ಮಕ್ಕಳ ಮೇಲೆ ಇತ್ತೀಚೆಗೆ ನಡೆದ ಬೀದಿ ನಾಯಿಗಳ ಎರಡು ದಾಳಿ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕೇರಳದ ಸ್ಥಳೀಯ ಸಂಸ್ಥೆಯೊಂದು ಬೀದಿ ನಾಯಿಗಳಿಗೆ ಸಂಬಂಧಿಸಿದ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿದ ಹಿನ್ನೆಲೆಯಲ್ಲಿ ಜುಲೈ 12ರಂದು ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ತನ್ನ ನೆರೆಮನೆ ಮುಂದೆ ಇದ್ದ 9 ವರ್ಷದ ಬಾಲಕಿ ಜಾನ್ವಿಯ ಮೇಲೆ ಈಚೆಗೆ ಮೂರು ಬೀದಿ ನಾಯಿಗಳು ದಾಳಿ ಮಾಡಿದ್ದವು. ಇದಕ್ಕೂ ಮುನ್ನ ಬೀದಿ ನಾಯಿಗಳ ದಾಳಿಯಿಂದ ವಿಶೇಷ ಚೇತನ ಮಗುವೊಂದು ಸಾವನ್ನಪ್ಪಿತ್ತು ಎಂದು ಇಂದು ಬೆಳಗ್ಗೆ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದೆದುರು ಕಣ್ಣೂರು ಜಿಲ್ಲಾ ಪಂಚಾಯತ್ ಪರ ವಕೀಲರು ತಿಳಿಸಿದರು.
"ತುಂಬಾ ದುರದೃಷ್ಟಕರ, ಆದರೆ ಪ್ರಕರಣ ಬಾಕಿ ಉಳಿದಿದೆ" ಎಂದು ನ್ಯಾಯಾಲಯ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಮಾಡಿದ ಪೀಠ ಜುಲೈ 7ರೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು. ಜುಲೈ 12ರಂದು ವಿಚಾರಣೆ ನಡೆಯಲಿದೆ.
ವಿಚಾರಣೆ ಬಾಕಿ ಇರುವ ಮುಖ್ಯ ಪ್ರಕರಣವು 2006ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿತ್ತು. ಬೀದಿ ನಾಯಿಗಳನ್ನು ಕೊಲ್ಲಲು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವನ್ನು ಆ ತೀರ್ಪು ನೀಡಿತ್ತು.
ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ರಜಾಕಾಲೀನ ಪೀಠ ಜೂನ್ 13 ರಂದು ನಿರಾಕರಿಸಿತ್ತು. ಬೀದಿನಾಯಿಗಳ ಹಿತಚಿಂತನೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಜಮ್ಮು ಮತ್ತು ಕಾಶ್ಮೀರ, ಬಾಂಬೆ ಹೈಕೋರ್ಟ್‌ಗಳಲ್ಲಿ ವಿವಿಧ ದಾವೆಗಳು ವಿಚಾರಣೆ ಎದುರು ನೋಡುತ್ತಿವೆ.