ತಮಿಳುನಾಡಿನ ನ್ಯಾಯಾಲಯಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂತ ಕವಿ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಛಾಯಾಚಿತ್ರ, ಪ್ರತಿಮೆ ಅಥವಾ ಭಾವಚಿತ್ರ ಸ್ಥಾಪಿಸುವುದನ್ನು, ಇರಿಸುವುದನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ರಿಜಿಸ್ಟ್ರಿ ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಿಳಿಸಿದೆ.
ತಮಿಳುನಾಡು ಕಾನೂನು ಸಚಿವ ಎಸ್.ರಘುಪತಿ ಅವರು ಸೋಮವಾರ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರ್‌ವಾಲಾ ಅವರನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಚರ್ಚಿಸಿದರು. ಆಗ ಮುಖ್ಯ ನ್ಯಾಯಮೂರ್ತಿ ಗಂಗಾಪುರವಾಲಾ ಅವರು ನ್ಯಾಯಾಲಯದ ಆವರಣದಲ್ಲಿ ನಾಯಕರ ಭಾವಚಿತ್ರ ಪ್ರದರ್ಶಿಸುವ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಸಚಿವರಿಗೆ ಭರವಸೆ ನೀಡಿದರು ಎಂಬುದಾಗಿ ರಾಜ್ಯ ಕಾನೂನು ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮಿಳು ಭಾಷೆಯಲ್ಲಿರುವ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಸರ್ಕಾರ "ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ನ್ಯಾಯಾಲಯದ ಆವರಣದಿಂದ ತೆಗೆಯಬಾರದು" ಎಂಬ ತನ್ನ ನಿಲುವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿತು. ಈ ವಿಚಾರ ಒತ್ತಿಹೇಳುವ ಪತ್ರವನ್ನು ಕಾನೂನು ಸಚಿವರು ಮುಖ್ಯ ನ್ಯಾಯಮೂರ್ತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಯಾವುದೇ ನಾಯಕರ ಭಾವಚಿತ್ರಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು ಎಂದು ತಿಳಿಸಲಾಗಿದೆ.
ತಮಿಳುನಾಡಿನ ನ್ಯಾಯಾಲಯಗಳು ಮತ್ತು ಅವುಗಳ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಛಾಯಾಚಿತ್ರ, ಪ್ರತಿಮೆ ಅಥವಾ ಭಾವಚಿತ್ರ ಅಳವಡಿಸುವಂತಿಲ್ಲ ಎನ್ನುವ ತನ್ನ ನಿರ್ಣಯವನ್ನು ಏಪ್ರಿಲ್ 11ರಂದು ಮದ್ರಾಸ್ ಹೈಕೋರ್ಟ್ ಪೂರ್ಣ ನ್ಯಾಯಾಲಯ ಮತ್ತೊಮ್ಮೆ ಪುನರುಚ್ಚರಿಸಿತ್ತು.