ಎಚ್‌ಡಿಕೆ ವಿರುದ್ಧದ ಭೂ ಒತ್ತುವರಿ ಪ್ರಕರಣ: ರಾಜ್ಯ ಸರ್ಕಾರದ ಮೇಲ್ಮನವಿಗಳನ್ನು ವಿಲೇವಾರಿ ಮಾಡಿದ ಹೈಕೋರ್ಟ್‌

“ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ 29.5.2025ರಂದು ತಹಶೀಲ್ದಾರ್‌ ಹೊರಡಿಸಿರುವ ಸಮನ್ಸ್‌ ಉಳಿಯುವುದಿಲ್ಲ. ಇನ್ನು ಇದಕ್ಕೆ ಸೀಮಿತವಾಗಿ ಮಾಡಿರುವ ಮಧ್ಯಂತರ ಆದೇಶವೂ ಉಳಿಯುವುದಿಲ್ಲ” ಎಂದು ವಿಭಾಗೀಯ ಪೀಠ ಹೇಳಿದೆ.
HD Kumaraswamy Karnataka HC
HD Kumaraswamy Karnataka HC
Published on

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ರಾಮನಗರದ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖೆ ನಡೆಸಲು ರಾಜ್ಯ ಸರ್ಕಾರವು ಹೊರಡಿಸಿದ್ದ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಯ ಆದೇಶದಲ್ಲಿ ಮಾರ್ಪಾಡು ಮಾಡಿರುವುದು ಮತ್ತು ರಾಮನಗರ ತಹಶೀಲ್ದಾರ್‌ ಅವರು ಜಾರಿ ಮಾಡಿದ್ದ ಸಮನ್ಸ್‌ ಹಿಂಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್‌ ವಿಲೇವಾರಿ ಮಾಡಿದೆ.

ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ಜಮೀನಿನ ಹಕ್ಕಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹಾಜರುಪಡಿಸುವಂತೆ ಭೂಕಂದಾಯ ಕಾಯಿದೆ ಸೆಕ್ಷನ್‌ 28ರ ಅಡಿ ರಾಮನಗರ ತಹಶೀಲ್ದಾರ್‌ ಅವರು ಕುಮಾರಸ್ವಾಮಿ, ಅವರ ಸಂಬಂಧಿ, ಮಾಜಿ ಸಚಿವ ಡಿ ಸಿ ತಮ್ಮಣ್ಣ ಅವರ ಪತ್ನಿ ಪ್ರಮೀಳಾ ಮತ್ತಿತರರಿಗೆ 29.5.2025ರಂದು ಸಮನ್ಸ್‌ ಜಾರಿ ಮಾಡಿದ್ದಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಭೂಕಂದಾಯ ಕಾಯಿದೆ ಸೆಕ್ಷನ್‌ 28ರ ಅಡಿ ಈ ಹಿಂದೆ ಕುಮಾರಸ್ವಾಮಿ ಮತ್ತು ಇತರರಿಗೆ ರಾಮನಗರ ತಹಶೀಲ್ದಾರ್‌ ನೀಡಿದ್ದ ಸಮನ್ಸ್‌ ಹಿಂಪಡೆಯಲಾಗಿದ್ದು, ರಾಜ್ಯ ಸರ್ಕಾರವು ಹೊಸ ಸಮನ್ಸ್‌ ಜಾರಿಗೊಳಿಸಲಿದೆ. 28.1.2025ರಂದು ಎಸ್‌ಐಟಿ ರಚಿಸಿದ್ದ ಆದೇಶದಲ್ಲೂ ಮಾರ್ಪಾಡು ಮಾಡಲಾಗಿದೆ. ಹೀಗಾಗಿ, ಮೇಲ್ಮನವಿಗಳನ್ನು ಇತ್ಯರ್ಥಪಡಿಬಸಹುದು” ಎಂದರು.

ಕುಮಾರಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ರಾಜ್ಯ ಸರ್ಕಾರವು ಕುಮಾರಸ್ವಾಮಿ ಅವರ ವಿರುದ್ಧ ಪ್ರತೀಕಾರಕ್ಕೆ ಇಳಿದಿದೆ” ಎಂದು ಆಕ್ಷೇಪಿಸಿದರು.

ಸರ್ಕಾರದ ವಾದ ಪರಿಗಣಿಸಿದ ನ್ಯಾಯಾಲಯವು “ರಾಜ್ಯ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ 29.5.2025ರ ಸಮನ್ಸ್‌ ಉಳಿಯುವುದಿಲ್ಲ. ಇದರ ಬಗೆಗಿನ ನ್ಯಾಯಾಂಗ ಪ್ರಕ್ರಿಯೆ ಅಗತ್ಯವಿಲ್ಲ. ಇನ್ನು ಇದಕ್ಕೆ ಸೀಮಿತವಾಗಿ ಮಾಡಿರುವ ಮಧ್ಯಂತರ ಆದೇಶವೂ ಉಳಿಯುವುದಿಲ್ಲ. 28.1.2025ರ ಎಸ್‌ಐಟಿ ರಚನೆ ಆದೇಶ ಮಾರ್ಪಾಡು ಆಗಿರುವುದರಿಂದ ಏಕಸದಸ್ಯ ಪೀಠದ ಮುಂದಿರುವ ವಾದಗಳನ್ನು ಈ ನ್ಯಾಯಾಲಯ ಪರಿಶೀಲಿಸಲು ಬಯಸುವುದಿಲ್ಲ” ಎಂದು ಆದೇಶಿಸಿದೆ.

ಹೀಗಾಗಿ, “ತಾವು ಮಾಡಿರುವ ಮಧ್ಯಂತರ ಆದೇಶ ಉಳಿಯುವುದಿಲ್ಲ. ಪಕ್ಷಕಾರರು ತಮ್ಮ ಯಾವುದೇ ವಾದವನ್ನು ಏಕಸದಸ್ಯ ಪೀಠದ ಮುಂದೆ ಎತ್ತಬಹುದಾಗಿದೆ. ಪ್ರತಿವಾದಿಗಳು ಅಗತ್ಯ ಬಿದ್ದರೆ ಅರ್ಜಿ ಸಲ್ಲಿಸಬಹುದಾಗಿದ್ದು, ಕಾನೂನಿನ ಅನ್ವಯ ಮೆರಿಟ್‌ ಮೇಲೆ ಅವುಗಳನ್ನು ನಿರ್ಧರಿಸಲಾಗುವುದು ಎಂದು ಬಿಡಿಸಿ ಹೇಳಬೇಕಿಲ್ಲ” ಎಂದು ಆದೇಶಿಸಿ, ಅರ್ಜಿಗಳನ್ನು ವಿಲೇವಾರಿ ಮಾಡಿತು.

ಪ್ರಕರಣದ ಹಿನ್ನೆಲೆ: ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ ಸಿ ತಮ್ಮಣ್ಣ ಮತ್ತಿತರರು ಕೇತಗಾನಹಳ್ಳಿಯಲ್ಲಿಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ್‌ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Also Read
ಎಚ್‌ಡಿಕೆ ವಿರುದ್ಧದ ಭೂ ಒತ್ತುವರಿ ಪ್ರಕರಣ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್‌ ತಡೆ; ಎಸ್‌ಐಟಿ ತನಿಖೆ ಹಾದಿ ಸುಗಮ

ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠವು ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆನಂತರ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್‌, ಕುಮಾರಸ್ವಾಮಿ ಹಾಗೂ ಮತ್ತಿತರರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಸರ್ಕಾರ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಅದನ್ನು ಪ್ರಶ್ನಿಸಿ ಎಚ್‌ಡಿಕೆ ಮತ್ತಿತರರು ಏಕಸದಸ್ಯ ಪೀಠದ ಮುಂದೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com