ಅಲೋಪತಿ ವಿರುದ್ಧ ರಾಮದೇವ್‌ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ದೆಹಲಿ ವೈದ್ಯಕೀಯ ಸಂಸ್ಥೆಯ ಸದಸ್ಯರಿಗೆ ಬಾಬಾ ರಾಮದೇವ್‌ ಅವರ ಹೇಳಿಕೆ ಆಘಾತ ಉಂಟು ಮಾಡಿದೆ ಎಂಬುದನ್ನು ಮೇಲ್ನೋಟಕ್ಕೆ ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.
ಅಲೋಪತಿ ವಿರುದ್ಧ ರಾಮದೇವ್‌ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ಅಲೋಪತಿ ಔಷಧ ಬಳಕೆಯ ವಿರುದ್ಧ ಮತ್ತು ಪತಂಜಲಿಯ ಕೊರೊನಿಲ್‌ ಪರವಾಗಿ ಹೇಳಿಕೆ ನೀಡದಂತೆ ಬಾಬಾ ರಾಮದೇವ್‌ಗೆ ನಿರ್ಬಂಧ ವಿಧಿಸುವುದಕ್ಕೆ ದೆಹಲಿ ಹೈಕೋರ್ಟ್‌ ಗುರುವಾರ ನಿರಾಕರಿಸಿದ್ದು, ರಾಮದೇವ್‌ ಹೇಳಿಕೆಗಳು ಕೇವಲ ಅಭಿಪ್ರಾಯವಾಗಿದೆ. ಅದನ್ನು ವಾಕ್‌ ಸ್ವಾತಂತ್ರ್ಯದ ಅಡಿ ನಿಕಷಕ್ಕೆ ಒಡ್ಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ವೈದ್ಯಕೀಯ ಸಂಸ್ಥೆ (ಡಿಎಂಎ) ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿ ಶಂಕರ್‌ ಅವರಿದ್ದ ಏಕಸದಸ್ಯ ಪೀಠವು “ನಾನು ಅಭಿಪ್ರಾಯದ ಬಗ್ಗೆಯಷ್ಟೇ ಮಾತನಾಡುತ್ತಿದ್ದೇನೆ. ಅವರ ಹೇಳಿಕೆಗೆ ನಿರ್ಬಂಧ ವಿಧಿಸುವ ವಿಚಾರವನ್ನು ಸಂವಿಧಾನದ 19(1)(ಎ) ವಿಧಿ ಅಡಿ ಪರಿಶೀಲಿಸಬೇಕಿದೆ… ಆ ಕುರಿತಾದ ಹಕ್ಕಿದೆ… ಬಳಸಿರುವ ಪರಿಭಾಷೆ ಬಹುಶಃ ನಿಂದನಾತ್ಮಕವಾಗಿರಬಹುದು” ಎಂದು ಅಭಿಪ್ರಾಯಪಟ್ಟಿತು.

ಕೋವಿಡ್‌ ಗುಣಪಡಿಸುವ ಔಷಧ ಎಂದು ಪತಂಜಲಿ ಕೊರೊನಿಲ್‌ ಕುರಿತು ಸುಳ್ಳು ಮಾಹಿತಿ ನೀಡುವುದರಿಂದ ಬಾಬಾ ರಾಮದೇವ್‌ ಅವರಿಗೆ ನಿರ್ಬಂಧ ವಿಧಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಸಮನ್ಸ್‌ ಜಾರಿಗೊಳಿಸಿತು.

“ವಿಶೇಷವಾಗಿ ಕೋವಿಡ್‌ಗೆ ಪರಿಹಾರದ ವಿಚಾರದಲ್ಲಿ ರಾಮದೇವ್‌ ಹೇಳಿಕೆ ಪೂರ್ವಾಗ್ರಹದಿಂದ ಕೂಡಿದೆ ಎಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು, ವಾದದ ವೇಳೆಯೂ ಅದನ್ನೇ ಪ್ರಸ್ತಾಪಿಸಲಾಗಿದೆ. ಮೇಲ್ನೋಟಕ್ಕೆ ರಾಮದೇವ್‌ ಹೇಳಿಕೆಯು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್‌ 91(1) ಗೆ ಒಳಪಡುತ್ತದೆ” ಎಂದು ಅಭಿಪ್ರಾಯಪಟ್ಟಿತು. ಆದರೆ, ವಾದದ ವೇಳೆ ಡಿಎಂಎ ಪರ ವಕೀಲರು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿದೆ ಎನ್ನುವ ಸುತ್ತ ವಾದ ಮಂಡಿಸಲು ತೊಡಗಿದಾಗ ಹಾಗಾದರೆ, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವುದು ಒಳಿತು ಎಂದೂ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಡಿಎಂಎ ಸದಸ್ಯರಿಗೆ ರಾಮದೇವ್‌ ಅವರ ಹೇಳಿಕೆಯಿಂದ ಹಾನಿಯಾಗಿದೆ ಎಂಬುದನ್ನು ಒಪ್ಪಲಾಗದು ಎಂದಿರುವ ಪೀಠವು, ದಾವೆ ಹೂಡುವಾಗ ಶಿಸ್ತು ಪಾಲಿಸಲಾಗಿಲ್ಲ. ಹೀಗಾಗಿ ಮನವಿಯಲ್ಲಿ ತಿದ್ದುಪಡಿ ಮಾಡಬೇಕು ಎಂದಿತು.

“ಇದು ಸಿಪಿಸಿ ಸೆಕ್ಷನ್‌ 91ರ ಅಡಿ ಪ್ರಕರಣವೇ? ಯಾವುದನ್ನೋ ಇದು ಸಾರ್ವಜನಿಕ ಹಿತಾಸಕ್ತಿ ಎಂದು ನೀವು ಇಲ್ಲಿ ಹೇಳಲಾಗದು. ರಾಮದೇವ್‌ ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಎನ್ನುವ ಬದಲು ಸಾಂಕ್ರಾಮಿಕತೆಯ ಸಂದರ್ಭದಲ್ಲಿ ನೀವು (ವೈದ್ಯರು) ರೋಗ ಪರಿಹರಿಸಲು ಹೆಚ್ಚು ಸಮಯ ವಿನಿಯೋಗಿಸಬೇಕೆ ವಿನಾ ನ್ಯಾಯಾಲಯದ ಸಮಯ ಪೋಲು ಮಾಡುವುದರಲ್ಲಿ ಅಲ್ಲ” ಎಂದು ಫಿರ್ಯಾದಿ ವಕೀಲರಿಗೆ ಪೀಠ ಕಟುವಾಗಿ ಹೇಳಿತು.

ವೈದ್ಯರ ನಾಗರಿಕ ಹಕ್ಕಿನ ಕುರಿತಾದ ಮನವಿ ಇದಾಗಿದೆ ಎಂದು ಫಿರ್ಯಾದಿ ಪರ ವಕೀಲ ರಾಜೀವ್‌ ದತ್ತ ಪೀಠದ ಗಮನಕ್ಕೆ ತಂದರು. ಸಾರ್ವಜನಿಕರಿಗೆ ರಾಮದೇವ್‌ ಸಮಸ್ಯೆ ಉಂಟು ಮಾಡುತ್ತಿದ್ದಾರೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿದಾಗ “ಫಿರ್ಯಾದಿ ಸದಸ್ಯರಿಗೆ ಅವರ ಹೇಳಿಕೆಯಿಂದ ಸಮಸ್ಯೆಯಾಗಿದೆ.. ಬಹಿರಂಗ ಹೇಳಿಕೆಯು ಆಘಾತ ಉಂಟು ಮಾಡುತ್ತದೆ… ರಾಮದೇವ್‌ ಅವರು ವೈದ್ಯರ ಹೆಸರು ಹಿಡಿದು ಹೇಳುತ್ತಿದ್ದಾರೆ. ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ನಾವು ಅನುಸರಿಸುತ್ತಿರುವ ವಿಜ್ಞಾನ ಸುಳ್ಳು ಎಂದು ಹೇಳುತ್ತಿದ್ದಾರೆ” ಎಂದರು.

ಕೋವಿಡ್‌ಗೆ ಕೊರೊನಿಲ್‌ ಪರಿಹಾರವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ, ಅದನ್ನು ಪ್ರಚಾರ ಮಾಡುವಂತಿಲ್ಲ. ಕೊರೊನಿಲ್‌ ರೋಗನಿರೋಧಕ ಶಕ್ತಿ ವರ್ಧಕ ಔಷಧ ಎಂದು ರಾಮದೇವ್‌ ಸ್ಪಷ್ಟಪಡಿಸಿದ್ದಾರೆ ಎಂದು ದತ್ತ ಹೇಳಿದರು. ಆಗ ಪೀಠವು “ರಾಮದೇವ್‌ ಸ್ಪಷ್ಟನೆ ನೀಡಿದ್ದಾರೆ. ಅದನ್ನು ಮಾಡಲು ಅವರಿಗೆ ಅರ್ಹತೆ ಇದೆ. ಹೀಗಾಗಿ ನಿಮ್ಮ ಇಡೀ ಅಹವಾಲೇ ಅರ್ಥ ಕಳೆದುಕೊಳ್ಳುತ್ತದೆ… ರಾಮದೇವ್‌ ರೋಗನಿರೋಧಕ ಶಕ್ತಿ ವರ್ಧಕ ಎಂದು ಹೇಳಿದ್ದಾರೆ” ಎಂದರು.

ಕೋವಿಡ್‌ಗೆ ರಾಮಬಾಣ ಎಂದು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಪಂತಜಲಿಯು 25 ಕೋಟಿ ರೂಪಾಯಿಯಷ್ಟು ಉತ್ಪನ್ನ ಮಾರಾಟ ಮಾಡಿ ಹಣ ಗಳಿಸಿದೆ ಎಂದು ದತ್ತ ಹೇಳಿದರು. ಆಗ ಪೀಠವು “ಜನರು ಕೊರೊನಿಲ್‌ ಖರೀದಿಸಿದ್ದಕ್ಕೆ ರಾಮದೇವ್‌ ಅವರನ್ನು ನಿಂದಿಸಲಾಗುತ್ತದೆಯೇ?” ಎಂದಿತು. ದೇಶದಲ್ಲಿ ಅವರನ್ನು ಅಪಾರ ಸಂಖ್ಯೆಯ ಜನರು ಅವರನ್ನು ಅನುಸರಿಸುತ್ತಾರೆ. ಪ್ರತಿವಾದಿ ರಾಮದೇವ್‌ ಸೃಷ್ಟಿಸಿರುವ ಹಳ್ಳಕ್ಕೆ ಅನಕ್ಷರಸ್ಥರಾದ ಲಕ್ಷಾಂತರ ಜನರನ್ನು ಕೆಡವುತ್ತಿದ್ದಾರೆ” ಎಂದು ದತ್ತ ಹೇಳಿದರು.

Also Read
ಕೊರೊನಿಲ್ ಬಗ್ಗೆ ಸುಳ್ಳು ಮಾಹಿತಿ ಹರಡದಂತೆ ಬಾಬಾ ರಾಮದೇವ್‌ಗೆ ಸೂಚಿಸಲು ದೆಹಲಿ ಹೈಕೋರ್ಟ್‌ಗೆ ವೈದ್ಯಕೀಯ ಸಂಘ ಮನವಿ

“ವೈದ್ಯರು ನೀಡಿದ ಅಲೋಪತಿ ಔಷಧಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ ಎಂದು ರಾಮದೇವ್‌ ಹೇಳುತ್ತಾರೆ… ನಾವು ಅವಿವೇಕಿಗಳು ಎಂದು ಆತ ಹೇಳುತ್ತಾರೆ…ಸಾಂಕ್ರಾಮಿಕತೆಯ ಈ ಸಂದರ್ಭಲ್ಲಿ ಅದು ವಿಜ್ಞಾನಕ್ಕೆ ಮಾಡುವ ವಂಚನೆಯಲ್ಲವೇ? ನಾವು ಲಕ್ಷಾಂತರ ಮಂದಿಯನ್ನು ರೋಗದಿಂದ ಗುಣಮುಖಗೊಳಿಸುತ್ತಿದ್ದೇವೆ. ನಮ್ಮನ್ನು ವಾರಿಯರ್ಸ್‌ ಎನ್ನಲಾಗುತ್ತಿದೆ. ರೋಗದಿಂದ 600 ವೈದ್ಯರು ಸಾವನ್ನಪ್ಪಿದ್ದಾರೆ” ಎಂದು ರಾಮದೇವ್‌ ಅವರ ವಿಡಿಯೊ ಮತ್ತು ಹೇಳಿಕೆಗಳತ್ತ ದತ್ತ ಮತ್ತು ವಕೀಲ ಅಂಕುರ್‌ ಮಹಿಂದ್ರೋ ಅವರು ಪೀಠದ ಗಮನಸೆಳೆದರು.

“ರಾಮದೇವ ಸಹ ವ್ಯಕ್ತಿ… ಅವರಿಗೆ ಆಲೋಪಥಿಯ ಮೇಲೆ ವಿಶ್ವಾಸವಿಲ್ಲ. ಎಲ್ಲವನ್ನೂ ಯೋಗ ಮತ್ತು ಆಯುರ್ವೇದದಿಂದ ಗುಣಪಡಿಸಬಹುದು ಎಂದು ಅವರು ನಂಬಿದ್ದಾರೆ. ಅವರ ನಿಲುವು ಸರಿ ಅಥವಾ ತಪ್ಪಾಗಿರಬಹುದು” ಎಂದು ನ್ಯಾಯಾಲಯ ಹೇಳಿತು.

ರಾಮದೇವ್‌ ಅವರ ಪರ ಹಿರಿಯ ವಕೀಲ ರಾಜೀವ್‌ ನಾಯರ್‌ ಅವರು ಮನವಿಯ ನಿರ್ವಹಣೆಯ ಬಗ್ಗೆ ಪ್ರಸ್ತಾಪಿಸಿದರು. ಮೇ 22ರಂದು ರಾಮದೇವ್‌ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ ಎಂದರು. ಆಗ ಪೀಠವು “ಅಂಥ ಹೇಳಿಕೆ ನೀಡದಂತೆ ನಿಮ್ಮ ಕಕ್ಷಿದಾರರಿಗೆ ತಿಳಿ ಹೇಳಿ” ಎಂದಿತು. ಮೂರು ವಾರಗಳ ಕಾಲ ಪ್ರಕರಣವನ್ನು ಪೀಠ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com