[ಕಾವೇರಿ ವಿವಾದ] ಸುಪ್ರೀಂ, ಸಿಡಬ್ಲ್ಯುಎಂಎನಲ್ಲಿ ನಾಳೆಯೇ ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿಎಂ ಸಿದ್ದರಾಮಯ್ಯ

ಸಂದರ್ಭ ಬಂದರೆ ವಿಶೇಷ ಅಧಿವೇಶ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು.
CM Siddaramaiah
CM Siddaramaiah
Published on

ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ಸ್‌ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶ ಪ್ರಶ್ನಿಸಿ ನಾಳೆಯೇ ಸಿಡಬ್ಲುಎಂಎ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಹಾಗೂ ಹಾಲಿ ಅಡ್ವೊಕೇಟ್ ಜನರಲ್ ಅವರೊಂದಿಗೆ ನಡೆದ ಸಭೆಯ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಮಿಳುನಾಡಿಗೆ 3,000 ಕ್ಯೂಸೆಕ್ಸ್‌ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ. ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3,000 ಕ್ಯೂಸೆಕ್ ನೀಡಲು ಸಿಡಬ್ಲ್ಯುಎಂಎ ಸೂಚಿಸಿದೆ. ತಕ್ಷಣಾ ಸಿಡಬ್ಲ್ಯುಎಂಎ ಮುಂದೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ಮರುಪರಿಶೀಲನಾ ಅರ್ಜಿ ಹಾಕುವಂತೆ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್‌ ಜನರಲ್‌ಗಳ ನಿಯೋಗ ಸಲಹೆ ನೀಡಿದೆ ಎಂದರು.

ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಬೇಕು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಈ ಕುರಿತು ಪ್ರಬಲವಾಗಿ ವಾದಿಸಬೇಕು ಎಂದು ತಜ್ಞರ ತಂಡ ಸಲಹೆ ನೀಡಿದೆ. ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಲಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅದನ್ನು ಬಳಸಲಾಗುವುದು. ಸಂಕಷ್ಟ ಬಂದಾಗ ತಮಿಳುನಾಡಿಗೆ ನೀರು ಬಿಡಬಹುದು ಎಂಬ ಸಲಹೆ ಬಂದಿದೆ ಎಂದರು.

Also Read
[ಕಾವೇರಿ ವಿವಾದ] ಪ್ರಾಧಿಕಾರದ ಮುಂದೆ ಕರ್ನಾಟಕ ಸಮರ್ಥ ವಾದ ಮಂಡಿಸಿಲ್ಲ ಎನ್ನುವುದು ಎಷ್ಟು ಸತ್ಯ?

ಸಂದರ್ಭ ಬಂದರೆ ವಿಶೇಷ ಅಧಿವೇಶ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ್, ಕಾನೂನು ಸಚಿವ ಎಚ್ ಕೆ ಪಾಟೀಲ್, ಕೃಷಿ ಸಚಿವ ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜಕೀಯ ಸಲಹೆಗಾರರಾದ ನಜೀರ್ ಅಹಮದ್, ಕಾನೂನು ಸಲಹೆಗಾರರಾದ ಎ ಎಸ್‌ ಪೊನ್ನಣ್ಣ ಉಪಸ್ಥಿತರಿದ್ದರು.

Kannada Bar & Bench
kannada.barandbench.com