ಅಡ್ಡದಾರಿ ಹಿಡಿದು ಪರೀಕ್ಷೆ ಬರೆದವರು ದೇಶ ಕಟ್ಟಲು ಕೊಡುಗೆ ನೀಡಲಾರರು: ಕಠಿಣ ಕ್ರಮಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ʼವಾಮ ಮಾರ್ಗʼ ಹಿಡಿದಿದ್ದಕ್ಕಾಗಿ ತನ್ನ ಪರೀಕ್ಷೆ ರದ್ದುಗೊಳಿಸಿದ್ದ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದ ಆದೇಶ ಪ್ರಶ್ನಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯ ಅರ್ಜಿಯನ್ನು ವಜಾಗೊಳಿಸಿದ ಪೀಠ.
Delhi High Court
Delhi High Court
Published on

ಪರೀಕ್ಷೆಗಳಲ್ಲಿ ವಾಮ ಮಾರ್ಗ ಬಳಸಿ ಸಿಕ್ಕಿ ಹಾಕಿಕೊಳ್ಳದೆ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಯೋಗೇಶ್ ಪರಿಹಾರ್ ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತಿತರರ ನಡುವಣ ಪ್ರಕರಣ].

ಅಂತಹ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರಿಗೆ ʼಪಾಠʼ ಕಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ಪೀಠ ತಿಳಿಸಿದೆ.

“ಅಕ್ರಮ ಮಾರ್ಗಗಳನ್ನು ಅನುಸರಿಸಿ ಅದರಿಂದ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳು ಈ ದೇಶ  ನಿರ್ಮಿಸಲು ಸಾಧ್ಯವಿಲ್ಲ. ಅವರ ಬಗ್ಗೆ ಮೃದು ನಿಲುವು ತಳೆಯಲಾಗದು. ತಮ್ಮ ಮುಂದಿನ ಜೀವನದಲ್ಲಿ ಅನ್ಯಾಯದ ಮಾರ್ಗಗಳನ್ನು ಅಳವಡಿಸಿಕೊಳ್ಳದಂತೆ ಅವರಿಗೆ ಪಾಠ ಕಲಿಸಬೇಕು” ಎಂದು ಪೀಠ ಹೇಳಿದೆ.   

ಎರಡನೇ ಸೆಮಿಸ್ಟರ್‌ ಪರೀಕ್ಷೆಯ ಎರಡು ಪಠ್ಯ ವಿಷಯಗಳಲ್ಲಿ ಅಕ್ರಮವೆಸಗಿದ್ದ ಹಿನ್ನೆಲೆಯಲ್ಲಿ ತನ್ನ ಪರೀಕ್ಷೆ ರದ್ದುಗೊಳಿಸಿದ್ದ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದ ಆದೇಶ ಪ್ರಶ್ನಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಯೋಗೇಶ್ ಪರಿಹಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಕೋಕ್- ಕುಕ್ ʼಕೋಲಾʼಹಲ: ಮಧ್ಯಸ್ಥಿಕೆಯ ಮಾರ್ಗ ತೋರಿದ ದೆಹಲಿ ಹೈಕೋರ್ಟ್

ವಿವಿ ಆದೇಶದಲ್ಲಿ ಮಧ್ಯಪ್ರವೇಶಿಸಲು ಈ ಹಿಂದೆ ಏಕಸದಸ್ಯ ಪೀಠ ಕೂಡ ನಿರಾಕರಿಸಿತ್ತು ಇಪ್ಪಪತ್ತೆರಡು ವಿದ್ಯಾರ್ಥಿಗಳು ʼಆನ್ಸ್‌ʼ ಹೆಸರಿನ ವಾಟ್ಸಾಪ್‌ ಗ್ರೂಪ್‌ ರಚಿಸಿಕೊಂಡು ಪ್ರಶ್ನೆಗಳಿಗೆ ಉತ್ತರ ಹಂಚಿಕೊಳ್ಳುತ್ತಿದ್ದ ವಿಚಾರ ಬೇರೊಬ್ಬ ವಿದ್ಯಾರ್ಥಿಯ ಮೊಬೈಲ್‌ ಫೋನ್‌ನಿಂದಾಗಿ ಬೆಳಕಿಗೆ ಬಂದಿತ್ತು.

ಯೋಗೇಶ್‌ ಆ ಗುಂಪಿನ ಭಾಗವಾಗಿದ್ದ ಹಿನ್ನೆಲೆಯಲ್ಲಿ ವಿವಿ ಕುಲಪತಿ ಆತನ ಪರೀಕ್ಷೆ ರದ್ದುಗೊಳಿಸಿದ್ದರು. ಅಷ್ಟೇ ಅಲ್ಲದೆ ಮೂರನೇ ಸೆಮಿಸ್ಟರ್‌ಗೆ ನೋಂದಾಯಿಸಿಕೊಳ್ಳದೆ ಎರಡನೇ ಸೆಮಿಸ್ಟರ್‌ನಲ್ಲಿಯೇ ಮುಂದುವರೆಯುವಂತೆ ಅವರು ಸೂಚಿಸಿದ್ದರು.

ಮಂಡಿಸಲಾದ ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಉಪಕುಲಪತಿಗಳ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.

Kannada Bar & Bench
kannada.barandbench.com