ಫಲಿತಾಂಶ ವಿಳಂಬದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರವೇಶ ವಂಚಿತರಾಗುವಂತಿಲ್ಲ: ದೆಹಲಿ ಹೈಕೋರ್ಟ್
ಮಂಡಳಿ ಪರೀಕ್ಷೆಯ ಫಲಿತಾಂಶ ಘೋಷಣೆ ವಿಳಂಬದಿಂದಾಗಿ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಮತ್ತು ಪ್ರವೇಶದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಶಾಲಾ ಪರೀಕ್ಷೆಗಳನ್ನು ನಡೆಸುವ ಮಂಡಳಿಗಳು ಮತ್ತು ವಿವಿಧ ಉನ್ನತ ಶಿಕ್ಷಣ ಕೌನ್ಸೆಲಿಂಗ್ ಮತ್ತು ಪ್ರವೇಶ ಪರೀಕ್ಷಾ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಇರಬೇಕು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಕಿವಿಮಾತು ಹೇಳಿದೆ [ಅಕ್ಷಿತಾ ಸೆಹ್ರಾವತ್ (ಅಪ್ರಾಪ್ತ ವಯಸ್ಕರು) ಅವರ ತಂದೆ ಶ್ರೀ ದೀಪಕ್ ಕುಮಾರ್ ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು) ಇನ್ನಿತರರ ನಡುವಣ ಪ್ರಕರಣ].
ವಿದ್ಯಾರ್ಥಿಗಳು ಉತ್ತಮ ಅಂಕ ಮತ್ತು ರ‍್ಯಾಂಕ್ ಗಳಿಸಿದ್ದರೂ ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಸಮಯಕ್ಕೆ ಸರಿಯಾಗಿ ಪ್ರಕಟಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಕೌನ್ಸೆಲಿಂಗ್‌ನಿಂದ ಹೊರಗುಳಿಯುವಂತಾಗಬಾರದು ಎಂದು ನ್ಯಾಯಾಲಯ ನುಡಿಯಿತು.
"ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ನಡೆಸುವಾಗ ಕೌನ್ಸೆಲಿಂಗ್ ಸಂಸ್ಥೆಗಳು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ಮಂಡಳಿಗಳ ನಡುವೆ ಸೂಕ್ತ ಸಮನ್ವಯತೆ ಇರಬೇಕು ಎಂಬುದನ್ನು ಒತ್ತಿಹೇಳಬೇಕಾಗಿದೆ. ಜೆಇಇ (ಮುಖ್ಯ) ಪರೀಕ್ಷೆಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಎರಡರಿಂದ ನಾಲ್ಕು ವರ್ಷಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಠಿಣ ಪರಿಶ್ರಮ ಪಡುತ್ತಾರೆ ಮತ್ತು ಹನ್ನೆರಡನೇ ತರಗತಿಯ ಫಲಿತಾಂಶವನ್ನು ಸಂಬಂಧಪಟ್ಟ ಶಿಕ್ಷಣ ಮಂಡಳಿಯು ಹನ್ನೆರಡನೇ ತರಗತಿಯ ಅರ್ಹತಾ ಪರೀಕ್ಷೆಯನ್ನು ನಡೆಸುವ ವೇಳೆಗೆ ಸಕಾಲಿಕವಾಗಿ ಘೋಷಿಸಿಲ್ಲ ಎಂಬ ಕಾರಣಕ್ಕಾಗಿ ಉತ್ತಮ ಶೇಕಡಾವಾರು ಮತ್ತು ರ‍್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಿಂದ ಹೊರಗುಳಿಯಬಾರದು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ" ಎಂದು ಪೀಠ ಹೇಳಿದೆ.
ದೆಹಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅನುವು ಮಾಡಿಕೊಡುವುದಕ್ಕಾಗಿ ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಕೂಡಲೇ ಪ್ರಕಟಿಸುವಂತೆ ತ್ವರಿತಗೊಳಿಸುವಂತೆ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಗೆ (ಎನ್‌ಐಒಎಸ್) ನಿರ್ದೇಶನ ನೀಡಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಜೂನ್ 19 ರಿಂದ ಪ್ರಾರಂಭವಾಗುವ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಎರಡು ದಿನಗಳ ಕಾಲಾವಕಾಶ ನೀಡುವುದಕ್ಕಾಗಿ ಜೂನ್ 17ರೊಳಗೆ ಫಲಿತಾಂಶ ಘೋಷಿಸುವಂತೆ ನ್ಯಾಯಾಲಯ ಎನ್‌ಐಒಎಸ್‌ಗೆ ನಿರ್ದೇಶನ ನೀಡಿದೆ.
ಹನ್ನೆರಡನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿನ ವಿಳಂಬಕ್ಕೆ ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ ಎಂದು ಅದು ಹೇಳಿದೆ.
ದೆಹಲಿಯ ಪ್ರಮುಖ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳನ್ನುಒದಗಿಸುವ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಜಂಟಿ ಪ್ರವೇಶ ಮಂಡಳಿಗೆ (ಜೆಎಸಿ), ಹನ್ನೆರಡನೇ ತರಗತಿ ಫಲಿತಾಂಶ ಸಕಾಲದಲ್ಲಿ ಪ್ರಕಟವಾಗದಿದ್ದರೂ, ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಅದು ಆದೇಶಿಸಿದೆ.
2025ರ ಜೆಇಇ (ಮುಖ್ಯ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜೆಎಸಿ ನಡೆಸುವ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ.
ಆದರೆ, ಮಂಡಳಿ ಪರೀಕ್ಷೆಯ ಫಲಿತಾಂಶಗಳನ್ನು ಎನ್‌ಐಒಎಸ್ ಇನ್ನೂ ಘೋಷಿಸದ ಕಾರಣ ಅವರಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಜೆಎಸಿಯ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಲು ಅಭ್ಯರ್ಥಿಗಳಿಗೆ ಹನ್ನೆರಡನೇ ತರಗತಿಯ ಫಲಿತಾಂಶಗಳು ಅರ್ಹತಾ ಮಾನದಂಡವಾಗಿ ಕಾರ್ಯನಿರ್ವಹಿಸುತ್ತವೆ. ನೋಂದಣಿಗೆ ಜೂನ್ 2 ಕೊನೆಯ ದಿನವಾಗಿತ್ತು.
ಕಕ್ಷಿದಾರರ ವಾದ ಆಲಿಸಿದ ನ್ಯಾಯಾಲಯ, ಹಿಂದಿನ ಅವಕಾಶವನ್ನು ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ ಜೂನ್ 19ರ ಒಂದು ದಿನದ ಕಾಲಾವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 7ರಂದು ನಡೆಯಲಿದೆ.