ಬೀದಿ ನಾಯಿ ಪ್ರಕರಣ: ರಾಜ್ಯ ಸರ್ಕಾರಗಳ ಕ್ರಮದ ಬಗ್ಗೆ ಸುಪ್ರೀಂ ಅಸಮಾಧಾನ

ಸಂಸ್ಥೆಗಳ ಆವರಣದಲ್ಲಿ ಇರುವ ಬೀದಿ ನಾಯಿಗಳ ವಿವರವನ್ನು ಸಲ್ಲಿಸಿದ ಏಕೈಕ ರಾಜ್ಯ ಕರ್ನಾಟಕ ಎಂದು ಪೀಠ ಹೇಳಿತಾದರೂ ನಾಯಿಗಳನ್ನು ಅದು ತೆರವುಗೊಳಿಸಿಲ್ಲ ಎಂಬುದನ್ನು ಗಮನಿಸಿತು.
Stray Dogs
Stray Dogs
Published on

ಬೀದಿನಾಯಿಗಳ ಸಂತಾನ ಹರಣ, ನಾಯಿ ಆಶ್ರಯ ಕೇಂದ್ರ ಸ್ಥಾಪನೆ ಹಾಗೂ ಶೈಕ್ಷಣಿಕ ಮತ್ತಿತರ ಸಂಸ್ಥೆಗಳ ಆವರಣದಿಂದ ಅವುಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳು ಕೈಗೊಂಡಿರುವ ಕ್ರಮಗಳು ಸಮರ್ಪಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಅಸ್ಸಾಂನಲ್ಲಿ 2024ರಲ್ಲಿ 1.66 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದರೂ ರಾಜ್ಯದಲ್ಲಿ ಕೇವಲ ಒಂದೇ ಒಂದು ನಾಯಿ ಕೇಂದ್ರ ಇದೆ, ಇದು ಆಘಾಕಾರಿ ಎಂದು  ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೇಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ಹೇಳಿತು.

Also Read
"ಅನಾಥ ಮಕ್ಕಳನ್ನೇಕೆ ದತ್ತು ಪಡೆಯುವುದಿಲ್ಲ?" ಶ್ವಾನಪ್ರೇಮಿಗಳಿಗೆ ತಿವಿದ ಸುಪ್ರೀಂ ಕೋರ್ಟ್‌

2025ರ ನವೆಂಬರ್ 7ರಂದು ತಾತ್ಕಾಲಿಕ ಆದೇಶ ನೀಡಿದ್ದ ನ್ಯಾಯಾಲಯ, ಹೆದ್ದಾರಿಗಳು, ಆಸ್ಪತ್ರೆ, ಶಾಲೆ, ಕಾಲೇಜುಗಳಂತಹ ಸಾಂಸ್ಥಿಕ ಪ್ರದೇಶಗಳಿಂದ ಅನಾಥ ಪ್ರಾಣಿಗಳನ್ನು ತೆರವುಗೊಳಿಸುವಂತೆ ಮತ್ತು ಎಂಟು ವಾರಗಳ ಒಳಗೆ ಆ ಸ್ಥಳಗಳಲ್ಲಿ ಬೇಲಿ ಹಾಕುವಂತೆ ರಾಜ್ಯ ಸರ್ಕಾರಗಳು ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪೀಠ ಸೂಚಿಸಿತ್ತು. ಆ ಪ್ರದೇಶಗಳಿಂದ ಹಿಡಿದ ನಾಯಿಗಳನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಬಾರದು ಎಂದೂ ಆದೇಶಿಸಿತ್ತು.

ಇಂದಿನ ವಿಚಾರಣೆ ವೇಳೆ ಅಮಿಕಸ್ ಕ್ಯೂರಿ ಗೌರವ್ ಅಗರ್ವಾಲ್ ಅವರು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಗಳ ಕಾರ್ಯ ನಿರ್ವಹಣೆ, ಆಶ್ರಯ ಕೇಂದ್ರಗಳ ಕೊರತೆ ಸಿಬ್ಬಂದಿ ಅಭಾವ ಅಂಕಿ ಅಂಶಗಳ ಅಸ್ಪಷ್ಟತೆ ಹಾಗೂ ಆದೇಶಗಳ ಕಳಪೆ ಜಾರಿಗೆ ಸಂಬಂಧಿಸಿದಂತೆ ಇರುವ ಗಂಭೀರ ಸಮಸ್ಯೆಗಳನ್ನು ವಿವರಿಸಿದರು.

ಈ ವೇಳೆ ಬಿಹಾರ, ಜಾರ್ಖಂಡ್, ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳು ಅಸ್ಪಷ್ಟ ಅಥವಾ ನಂಬಲಾಗದ ಅಂಕಿಅಂಶಗಳನ್ನು ಸಲ್ಲಿಸಿವೆ ಎಂದು ಪೀಠ ಅತೃಪ್ತಿ ವ್ಯಕ್ತಪಡಿಸಿತು.

Also Read
ನಾಯಿಗಳು ಭೀತಿಗೊಂಡವರ ಮೇಲೆ ಎರಗುತ್ತವೆ: ಸುಪ್ರೀಂ ಕೋರ್ಟ್

ಶೈಕ್ಷಣಿಕ ಮತ್ತಿತರ ಸಂಸ್ಥೆಗಳಲ್ಲಿ ಇರುವ ಬೀದಿ ನಾಯಿಗಳ ವಿವರವನ್ನು ಸಲ್ಲಿಸಿದ ಏಕೈಕ ರಾಜ್ಯ ಕರ್ನಾಟಕ ಎಂದು ಪೀಠ ಹೇಳಿತಾದರೂ ನಾಯಿಗಳನ್ನು ಸರ್ಕಾರ ತೆರವುಗೊಳಿಸಿಲ್ಲ ಎಂಬುದನ್ನು ಗಮನಿಸಿತು. ಗೋವಾ ಮತ್ತು ಕೇರಳದಲ್ಲಿ ಕಡಲತೀರಗಳಲ್ಲಿನ ನಾಯಿಗಳ ಸಮಸ್ಯೆ ಪ್ರವಾಸೋದ್ಯಮಕ್ಕೆ ಹೊಡೆತ ನೀಡುತ್ತಿದೆ ಎಂದು ಅದು ಹೇಳಿತು.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಆನ್‌ಲೈನ್ ಡ್ಯಾಶ್‌ಬೋರ್ಡ್ ಕ್ರಮವನ್ನು ಅದು ಶ್ಲಾಘಿಸಿತು. ಮಹಾರಾಷ್ಟ್ರ ಸರ್ಕಾರವು ರೂಪಿಸಿರುವ ಆನ್‌ಲೈನ್‌ ಡ್ಯಾಶ್‌ಬೋರ್ಡ್‌ನಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ, ಲಸಿಕೆ ಹಾಕಿರುವ ವಿವರ, ಸಂತಾನಹರಣ ಚಿಕಿತ್ಸೆಗೊಳಗಾಗಿರುವ ನಾಯಿಗಳ ಅಂಕಿಅಂಶ, ಪಶುಚಿಕಿತ್ಸಾಲಯಗಳ ಮಾಹಿತಿ ಮುಂತಾದ ಅಗತ್ಯ ಅಂಶಗಳು ಇರುವುದನ್ನು ವಿವರಿಸಲಾಯಿತು.

ರಾಜ್ಯಗಳು ಮಾಹಿತಿ ಮುಚ್ಚಿಡುವುದು ಹಾಗೂ ಕೇವಲ ಕಣ್ಣೊರೆಸುವ ತಂತ್ರಗಳನ್ನು ಅನುಸರಿಸುತ್ತಿರುವ ಬಗ್ಗೆ ಪೀಠ ಎಚ್ಚರಿಕೆ ನೀಡಿದ್ದು ಸುಧಾರಣೆ ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ವಿಚಾರಣೆ ನಾಳೆ (ಗುರುವಾರ) ಮಧ್ಯಾಹ್ನ 2 ಗಂಟೆಗೆ ಮುಂದುವರೆಯಲಿದೆ.

Kannada Bar & Bench
kannada.barandbench.com