ʼಲವ್ ಯು ರಚ್ಚುʼ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಂಗಳವಾರ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಚಿತ್ರ ನಿರ್ದೇಶಕ ಶಂಕರ್, ಸಾಹಸ ಸಂಯೋಜಕ ವಿನೋದ್ ಮತ್ತು ಕ್ರೇನ್ ಚಾಲಕ ಮಹೇಂದ್ರ ಅವರನ್ನು ಪೊಲೀಸರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮಾ ಲಕ್ಷ್ಮಿ ಬಿ ಅವರ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆಗಸ್ಟ್ 24ರ ವರೆಗೆ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಜೋಗರದೊಡ್ಡಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಸೋಮವಾರ ಘಟನೆ ನಡೆದಿತ್ತು. ವೈರ್ ಎಳೆಯುವ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ವಿವೇಕ್ ಮತ್ತು ರಂಜಿತ್ ಇಬ್ಬರು ಗಾಯಗೊಂಡಿದ್ದರು. ಈ ಪೈಕಿ ವಿವೇಕ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.
ಕ್ರೇನ್ ಬಳಸಿ ಸಾಹಸ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕ್ರೇನ್‌ಗೆ 11 ಕೆ ವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಘಟನೆ ವೇಳೆ ನಾಯಕ ನಟ ಅಜಯ್ ರಾವ್ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್, ಚಿತ್ರೀಕರಣದ ಉಸ್ತುವಾರಿ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹೇಂದ್ರ ಅವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಾಪಕ ಗುರು ದೇಶಪಾಂಡೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.