲಿಲ್ಲ. ನಿಯಮದ ಪ್ರಕಾರ ನ್ಯಾಯಾಂಗ ಪರಿಶೀಲನೆಯಲ್ಲಿರುವ ವಿಚಾರದಲ್ಲಿ ಕಾಯಿದೆ ಮಾಡುವಂತಿಲ್ಲ. ಸರ್ಕಾರದ ಪ್ರಕಾರ ವಿಧಾನಸಭೆಯ ನಿಯಮವು ನಿರ್ದೇಶನಾತ್ಮಕವೋ ಅಥವಾ ಕಡ್ಡಾಯವೋ?" ಎಂದು ಪ್ರಶ್ನಿಸಿತು.

ಇದಕ್ಕೆ ಎಎಜಿ ಅವರು ಕಾನೂನು ರೂಪಿಸುವಂತಿಲ್ಲ ಎಂದು ಹೇಳಲಾಗದು. ಶಾನಸಭೆಯಲ್ಲಿ ಯಾವ ರೀತಿಯಲ್ಲಿ ಮಸೂದೆ ಮಂಡಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಸಂವಿಧಾನದ 212ನೇ ವಿಧಿಯ ಪ್ರಕಾರ ನ್ಯಾಯಾಲಯಗಳು ಶಾಸನ ಸಭೆಯ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಿಲು ನಿರ್ಬಂಧವಿದೆ. ಚಾಮುಂಡಿ ಕ್ಷೇತ್ರದ ಮೇಲೆ ಅರ್ಜಿದಾರರಿಗೆ ಹಕ್ಕಿಲ್ಲ. ಅದು ಮುಜರಾಯಿಗೆ ಸೇರಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಸಮರ್ಥನೆ ನೀಡಿದರು.

“ಪ್ರಕರಣ ನ್ಯಾಯಾಲಯದಲ್ಲಿದ್ದು, ಶಾಸನ ಸಭೆ ಕಾನೂನು ಮಾಡುವ ಅಧಿಕಾರವಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಒಂದು ತೀರ್ಪನ್ನು ಅರ್ಜಿದಾರರು ತೋರಿಸಲಿ. ಪಂಜಾಬ್‌ ಮತ್ತು ಹರಿಯಾಣ ವಿಧಾನಸಭಾ ನಿಯಮಗಳು ಮತ್ತು ಕರ್ನಾಟಕ ವಿಧಾನಸಭೆ ನಿಯಮಗಳನ್ನು ಪರಿಶೀಲಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ವಾದ ಮಂಡಿಸಲು ಅವಕಾಶ ನೀಡಬೇಕು” ಎಂದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು “ಚಾಮುಂಡಿ ದೇವಾಲಯ ಖಾಸಗಿ ಆಸ್ತಿ ಎಂದು ಭಾರತ ಸರ್ಕಾರ ಮತ್ತು ರಾಜಮನೆತನದ ನಡುವಿನ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಈಗ ಅರ್ಜಿದಾರರ ಹಕ್ಕಿಗೆ ಅಡ್ಡಿಯಾಗಿದೆ. ಅಕ್ರಮವಾಗಿ, ಅಸಾಂವಿಧಾನಿಕವಾಗಿ 1978ರ ಸೆಪ್ಟೆಂಬರ್‌ 28ರ ಸರ್ಕಾರದ ಆದೇಶದ ಮೂಲಕ ಚಾಮುಂಡಿ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆದಿದೆ. ಇದನ್ನು ಏಕಸದಸ್ಯ ಪೀಠ 2001ರಲ್ಲಿ ಎತ್ತಿ ಹಿಡಿದಿದ್ದು, ಅದನ್ನು ವಿಭಾಗೀಯ ಪೀಠದಲ್ಲಿ ಮೇಲ್ಮನವಿಯ ಮೂಲಕ ಪ್ರಶ್ನಿಸಿಲಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ನಮಗೆ ಹಕ್ಕಿಲ್ಲ ಎಂದಾದರೆ ಯಾರಿಗೆ ಹಕ್ಕಿದೆ?” ಎಂದು ಪ್ರಶ್ನೆ ಎಸೆದರು.

“ಸಾಂವಿಧಾನಿಕ ಆಧಾರದಲ್ಲಿ ಆಕ್ಷೇಪಾರ್ಹವಾದ ಕಾಯಿದೆಯನ್ನು ಪ್ರಶ್ನಿಸಿಬೇಕು ಎಂದಾದರೆ ನಿಯಮ 161 ಸಾಂವಿಧಾನಿಕ ಆಧಾರವಾಗಿದೆ. ಏಕೆಂದರೆ ಇದು ಅಧಿಕಾರ ಪ್ರತ್ಯೇಕತೆ ಸಿದ್ಧಾಂತದ ರಕ್ಷಾ ಕವಚವಾಗಿದೆ” ಎಂದರು.

ಆಗ ಮತ್ತೊಮ್ಮೆ ಪೀಠವು “ನಿಯಮವು ನಿರ್ದೇಶನಾತ್ಮಕವೋ, ಕಡ್ಡಾಯವೋ?” ಎಂದು ಪ್ರಶ್ನಿಸಿತು.

ಇದಕ್ಕೆ ಅರ್ಜಿದಾರರ ಪರ ವಕೀಲರು “ಎರಡು ದಿನಗಳ ಚರ್ಚೆಯಲ್ಲಿ ಕಾಯಿದೆ ಕುರಿತು ವಿಧಾನಸಭೆಯಲ್ಲಿ ಸಣ್ಣ ಚರ್ಚೆಯೂ ನಡೆದಿಲ್ಲ. 23 ವರ್ಷದಿಂದ ಬಾಕಿ ಇರುವ ಪ್ರಕರಣದಲ್ಲಿ ಆದೇಶ ಬರುವವರೆಗೆ ಕಾಯುವುದು ಅಥವಾ ನಿಯಮ 161 ಕಾಯಿದೆ ಜಾರಿಗೊಳಿಸಲು ಅಡ್ಡಿಯಾಗಿರುವುದರಿಂದ ಅದನ್ನು ಬೇಗ ನಿರ್ಧರಿಸಿ ಎಂದು ನ್ಯಾಯಾಲಯಕ್ಕೆ ಸರ್ಕಾರ ಕೋರಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ?” ಎಂದರು. ಅಲ್ಲದೇ, ವಿಧಾನಸಭೆಯ ನಿಯಮವು ಕಡ್ಡಾಯ ಎಂದು ವಿವರಿಸಿದರು.

Also Read
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

“ದೇವಸ್ಥಾನದ ಸಂಪ್ರದಾಯ ಮತ್ತು ಆಚರಣೆ ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ಸರ್ಕಾರಕ್ಕೆ ಇಲ್ಲ. ಆಸ್ತಿಯ ಸಮಗ್ರತೆಯನ್ನು ರಕ್ಷಿಸಲು ಮಧ್ಯಂತರ ಆದೇಶ ಮುಖ್ಯ. ದೇವಸ್ಥಾನದ ಆಸ್ತಿಯನ್ನು ಹಸ್ತಾಂತರ/ಮಾರ್ಪಾಡು ಮಾಡಲಾಗುತ್ತಿದೆ. ಹೀಗಾಗಿ, ಯಥಾಸ್ಥಿತಿ ಕಾಪಾಡುವುದು ಅತ್ಯಂತ ಮುಖ್ಯ. ದೇವಸ್ಥಾನದ ಸಂಪ್ರದಾಯ, ದೇವಾಲಯದ ಚರ, ಸ್ಥಿರಾಸ್ತಿಗೆ ಸಂಬಂಧಿಸಿದ ಯಥಾಸ್ಥಿತಿಯನ್ನು ಬದಲಿಸಲಾಗಿದೆ. ಇಡೀ ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ. ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ದೇವಸ್ಥಾನವನ್ನು ಅಷ್ಟು ತುರ್ತಾಗಿ ವಶಕ್ಕೆ ಪಡೆಯುವ ಅವಶ್ಯಕತೆ ಏನಿತ್ತು?” ಎಂದು ಕಿಡಿಕಾರಿದರು.

“ದೇವಸ್ಥಾನದಲ್ಲಿ ಏನೇನು ಬದಲಾಯಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಬೇಕು. ಸಂಪ್ರದಾಯವನ್ನು ಬದಲಾಯಿಸದಂತೆ ಆದೇಶಿಸಬೇಕು. ನೀತಿಯ ಭಾಗವಾಗಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶ ಮಾಡಬೇಕು. ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಏನೆಲ್ಲಾ ಮಾರ್ಪಾಡುಗಳನ್ನು ಸರ್ಕಾರ ಮಾಡಿದೆ ಎಂಬುದನ್ನು ಉಲ್ಲೇಖಿಸಿದ್ದೇವೆ. ಅಲ್ಲಿಯವರೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಸ್ಥಿರ ಮತ್ತು ಚರ ಆಸ್ತಿಯನ್ನು ಹಸ್ತಾಂತರ ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಒಪ್ಪಿದ ಪೀಠವು ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿತು. 

Kannada Bar & Bench
kannada.barandbench.com