ಪರಿಹಾರ ರೂಪದಲ್ಲಿ ಅರಣ್ಯ ಬೆಳೆಸುವುದಕ್ಕೆಂದು ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ರಾಜ್ಯ ಸರ್ಕಾರಗಳು ಬಳಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿ ಎಲ್ ಸಾಂಘಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ 'ಪರಿಸರ ನ್ಯಾಯ ಮತ್ತು ಹವಾಮಾನ ಬದಲಾವಣೆ' ವಿಷಯದ ಕುರಿತು ಅವರು ಮಾತನಾಡಿದರು. ಹಿರಿಯ ವಕೀಲ ಜಿ ಎಲ್ ಸಾಂಘಿ ಅವರು ಉತ್ತರಾಖಂಡ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಅವರ ತಂದೆ.
ಅರಣ್ಯೀಕರಣಕ್ಕಾಗಿ ಒಟ್ಟು ₹ 57,325 ಕೋಟಿ ಪರಿಹಾರ ನಿಧಿಯನ್ನು ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಆದರೆ, ಇದರಲ್ಲಿ ಸುಮಾರು ₹ 38,698 ಕೋಟಿ ಹಣ ಬಳಕೆಯಾಗದೆ ಉಳಿದಿದೆ ಎಂದು ಅವರು ಗಮನ ಸೆಳೆದರು.
ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ಸರ್ಕಾರ ಇಷ್ಟು ದೊಡ್ಡ ಮೊತ್ತದ ಹಣ ಪಡೆಯುತ್ತಿದೆ. ಹವಾಮಾನ ಬದಲಾವಣೆಯ ಈಗಿನ ಸಂದರ್ಭದಲ್ಲಿ ಅದ್ಯತೆಯ ಮೇರೆಗೆ ರಕ್ಷಿಸಬೇಕಾದ ಮೂಲರೂಪದ ನಿತ್ಯ ಹರಿದ್ವರ್ಣ ಕಾಡುಗಳನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಿದ್ದರ ಪರಿಣಾಮವಾಗಿ ಈ ಬೃಹತ್ ಮೊತ್ತ ನೀಡಲಾಗುತ್ತಿದೆ. ಈ ಭಾರೀ ಮೊತ್ತ ಅರಣ್ಯ ಸಂರಕ್ಷಣೆಗೆ ಇರುವ ಕಾನೂನುಗಳನ್ನು ಬಲಪಡಿಸಲು, ಅರಣ್ಯೀಕರಣದ ಅಭಿವೃದ್ಧಿಯನ್ನು ಉತ್ತೇಜಿಸದೆ ಕೇವಲ ಕಾರ್ಯವಿಧಾನಗಳಿಗೆ ಸೀಮಿತವಾಗಿದೆ. ಆದ್ದರಿಂದ, ಅಂತಹ ಅರಣ್ಯೀಕರಣ ಕಾನೂನುಗಳನ್ನು ಸಾಂವಿಧಾನಿಕ ಕರ್ತವ್ಯಗಳಿಗೆ ಅನುಗುಣವಾಗಿ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಸರ್ವ ಜೀವಿಗಳ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳುವುದು ಭಾರತೀಯ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ ಎಂದ ಅವರು ಹವಾಮಾನ ಬದಲಾವಣೆಯಿಂದ ಎದ್ದಿರುವ ಕಾನೂನು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಸಕ್ರಿಯವಾಗಬೇಕು ಮತ್ತು ಕಾನೂನುಗಳ ಸೃಜನಶೀಲ ವ್ಯಾಖ್ಯಾನದ ಮೂಲಕ ಸವಾಲನ್ನು ಎದುರಿಸಬೇಕು ಎಂಬುದಾಗಿ ಕರೆ ನೀಡಿದರು.
ಪರಿಸರ ರಕ್ಷಿಸಲು ಮತ್ತು ಹವಾಮಾನ ಬದಲಾವಣೆ ಎದುರಿಸಲು ಕೇವಲ ಕಾನೂನು ಸಾಕಾಗುವುದಿಲ್ಲ. ವ್ಯಕ್ತಿಗತವಾಗಿಯೂ ಇದು ಆರಂಭವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ಉದ್ದೇಶಗಳಿಗಾಗಿ, ಪರಿಸರ ನ್ಯಾಯ ಎಂಬುದು ನ್ಯಾಯ ಮತ್ತು ಪರಿಸರ ಕಾಳಜಿಗಳ ವಿಶಾಲ ಚೌಕಟ್ಟಿನ ಭಾಗವಾಗಿರಬೇಕು ಮತ್ತು ಮಾನವ ಹಕ್ಕುಗಳೊಟ್ಟಿಗೆ ವ್ಯವಹರಿಸಬೇಕು. ಇದರಿಂದ ಪರಿಸರ ಅನ್ಯವಾದದ್ದು ಎಂಬ ಭಾವ ಇಲ್ಲವಾಗುತ್ತದೆ ಎಂದರು.