ಸುರಂಗ ಮಾರ್ಗ: ಲಾಲ್‌ಬಾಗ್‌ನಲ್ಲಿ ಮರಗಳನ್ನು ಕತ್ತರಿಸಲ್ಲ ಎಂದ ಸರ್ಕಾರ; ಮಧ್ಯಂತರ ಆದೇಶ ಬೇಕಿಲ್ಲ ಎಂದ ಹೈಕೋರ್ಟ್‌

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಸುರಂಗ ಮಾರ್ಗ ಯೋಜನೆಯು ಕಾಗದದ ಮೇಲಿರುವ ಇನ್ನಷ್ಟೇ ಕಾರ್ಯಗತವಾಗಬೇಕಿರುವ ಯೋಜನೆಯಾದರೂ ಸರ್ಕಾರ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ ಎಂದು ಪೀಠಕ್ಕೆ ತಿಳಿಸಿದ ಹಿರಿಯ ವಕೀಲ ಡಿ ಆರ್‌ ರವಿಶಂಕರ್.‌
High Court of Karnataka
High Court of Karnataka
Published on

ಬೆಂಗಳೂರು ನಗರದ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗದ ಯೋಜನೆಗಾಗಿ ಲಾಲ್‌ಬಾಗ್ ಸಸ್ಯ ತೋಟದೊಳಗಿನ ಮರಗಳನ್ನು ಕಡಿಯುವುದಿಲ್ಲ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗಿಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಯಲ್ಲಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರನ್ನು ಕುರಿತು “ಲಾಲ್‌ಬಾಗ್‌ನಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆಯೇ?” ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ಇಲ್ಲ” ಎಂದು ಉತ್ತರಿಸಿದರು.

ಈ ಹಿನ್ನೆಲೆಯಲ್ಲಿ ಪೀಠವು “ಮುಂದಿನ ವಿಚಾರಣೆಯವರೆಗೆ ಲಾಲ್‌ಬಾಗ್‌ನಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ತಿಳಿಸಿದ್ದಾರೆ. ಹೀಗಾಗಿ, ಯಾವುದೇ ಆದೇಶ ಅಥವಾ ಮಧ್ಯಂತರ ಆದೇಶ ಅಗತ್ಯವಿಲ್ಲ” ಎಂದು ಪೀಠವು ದಾಖಲಿಸಿತು.

Also Read
ಸುರಂಗ ಮಾರ್ಗ ಯೋಜನೆ: 'ಲಾಲ್‌ಬಾಗ್‌ನಲ್ಲಿನ ಮರಗಳ ಹನನ ಮಾಡಲಾಗುತ್ತದೆಯೇ?' ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು “ಇದು ಕಾಗದದ ಮೇಲಿರುವ ಇನ್ನಷ್ಟೇ ಕಾರ್ಯಗತವಾಗಬೇಕಿರುವ ಯೋಜನೆಯಾದರೂ ಸರ್ಕಾರ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ” ಎಂದರು.

ಆಗ ಪೀಠವು “ಇದೇ ಮನವಿಯನ್ನು ಹೊಂದಿರುವ ಇನ್ನೊಂದು ಪಿಐಎಲ್‌ ವಿಚಾರಣೆ ನಡೆಸಿದ್ದು, ಅದನ್ನು ಡಿಸೆಂಬರ್‌ 9ಕ್ಕೆ ನಿಗದಿಗೊಳಿಸಲಾಗಿದೆ. ಆ ಅರ್ಜಿಯಲ್ಲಿ ಲಾಲ್‌ಬಾಗ್‌ನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆಯೇ ಎಂದು ಸರ್ಕಾರವನ್ನು ಕೇಳಲಾಗಿತ್ತು. ಈಗ ಎಜಿ ಇಲ್ಲ ಎಂದಿದ್ದಾರೆ. ಹೀಗಾಗಿ, ನಿಮ್ಮ ವಾದವನ್ನೂ ಆಲಿಸಲಾಗುವುದು. ಅಷ್ಟೊರಳಗೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು” ಎಂದಿತು.

ಅಂತಿಮವಾಗಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್‌ 9ಕ್ಕೆ ಮುಂದೂಡಿತು.

Kannada Bar & Bench
kannada.barandbench.com