ತಮಿಳುನಾಡಿನ ತೂತ್ತುಕುಡಿಯಲ್ಲಿ 2018ರಲ್ಲಿ ನಡೆದಿದ್ದ ಗೋಲಿಬಾರ್ ಘಟನೆ ಸಂದರ್ಭದಲ್ಲಿ ಅಲ್ಲಿ ನಿಯೋಜಿಸಲಾಗಿದ್ದ ನಾಗರಿಕ ಸೇವಾ ಅಧಿಕಾರಿಗಳ ಆಸ್ತಿಗಳ ಕುರಿತು ತಮಿಳುನಾಡು ವಿಚಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (ಡಿವಿಎಸಿ) ನಡೆಸುತ್ತಿರುವ ತನಿಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ [ಎಸ್ ಚಂದ್ರನ್ ಮತ್ತಿತರರು ಹಾಗೂ ಹೆನ್ರಿ ತಿಪಾಗ್ನೆ ಇನ್ನಿತರರ ನಡುವಣ ಪ್ರಕರಣ].
ತೂತ್ತುಕುಡಿಯ ವೇದಾಂತ ಕಂಪೆನಿ ಮಾಲೀಕತ್ವದ ಸ್ಟೆರಲೈಟ್ ತಾಮ್ರ ಸ್ಥಾವರ ವಿರೋಧಿಸಿ 2018ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ 13 ನಿರಾಯುಧರು ಪೊಲೀಸರ ಗೋಲಿಬಾರ್ ವೇಳೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿ ಯಾವುದಾದರೂ ಹಣಕಾಸಿನ ಲಾಭ ಪಡೆದಿದ್ದಾರೆಯೇ ಎನ್ನುವುದನ್ನು ತಿಳಿಯಲು ತಮಿಳುನಾಡು ಸರ್ಕಾರ ತನಿಖೆ ನಡೆಸಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು.
ಮದ್ರಾಸ್ ಹೈಕೋರ್ಟ್‌ನ ನಿರ್ದೇಶನ ಪ್ರಶ್ನಿಸಿ ನಾಗರಿಕ ಸೇವಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ಡಿವಿಎಸಿ ತನಿಖೆಗೆ ತಡೆ ನೀಡಿದೆ. ಅಲ್ಲದೆ, ತಮಿಳುನಾಡು ಸರ್ಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್‌ಸಿ) ಪ್ರತಿಕ್ರಿಯೆ ಕೇಳಿದೆ.
2018ರಲ್ಲಿ ಸ್ಥಾವರ ಮುಚ್ಚುವವರೆಗೂ ಅದು ದೇಶದ ಅತಿದೊಡ್ಡ ತಾಮ್ರ ಸಂಸ್ಕರಣಾ ಘಟಕ ಆಗಿತ್ತು. ತೂತ್ತುಕುಡಿ ಪರಿಸರಕ್ಕೆ ಹಾನಿಯನ್ನುಂಟುಮಾಡುವುದರಿಂದ ಸ್ಥಾವರ ಮುಚ್ಚಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಅರ್ಧಕ್ಕೆ ನಿಲ್ಲಿಸಿದ್ದ ಸ್ವಯಂ ಪ್ರೇರಿತ ತನಿಖೆಯನ್ನು ಪುನಃ ಆರಂಭಿಸಬೇಕೆಂದು ಕೋರಿ ಸಾಮಾಜಿಕ ಹೋರಾಟಗಾರ ಹೆನ್ರಿ ಟಿಫಾಗ್ನೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ಜುಲೈ 25 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಪೊಲೀಸರ ಗೋಲಿಬಾರ್ ಒಬ್ಬ ನಿರ್ದಿಷ್ಟ ಕೈಗಾರಿಕೋದ್ಯಮಿಯ ಅಣತಿಯಂತೆ ನಡೆದ ಪೂರ್ವಯೋಜಿತ ಕೃತ್ಯ ಎಂದಿತ್ತು. ಹೀಗಾಗಿ ಆ ಹುನ್ನಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಯಾವುದೇ ಹಣಕಾಸಿನ ಲಾಭ ಪಡೆದಿದ್ದರೆ ತಮಿಳುನಾಡು ಸರ್ಕಾರ ತನಿಖೆ ನಡೆಸಬೇಕು ಎಂದು ಆದೇಶಿಸಿತ್ತು.
ಘಟನೆ ನಡೆದ ವೇಳೆ ನಿಯೋಜನೆಗೊಂಡಿದ್ದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (ಡಿವಿಎಸಿ) ಅದು ನಿರ್ದೇಶನ ನೀಡಿತ್ತು.
ಈ ನಿರ್ದೇಶನ ಪ್ರಶ್ನಿಸಿ ನಾಗರಿಕ ಸೇವಾ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದು ಸದ್ಯಕ್ಕೆ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ತಮಿಳುನಾಡು ಅಧಿಕಾರಿಗಳ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ಗೆ ಹಾಜರಿದ್ದರು.
ಮತ್ತೊಂದೆಡೆ, ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸುವಂತೆ ಕೋರಿ ವೇದಾಂತ ಕಂಪೆನಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ವಜಾಗೊಳಿಸಿತ್ತು.