

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಕರ್ನಾಟಕ ಮಾಧ್ಯಮ ಅಕಾಡೆಮಿ ನೌಕರರು ಸರ್ಕಾರಿ ನೌಕರರಾಗಿದ್ದರೂ ನಿಯಮಗಳಡಿಯಲ್ಲಿ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆ ಇಲ್ಲ. ಹೀಗಾಗಿ, ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಮಾಧ್ಯಮ ಅಕಾಡೆಮಿ ನಿವೃತ್ತ ಸಿಬ್ಬಂದಿ ಯಲಗಯ್ಯ, ಆರ್ ಜಿ ಸಿದ್ದರಾಮೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ಎಲ್ಲಾ ಸಂಬಂಧಿತ ಅಂಶಗಳು ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳನ್ನು ಗಮನಿಸಿ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹಗೊಳಿಸಬೇಕೆ ಎಂದು ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ” ಎಂದೂ ನ್ಯಾಯಾಲಯ ಹೇಳಿದೆ. ಅಲ್ಲದೇ, ನಾಲ್ಕು ತಿಂಗಳಲ್ಲಿ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯನ್ನು ಆಲಿಸಿದ ನಂತರ ಮಾಹಿತಿಯುಕ್ತ ಆದೇಶವನ್ನು ಹೊರಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
“ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಉದ್ಯೋಗಿಗಳಿಗೆ ಪಿಂಚಣಿ ನಿಯಮಗಳನ್ನು ಅನ್ವಯಿಸುವಂತಹ ಆದೇಶಗಳನ್ನು ನೀಡುವಾಗ ಸರ್ಕಾರವು ತನ್ನ ವಿವೇಚನೆ ಬಳಸಿದೆ. ಆದರೆ, ಅಂತಹ ಆದೇಶಗಳ ಅನುಪಸ್ಥಿತಿಯಲ್ಲಿ, ಮದ್ಯಪಾನ ಸಂಯಮ ಮಂಡಳಿ ಮತ್ತು ಮಾಧ್ಯಮ ಅಕಾಡೆಮಿಯಂತಹ ಸಂಸ್ಥೆಗಳ ನೌಕರರು ಪಿಂಚಣಿಗೆ ಅರ್ಹರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್ ಅವರು “ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಮಾಧ್ಯಮ ಅಕಾಡೆಮಿಯ ನೌಕರರು ಸರ್ಕಾರದ ಸೇವೆಯಲ್ಲಿಲ್ಲ ಮತ್ತು ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 (ಕೆಸಿಎಸ್‌ಆರ್) ಅಡಿಯಲ್ಲಿ ಒದಗಿಸಲಾದ ವ್ಯಾಖ್ಯಾನದ ಪ್ರಕಾರ ಅವರು ಸರ್ಕಾರಿ ನೌಕರರಲ್ಲ” ಎಂದು ವಾದಿಸಿದರು.
“2014ರ ಜನವರಿ 29ರ ಹೊರಡಿಸಿದ್ದ ಅಧಿಸೂಚನೆಯಂತೆ ಕೆಸಿಎಸ್‌ಆರ್ ನಿಯಮಗಳಿಂದ ನಿಯಮ 2ಎ ಅನ್ನು ಕೈಬಿಡುವ ಮೂಲಕ ಸರ್ಕಾರಿ ನೌಕರರಲ್ಲದ ವ್ಯಕ್ತಿಗಳು ನಿವೃತ್ತಿ ಪಿಂಚಣಿಗೆ ಒದಗಿಸುವ ಕೆಸಿಎಸ್‌ಆರ್ ನಿಯಮ 285ರ ಪ್ರಯೋಜನ ಅಥವಾ ಅನ್ವಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ಸರ್ಕಾರ ಹೇಳಿತ್ತು.
ಪ್ರತಿವಾದಿಗಳ ಪರ ವಕೀಲರಾದ ಪೃಥ್ವೀನ್ ಪ್ರಹ್ಲಾದ್ ಕಟ್ಟೀಮನಿ ಮತ್ತು ರಂಗನಾಥ್ ಜೋಯಿಷ್ ಅವರು “ಅಕಾಡೆಮಿ ಮತ್ತು ಮಂಡಳಿಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು (ಸಿ ಅಂಡ್ ಆರ್ ನಿಯಮ) ರೂಪಿಸಲು ವಿಫಲವಾಗಿದೆ ಎಂಬ ಅಂಶವು ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಏಕೆಂದರೆ ನೇಮಕಾತಿಯು ಸರ್ಕಾರಿ ಸಂಸ್ಥೆಯಲ್ಲಿ ಮತ್ತು ಸರ್ಕಾರವು ಅನುಮೋದಿಸಿದ ಹುದ್ದೆಯಾಗಿರುತ್ತದೆ. ಅರ್ಜಿದಾರರಂತಹ ಉದ್ಯೋಗಿಗಳಿಗೆ ಕೆಸಿಎಸ್‌ಆರ್‌ಗಳ ನಿಬಂಧನೆಗಳನ್ನು ಅನ್ವಯಿಸಿದ ನಂತರ, ಪಿಂಚಣಿಗೆ ಸಂಬಂಧಿಸಿದ ನಿಬಂಧನೆಗಳು ಅವರಿಗೆ ಅನ್ವಯಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ” ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.