ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಐದನೇ ಸ್ಥಾನದಲ್ಲಿ ಕರ್ನಾಟಕ: ಎನ್‌ಸಿಆರ್‌ಬಿ ವರದಿ

ಕಳೆದ ವರ್ಷ ಕರ್ನಾಟಕದಲ್ಲಿ 1,855 ಗೃಹಿಣಿಯರು, 1,414 ವೃತ್ತಿಪರರು ಹಾಗೂ 181 ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದು ಬಂದಿದೆ.
Suicide, NCRB stats
Suicide, NCRB stats

ಕಳೆದ ವರ್ಷ ದೇಶದಲ್ಲಿ ವರದಿಯಾದ ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 12,259 ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದ್ದು, ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಶೇ. 8ರಷ್ಟು ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು (19,909) ಸಂಭವಿಸಿದ್ದರೆ, ತಮಿಳುನಾಡು (16,883), ಮಧ್ಯಪ್ರದೇಶ (14,578) ಮತ್ತು ಪಶ್ಚಿಮ ಬಂಗಾಳ (13,103) ನಂತರದ ಸ್ಥಾನದಲ್ಲಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) 2020ನೇ ಸಾಲಿನ ವರದಿ ತಿಳಿಸಿದೆ.

ಕರ್ನಾಟಕದಲ್ಲಿ 9,191 ಪುರುಷರು ಮತ್ತು 3,067 ಮಹಿಳೆಯರು ಹಾಗೂ ಒಬ್ಬರು ತೃತೀಯ ಲಿಂಗಿ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅನಾರೋಗ್ಯದಿಂದ 3,133 ಮಂದಿ, ಕೌಟುಂಬಿಕ ಸಮಸ್ಯೆಗಳಿಂದ 3,445 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನಲ್ಲಿ ಎರಡು ಸಾವಿರ ಮಂದಿ ಆತ್ಮಹತ್ಯೆ

ಮೆಟ್ರೋ ನಗರಗಳು ಸೇರಿದಂತೆ ದೇಶದ 53 ನಗರಗಳ ಪೈಕಿ ಬೆಂಗಳೂರಿನಲ್ಲಿ 2,196 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಲಿಕಾನ್‌ ಸಿಟಿಯು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೆಟ್ರೋ ನಗರಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೆ ನಂತರದ ಸ್ಥಾನದಲ್ಲಿ ಚೆನ್ನೈ ಇದೆ.

ಬೆಂಗಳೂರಿನಲ್ಲಿ 1,544 ಪುರುಷರು ಮತ್ತು 652 ಮಹಿಳೆಯರು ಸೇರಿದಂತೆ ಒಟ್ಟಾರೆ 2,196 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ 538 ಪುರುಷರು ಮತ್ತು 324 ಮಹಿಳೆಯರು ಸೇರಿದಂತೆ 862 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಅನಾರೋಗ್ಯದಿಂದ 375 ಪುರುಷರು ಮತ್ತು 174 ಮಂದಿ ಮಹಿಳೆಯರು ಸೇರಿದಂತೆ 549 ಮಂದಿ ಸಾವನ್ನಪ್ಪಿದ್ದಾರೆ.

ಸಾಲದ ಹೊರೆ ತಾಳಲಾರದೆ ಅಥವಾ ದಿವಾಳಿಯಾಗಿದ್ದರಿಂದಾಗಿ ಬೆಂಗಳೂರಿನಲ್ಲಿ 117 ಪುರುಷರು ಮತ್ತು 13 ಮಹಿಳೆಯರು ಸೇರಿದಂತೆ 130 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈವಾಹಿಕ ಸಮಸ್ಯೆಗಳ ಕಾರಣಕ್ಕೆ 22 ಪುರುಷರು ಮತ್ತು 13 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣಿ ಸಮಸ್ಯೆಗಳಿಂದ ಆರು ಮಂದಿ, ಅಕ್ರಮ ಸಂಬಂಧ ಕಾರಣಕ್ಕೆ ಎಂಟು ಮಂದಿ, ವಿಚ್ಛೇದನ ಕಾರಣಕ್ಕೆ ಐವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ನಪಾಸಾದ ಕಾರಣಕ್ಕೆ 40 ಮಂದಿ ಹಾಗೂ ಬಂಜೆತನ ಅಥವಾ ನಪುಂಸಕತ್ವದ ಕಾರಣಕ್ಕೆ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆರು ಮಂದಿ, ಪಾರ್ಶ್ವವಾಯು/ಲಕ್ವದಿಂದ ಎಂಟು ಮಂದಿ ಹಾಗೂ ಮನೋ ರೋಗಗಳಿಂದ ಬಳಲುತ್ತಿದ್ದ 181 ಪುರುಷರು ಹಾಗೂ 77 ಮಹಿಳೆಯರು ಸೇರಿದಂತೆ ಒಟ್ಟು 258 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದೀರ್ಘ ಅನಾರೋಗ್ಯದಿಂದ ಬಳಲು 277 ಮಂದಿ, ಆತ್ಮೀಯರ ಅಗಲಿಕೆಯಿಂದ ಮನನೊಂದು 21 ಮಂದಿ ಹಾಗೂ ಮಾದಕ ವಸ್ತುಗಳ/ಮದ್ಯ ವ್ಯವಸನಕ್ಕೆ ದಾಸರಾಗಿದ್ದ 132 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಘನತೆಗೆ ಕುಂದು ಉಂಟಾದ ಕಾರಣಕ್ಕೆ ಐವರು, ಸೈದ್ಧಾಂತಿಕ ಕಾರಣಗಳು/ವ್ಯಕ್ತಿ ಪೂಜೆ ಕಾರಣಕ್ಕೆ ಹಾಗೂ ಪ್ರೇಮ ವೈಫಲ್ಯದಿಂದಾಗಿ 135 ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ, ರೋಗ ವರದಕ್ಷಿಣೆ ಕಿರುಕುಳ, ಬಡತನದಿಂದ ಆತ್ಮಹತ್ಯೆ

ಸಾಲ ಅಥವಾ ದಿವಾಳಿಯಾಗಿದ್ದರಿಂದ ಕರ್ನಾಟಕದಲ್ಲಿ 982 ಪುರುಷರು ಮತ್ತು 43 ಮಹಿಳೆಯರು ಸೇರಿದಂತೆ ಒಟ್ಟು 1,025 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹ ಸಂಬಂಧಿತ ಕಾರಣಗಳಿಗಾಗಿ 266 ಪುರುಷರು ಮತ್ತು 148 ಮಹಿಳೆಯರು ಸೇರಿದಂತೆ ಒಟ್ಟು 414 ಮಂದಿ ಜೀವ ಕಳೆದುಕೊಂಡಿದ್ದಾರೆ. ವಿವಾಹ ಸಂಬಂಧಿತ ಸಮಸ್ಯೆಗಳು ಬಗೆಹರಿಯದ ಕಾರಣಕ್ಕೆ 136 ಪುರುಷರು ಮತ್ತು 74 ಮಹಿಳೆಯರಯ ಸೇರಿದಂತೆ ಒಟ್ಟು 210 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಸಂಬಂಧಿ ಕಾರಣಗಳಿಗೆ 23 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ರಮ ಸಂಬಂಧ ಕಾರಣಕ್ಕೆ 122 ಮಂದಿ, ವಿಚ್ಛೇದನದ ಕಾರಣಕ್ಕೆ 56 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತರೆ ಕಾರಣಗಳಿಗಾಗಿ ರಾಜ್ಯದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, 149 ಮಂದಿ ಪರೀಕ್ಷೆಯಲ್ಲಿ ನಪಾಸಾಗಿದ್ದಕ್ಕೆ, ನಪುಂಸಕತೆ ಅಥವಾ ಬಂಜೆತನ ಕಾರಣಕ್ಕೆ 53 ಮಂದಿ ಸಾವಿಗೀಡಾಗಿದ್ದಾರೆ. ಕ್ಯಾನ್ಸರ್‌ ಬೇನೆ ತಾಳಲಾರದೇ ಕರ್ನಾಟಕದಲ್ಲಿ 80 ಪುರುಷರು ಮತ್ತು 27 ಮಹಿಳೆಯರು ಸೇರಿದಂತೆ 107 ಮಂದಿ ಹಾಗೂ ಲಕ್ವ ಹೊಡೆದಿದ್ದ 83 ಪುರುಷರು ಮತ್ತು 51 ಮಹಿಳೆಯರು ಸೇರಿ 134 ಮಂದಿ, ಮನೋಬೇನೆಯಿಂದ ಬಳಲುತ್ತಿದ್ದ 1,728 ಪುರುಷರು ಹಾಗೂ 726 ಮಹಿಳೆಯರು ಹಾಗೂ ಒಬ್ಬರು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,455 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read
ಎನ್‌ಸಿಆರ್‌ಬಿ- 2020 ವರದಿ: ಕರ್ನಾಟಕವನ್ನು ಕಾಡುತ್ತಿರುವ ಸೈಬರ್ ಅಪರಾಧ; ಶಿಕ್ಷೆಯ ಪ್ರಮಾಣದಲ್ಲಿ ಇಳಿಕೆ

ಸುದೀರ್ಘ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾಗದೇ ಕರ್ನಾಟಕದಲ್ಲಿ 416 ಮಂದಿ ಸಾವನ್ನಪ್ಪಿದ್ದು, ಆತ್ಮೀಯರು ಸಾವನ್ನಪ್ಪಿದ್ದರಿಂದ ಮನನೊಂದು 182 ಮಂದಿ ಹಾಗೂ ಮಾದಕ ವಸ್ತು/ಮದ್ಯ ವ್ಯಸನಿಗಳಾಗಿದ್ದ 1,443 ಪುರುಷರು ಹಾಗೂ 34 ಮಹಿಳೆಯರನ್ನು ಒಳಗೊಂಡು 1,477 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಘನತಗೆ ಕುಂದುಂಟಾಗಿದ್ದಕ್ಕೆ 111 ಮಂದಿ, ಸೈದ್ಧಾಂತಿಕ ಕಾರಣ/ ವ್ಯಕ್ತಿ ಪೂಜೆಯ ಅಭಿಮಾನದ ಕಾರಣಕ್ಕೆ ಇಬ್ಬರು ಹಾಗೂ ಪ್ರೇಮ ವೈಫಲ್ಯದಿಂದಾಗಿ 188 ಮಂದಿ ಯುವಕರು ಹಾಗೂ 125 ಯುವತಿಯರು ಸೇರಿದಂತೆ 313 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡತನ (227), ನಿರುದ್ಯೋಗ (720) ಮತ್ತು ಆಸ್ತಿ ವಿವಾದಗಳ (133) ಕಾರಣಕ್ಕೆ ಆತ್ಮಹತ್ಯೆ ನಡೆದಿವೆ. ಅಕ್ರಮ ಸಂಬಂಧ ಗುಮಾನಿ (83), ಕಾನೂನುಬಾಹಿರವಾಗಿ ಗರ್ಭಿಣಿ (ಇಬ್ಬರು) ಹಾಗೂ ಅತ್ಯಾಚಾರ, ದೈಹಿಕ ದೌರ್ಜನ್ಯದಿಂದ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಪರ ಸಮಸ್ಯೆಗಳು (206), ಕಾರಣವಿಲ್ಲದೇ (421) ಇತರೆ ಸಮಸ್ಯೆಗಳಿಂದ (163) ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ 1,855 ಗೃಹಿಣಿಯರು, 1,414 ವೃತ್ತಿಪರರು ಹಾಗೂ 181 ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Kannada Bar & Bench
kannada.barandbench.com