ಮುಸ್ಲಿಮ್ ಸಮುದಾಯವರು ಹೇಗೆ ನಾಗರಿಕ ಸೇವೆಗೆ ನುಸುಳುತ್ತಿದ್ದಾರೆ ಎಂಬ ಕುರಿತ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿವಾದಿಯ ಸ್ಥಾನದಲ್ಲಿ ನಿಂತಿರುವ ವಿವಾದಿತ ಸುದರ್ಶನ್ ಟಿವಿಯು ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸುದರ್ಶನ್ ಟಿವಿಯ ಲಕ್ಷಾಂತರ ಮತ್ತು ಕೋಟ್ಯಂತರ ನೋಡುಗರು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಕಾನೂನು ಪ್ರಕ್ರಿಯೆಯ ನೇರ ಪ್ರಸಾರ ನೋಡಲು ಬಯಸಿದ್ದಾರೆ. “ವಾದಿ-ಪ್ರತಿವಾದಿಗಳು ಎತ್ತುವ ಅಂಶಗಳನ್ನು ಆಲಿಸಲು ನೋಡುಗರು ಬಯಸಿದ್ದಾರೆ” ಎಂದಿದೆ.
ಸ್ವಪ್ನಿಲ್ ತ್ರಿಪಾಠಿ ವರ್ಸಸ್ ಭಾರತೀಯ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ನೇರ ಪ್ರಸಾರಕ್ಕೆ ಅನುಮತಿಸಲಾಗಿತ್ತು ಎಂದು ತನ್ನ ವಾದಕ್ಕೆ ಪೂರಕವಾಗಿ ವಿಚಾರ ಪ್ರಸ್ತಾಪಿಸಿರುವ ಸುದರ್ಶನ್ ಟಿವಿಯ ವಕೀಲ ವಿಷ್ಣು ಶಂಕರ್ ಜೈನ್ ಅವರು “ನಮ್ಮ ನ್ಯಾಯಿಕ ವ್ಯವಸ್ಥೆಯು ಮುಕ್ತ ನ್ಯಾಯ ವ್ಯವಸ್ಥೆಗೆ ಹೆಸರಾಗಿದೆ” ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಮತ್ತು ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ನಿರೂಪಕ ಸುರೇಶ ಚವ್ಹಾಣ್ಕೆ ಅವರು ನ್ಯಾಯಾಲಯದ ವಿಚಾರಣೆಯನ್ನು ನೇರ ಪ್ರಸಾರ ಮಾಡಲು ಅಗತ್ಯವಾದ ಎಲ್ಲಾ ತಾಂತ್ರಿಕ ನೆರವು ಕಲ್ಪಿಸಲು ಸಿದ್ಧವಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರು ನಾಗರಿಕ ಸೇವೆಗೆ ನುಸುಳುತ್ತಿದ್ದಾರೆ ಎಂದು ಹೇಳುವ ವಿವಾದಿತ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಸುದರ್ಶನ್ ಟಿವಿಯು “ದೇಶಕ್ಕೆ ಅಪಚಾರ ಎಸಗುತ್ತಿದೆ” ಎಂದಿದ್ದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸೆಪ್ಟೆಂಬರ್ 16ರಂದು ಕಾರ್ಯಕ್ರಮ ಪ್ರಸಾರಕ್ಕೆ ತಡೆ ವಿಧಿಸಿತ್ತು.