ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೋರ್ಟ್ ಹಾಲ್‌ನ ಸಂಖ್ಯೆ–1ರಲ್ಲಿ ಬುಧವಾರ ಮಧ್ಯಾಹ್ನ ಮೈಸೂರಿನ ಚಿನ್ನಂ ಶ್ರೀನಿವಾಸ್ (51) ಎಂಬುವವರು ರೇಜರ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಶಿವಾಜಿನಗರ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಸ್ತ್ರಚಿಕಿತ್ಸೆ ನಡೆಸಿ ಕುತ್ತಿಗೆ ಭಾಗಕ್ಕೆ 9 ಹೊಲಿಗೆ ಹಾಕಲಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಡಾ. ಎಚ್ ಪಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಶಿಷ್ಟಾಚಾರದ ವಿಭಾಗೀಯ ಪೀಠ ವಿಚಾರಣೆ ನಡೆಸುವ ವೇಳೆ ಈ ಘಟನೆ ನಡೆದಿದೆ.
ಮೈಸೂರಿನ ವಿಜಯನಗರದ ನಿವಾಸಿ ಶ್ರೀನಿವಾಸ್, ತಮ್ಮ ಬಳಿಯಿದ್ದ ಕಡತದೊಂದಿಗೆ ಪೀಠದ ಎದುರು ಹಾಜರಾದರು. ತಕ್ಷಣವೇ ಅವರು ತಂದಿದ್ದ ರೇಜರ್‌ನಿಂದ ತಮ್ಮ ಕತ್ತು ಕೊಯ್ದುಕೊಂಡರು. “ಶ್ರೀನಿವಾಸ್ ಅವರು ದಾಖಲೆಗಳ ಮಧ್ಯದಲ್ಲಿ ಬ್ಲೇಡ್ ಇಟ್ಟುಕೊಂಡು ಹೈಕೋರ್ಟ್ ಒಳಕ್ಕೆ ಬಂದಿದ್ದರು” ಎಂದು ಮೂಲಗಳು ತಿಳಿಸಿವೆ.
“ಮೈಸೂರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಲಾಭ ಹಂಚಿಕೊಳ್ಳುವ ಸಂಬಂಧ ವ್ಯಕ್ತಿಯೊಬ್ಬರ ಜೊತೆಗೆ ಶ್ರೀನಿವಾಸ್ ಅವರು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಆ ವ್ಯಕ್ತಿ ಲಕ್ಷಾಂತರ ರೂಪಾಯಿ ವಂಚಿಸಿದ್ದು, ವಿಜಯನಗರ ಪೊಲೀಸ್ ಠಾಣೆಗೆ ಈ ಹಿಂದೆ ಶ್ರೀನಿವಾಸ್ ದೂರು ನೀಡಿದ್ದರು. ಶ್ರೀನಿವಾಸ್ ದಾಖಲಿಸಿದ್ದ ಎಫ್‌ಐಆರ್ ಪ್ರಶ್ನಿಸಿ ಆ ವ್ಯಕ್ತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿ, ಕಳೆದ ವರ್ಷವೇ ಅರ್ಜಿ ವಜಾಗೊಳಿಸಿತ್ತು. ಈ ಪ್ರಕರಣದ ವಿಚಾರವನ್ನು ದಾಖಲೆಗಳ ಸಹಿತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲು ಶ್ರೀನಿವಾಸ್ ಬುಧವಾರ ಬಂದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೈಕೋರ್ಟ್ ಭದ್ರತಾ ವಿಭಾಗದ ಇನ್ಸ್‌ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್ ಟಿ ಶೇಖರ್ ತಿಳಿಸಿದ್ದಾರೆ.