ಜುಲೈ, ಆಗಸ್ಟ್‌ನಲ್ಲಿ ಎಲ್ಲಾ ಫಲಾನುಭವಿಗಳಿಗೆ ಎರಡನೇ ಡೋಸ್‌ ಲಸಿಕೆ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿರಬಹುದು:ಹೈಕೋರ್ಟ್‌

ಹೆಚ್ಚುವರಿ ಲಸಿಕೆ ಡೋಸ್‌ಗಳು ಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯವು ಮನವಿ ಮಾಡಿದ್ದು, ಕೇಂದ್ರವು ಈ ಕುರಿತು ಪರಿಶೀಲಿಸಬಹುದು ಎಂಬ ಭರವಸೆ ಹೊಂದಿರುವುದಾಗಿ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಜುಲೈ, ಆಗಸ್ಟ್‌ನಲ್ಲಿ ಎಲ್ಲಾ ಫಲಾನುಭವಿಗಳಿಗೆ ಎರಡನೇ ಡೋಸ್‌ ಲಸಿಕೆ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿರಬಹುದು:ಹೈಕೋರ್ಟ್‌
Covid-19 vaccine

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಎರಡನೇ ಡೋಸ್‌ ಪಡೆದುಕೊಳ್ಳಲು ಬಾಕಿ ಇರುವವರಿಗೆ ಕೋವಿಡ್‌ ಲಸಿಕೆ ಪೂರೈಸಲು ರಾಜ್ಯ ಸರ್ಕಾರವು ಕೊರತೆ ಎದುರಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ರಾಜ್ಯವು ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಡೋಸ್‌ ಖರೀದಿಸಿದರೂ ಅದು ಮೊದಲ ಡೋಸ್‌ ಪಡೆಯುವವರಿಗೆ ಬಳಕೆಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಎರಡನೇ ಡೋಸ್‌ ಪಡೆದುಕೊಳ್ಳಲು ಬಾಕಿ ಇರುವವರಿಗೆ ಕೋವಿಡ್‌ ಲಸಿಕೆ ಪೂರೈಸಲು ರಾಜ್ಯ ಸರ್ಕಾರವು ಕೊರತೆ ಎದುರಿಸಬಹುದು ಎಂಬುದು ರಾಜ್ಯ ಸರ್ಕಾರದ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 60 ಲಕ್ಷ ಮಂದಿಯು ಜುಲೈ ಮತ್ತು ಆಗಸ್ಟ್‌ನಲ್ಲಿ ಎರಡನೇ ಡೋಸ್‌ ಪಡೆದುಕೊಳ್ಳಬೇಕಿದೆ. ಆಗಸ್ಟ್‌ 4ರ ವೇಳೆಗೆ ರಾಜ್ಯ ಸರ್ಕಾರವು 41 ಲಕ್ಷ ಡೋಸ್‌ ಪಡೆದುಕೊಳ್ಳಲಿದೆ. ಇದರಲ್ಲಿ ಬಹುತೇಕ ಡೋಸ್‌ಗಳು ಮೊದಲ ಡೋಸ್‌ ಪಡೆಯುವವರಿಗೆ ಮೀಸಲಾಗಿರಲಿದೆ. ಕೋವ್ಯಾಕ್ಸಿನ್‌ ಅಂಕಿ-ಸಂಖ್ಯೆಯು ಎಲ್ಲರಿಗೂ ಎರಡನೇ ಡೋಸ್‌ ನೀಡಲು ಸಾಲದು ಎಂಬುದನ್ನು ತೋರಿಸುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಎರಡನೇ ಡೋಸ್‌ ಪಡೆದುಕೊಳ್ಳಲು ಬಾಕಿ ಇರುವವರಿಗೆ ಕೋವಿಡ್‌ ಲಸಿಕೆ ಪೂರೈಸಲು ರಾಜ್ಯ ಸರ್ಕಾರವು ಕೊರತೆ ಎದುರಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೌಲಭ್ಯ ಕಲ್ಪಿಸಲಾಗಿಲ್ಲ ಎಂದು ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

Also Read
ಆಗಸ್ಟ್‌- ಡಿಸೆಂಬರ್ ನಡುವೆ 135 ಕೋಟಿ ಡೋಸ್ ಲಸಿಕೆ; ಡಿಜಿಟಲ್ ಕಂದರದಿಂದ ತೊಂದರೆ ಇಲ್ಲ: ಸುಪ್ರೀಂಗೆ ಕೇಂದ್ರ ವಿವರಣೆ

ಗ್ರಾಮೀಣ ಪ್ರದೇಶದಲ್ಲಿ 11,000 ಲಸಿಕಾ ಕೇಂದ್ರಗಳು ಮತ್ತು ನಗರ ಪ್ರದೇಶದಲ್ಲಿ 6,000 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ಆಮ್ಲಜನಕ ಕೊರತೆ ದುರಂತದಲ್ಲಿ ಸಾವನ್ನಪ್ಪಿದ 13 ಸಂತ್ರಸ್ತರ ಕುಟುಂಬಕ್ಕೆ ತಲಾ ರೂ. 5 ಲಕ್ಷ ನೀಡಲು ಯೋಜಿಸಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತು.

ತನಿಖಾ ಆಯೋಗ ವರದಿ ಸಲ್ಲಿಸಿದ ಬಳಿಕ ಉಳಿದ 11 ಮಂದಿ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಅಗತ್ಯ ನಿರ್ದೇಶನ ನೀಡಲಾಗುವುದು ಎಂದೂ ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ. 19,000 ಪೊಲೀಸ್‌ ಸಿಬ್ಬಂದಿಯ ಕುಟುಂಬಸ್ಥರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಅಂಗನವಾಡಿಗಳ ಮೂಲಕ ಲಸಿಕೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಅಮಿಕಸ್‌ ಕ್ಯೂರಿ ವಿಕ್ರಮ್‌ ಹುಯಿಲಗೋಳ ಕೋರಿದರು. ಇದಕ್ಕೆ ಪೀಠವು ಅಂಗನವಾಡಿಗಳು ಇನ್ನೂ ತೆಗೆದಿಲ್ಲ ಎಂದಿತು. ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಗಿದೆ.

Related Stories

No stories found.