ವಾಲ್ಮೀಕಿ ಪ್ರಕರಣ ಸಿಬಿಐ ತನಿಖೆಗೆ ಕೋರಿಕೆ: ಯೂನಿಯನ್‌ ಬ್ಯಾಂಕ್‌ ಅರ್ಜಿಯ ಊರ್ಜಿತತ್ವ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಕೇಂದ್ರ ಸರ್ಕಾರವು ತನ್ನ ಪ್ರತಿನಿಧಿಯ (ಪ್ರಾಕ್ಸಿ) ಮುಖೇನ ಯುದ್ಧಕ್ಕೆ ಇಳಿದಿದೆ. ಯೂನಿಯನ್‌ ಬ್ಯಾಂಕ್‌ ಹಿಂದಿನ ದಿನ ಸಿಬಿಐ ತನಿಖೆಗೆ ಕೋರುತ್ತದೆ. ಮಾರನೇಯ ದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ” ಎಂದು ಆಕ್ಷೇಪಿಸಿದ ಪ್ರೊ. ಕುಮಾರ್.
Union Bank of India, CBI and Karnataka HC
Union Bank of India, CBI and Karnataka HC
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿರುವ ಅರ್ಜಿಯ ಊರ್ಜಿತತ್ವಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶ ಕಾಯ್ದಿರಿಸಿದೆ.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ವಿ ಆಚಾರ್ಯ ಅವರು ಸಿಬಿಐ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಸಿಬಿಐ ತನಿಖೆ ನಡೆಸುವುದು ಎಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿಯುವುದಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ವಾದಿಸಿದರು.

“ಯಾವುದೇ ಪ್ರಕರಣದ ತನಿಖೆ ನಡೆಸುವ ಅಂತರ್ಗತ ಅಧಿಕಾರ ಸಿಬಿಐಗೆ ಇಲ್ಲ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗದು. ಪೊಲೀಸ್‌ ಅಧಿಕಾರವು ಶಾಸನಬದ್ಧವಾಗಿದ್ದು, ಅದು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿದೆ. ಸಿಬಿಐ ಎಂದರೆ ಕೇಂದ್ರ ಸರ್ಕಾರವಾಗಿದ್ದು, ಅದು ಪ್ರಕರಣದಲ್ಲಿ ಪಕ್ಷಕಾರನಾಗಿಲ್ಲದಿದ್ದರೂ ನ್ಯಾಯಾಲಯದ ಮುಂದೆ ಬಂದಿದೆ. ತನ್ನ ಎರಡು ಬಾಹುಗಳಾದ ಸಿಬಿಐ ಮತ್ತು ಯೂನಿಯನ್‌ ಬ್ಯಾಂಕ್‌ ಮೂಲಕ ಕೇಂದ್ರ ಸರ್ಕಾರ ಇಲ್ಲಿ ಬಂದಿದೆ” ಎಂದು ಹಿರಿಯ ವಕೀಲ ಆಚಾರ್ಯ ಆಕ್ಷೇಪಿಸಿದರು.

ಯೂನಿಯನ್‌ ಬ್ಯಾಂಕ್‌ ಪ್ರತಿನಿಧಿಸಿದ್ದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ವಾದಕ್ಕೆ ಆಕ್ಷೇಪಿಸಿದರು. “ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ಕುರಿತು ವಾದಿಸಲು ಇಚ್ಛಿಸುವುದಿಲ್ಲ. ಅದು ಈ ಪ್ರಕರಣಕ್ಕೆ ಹೊಂದುವುದಿಲ್ಲ. ಇಂಥ ಪ್ರಕರಣದಲ್ಲಿ ಸಿಬಿಐ ಒಂದೇ ತನಿಖಾ ಸಂಸ್ಥೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕಿಂಗ್‌ ಕ್ಷೇತ್ರದ ನಿರ್ವಹಣೆಗೆ ವ್ಯವಸ್ಥಿತ ಆಪತ್ತು ಎದುರಾದಾಗ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ ಸೆಕ್ಷನ್‌ 35ಎ ಅನ್ವಯಿಸುತ್ತದೆ” ಎಂದರು.

Also Read
[ವಾಲ್ಮೀಕಿ ಹಗರಣ] ಸಿಬಿಐ ತನಿಖೆ ವಿಚಾರ ಕೇಂದ್ರ ಮತ್ತು ರಾಜ್ಯದ ನಡುವಿನ ವಿವಾದ ಎನ್ನುವ ವಾದ ಒಪ್ಪದ ಹೈಕೋರ್ಟ್‌

ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಕೇಂದ್ರ ಸರ್ಕಾರವು ಪ್ರತಿನಿಧಿ (ಪ್ರಾಕ್ಸಿ) ಮುಖೇನ ಯುದ್ಧಕ್ಕೆ ಇಳಿದಿದೆ. ಯೂನಿಯನ್‌ ಬ್ಯಾಂಕ್‌ ಹಿಂದಿನ ದಿನ ಸಿಬಿಐ ತನಿಖೆಗೆ ಕೋರುತ್ತದೆ. ಮಾರನೇಯ ದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ” ಎಂದು ಆಕ್ಷೇಪಿಸಿದರು.

ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ಪೀಠವು “ಹಾಲಿ ಪ್ರಕರಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದ ಎಂದು ಅದನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್‌ ನಿರ್ಧರಿಸಬೇಕೆ? ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ ಸೆಕ್ಷನ್‌ 35ಎ ಅಡಿ ಹೊರಡಿಸಿರುವ ಮಾಸ್ಟರ್‌ ಸುತ್ತೋಲೆಯ ಪ್ರಕಾರ ನಿರ್ದಿಷ್ಟ ಮೊತ್ತದ ಹಣಕಾಸು ಅವ್ಯವಹಾರವನ್ನು ಸಿಬಿಐ ತನಿಖೆ ನಡೆಸಬೇಕು ಎಂಬ ವಿಚಾರಗಳಿಗೆ ಉತ್ತರಿಸುವ ಮೂಲಕ ಅರ್ಜಿಯ ಊರ್ಜಿತತ್ವ ನಿರ್ಧರಿಸಲಾಗುವುದು” ಎಂದು ಹೇಳಿತು.

Kannada Bar & Bench
kannada.barandbench.com