ಭಾರತೀಯ ಕಾರ್ಮಿಕರ ಮೇಲೆ ದೌರ್ಜನ್ಯ, ಶೋಷಣೆ ಆರೋಪ: ಹಿಂದೂ ಸಂಘಟನೆ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದೂರು

ನ್ಯೂಜೆರ್ಸಿಯ ರಾಬಿನ್ಸ್‌ವಿಲ್‌ನಲ್ಲಿರುವ ಅಮೆರಿಕದ ಅತಿದೊಡ್ಡ ಹಿಂದೂ ದೇವಾಲಯವಾಗಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಕಾರ್ಮಿಕ ಕಾಯಿದೆಯನ್ನು ಉಲ್ಲಂಘಿಸಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗಿದೆ ಎಂದು ಮೊಕದ್ದಮೆಯಲ್ಲಿ ದೂರಲಾಗಿದೆ.
BAPS temple
BAPS temple Annie Correal/The New York Times

ಭಾರತೀಯ ವಲಸಿಗರನ್ನು ಬಲವಂತದ ದುಡಿಮೆಗೆ ನೂಕಿದ ಆರೋಪದ ಮೇಲೆ ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್‌ವಿಲ್‌ನಲ್ಲಿರುವ ಬೊಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ್‌ ಸ್ವಾಮಿನಾರಾಯಣ್ ಸಂಸ್ಥೆ (ಬಿಎಪಿಎಸ್) ವಿರುದ್ಧ ದಾವೆ ಹೂಡಲಾಗಿದೆ.

ಹಿಂದೂ ಸಂಘಟನೆಯ ಆದೇಶದ ಮೇರೆಗೆ ಕಾರ್ಮಿಕ ಕಾನೂನಿನ ಸಂಪೂರ್ಣ ಉಲ್ಲಂಘನೆಗೆ ಗುರಿಯಾದ 200ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರ ಪರವಾಗಿ ಅಮರಿಕಾದ ನ್ಯೂಜೆರ್ಸಿಯಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.

ನ್ಯೂಜೆರ್ಸಿಯಲ್ಲಿ ಕಲ್ಲಿನ ಕೆತ್ತನೆ ಕೆಲಸ ಮತ್ತು ಇತರ ನಿರ್ಮಾಣ ಕಾರ್ಯಗಳನ್ನು ಮಾಡಲು “ಆರ್ -1” ಧಾರ್ಮಿಕ ವೀಸಾದಡಿ ಕಾರ್ಮಿಕರನ್ನು ಭಾರತದಿಂದ ಅಮೆರಿಕಾಕ್ಕೆ ಕರೆದೊಯ್ಯಲಾಗಿತ್ತು. ಕಾರ್ಮಿಕರು ನ್ಯೂಜೆರ್ಸಿಯ ರಾಬಿನ್ಸ್‌ವಿಲ್‌ನಲ್ಲಿ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಅನೇಕ ವರ್ಷಗಳ ಕಾಲ ಕಳೆದಿದ್ದಾರೆ. ಇದು ಅಮೆರಿಕಾದ ಅತಿದೊಡ್ಡ ಹಿಂದೂ ದೇವಾಲಯವೆಂದು ಹೆಸರಿಸಲ್ಪಟ್ಟಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕಾರ್ಮಿಕರನ್ನು ಧಾರ್ಮಿಕ ಸ್ವಯಂಸೇವಕರಾಗಿ ಅಮೆರಿಕಾಗೆ ಕರೆತರಲಾಯಿತು ಎಂದು ಬಿಎಪಿಎಸ್ ಹೇಳಿಕೊಂಡಿದೆ. ಆದರೆ, ಕೆಲಸಗಾರರಿಗೆ ದೈಹಿಕ ದುಡಿಮೆಯ ಜವಾಬ್ದಾರಿ ನೀಡಲಾಗಿತ್ತು. ಕಾರ್ಮಿಕರನ್ನು ವಾರಕ್ಕೆ 87 ಗಂಟೆಗಳ ಕಾಲ ತಿಂಗಳಿಗೆ 450 ಡಾಲರ್‌ ಸಂಭಾವನೆಗೆ (ಆ ಸಂದರ್ಭದಲ್ಲಿ 28,500 ರಿಂದ 31,000 ರೂಪಾಯಿ) ಕೆಲಸ ಮಾಡುವಂತೆ ನೇಮಿಸಲಾಗಿತ್ತು. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕನಿಷ್ಠ ವೇತನಕ್ಕಿಂತಲೂ ಕಡಿಮೆಯಾಗಿದೆ. ಬೇಲಿ ಹಾಕಿದ್ದ, ಭದ್ರತೆ ಕಲ್ಪಿಸಲಾಗಿದ್ದ ಪ್ರದೇಶದಲ್ಲಿ ನೆಲೆಸಿ ಅಲ್ಲಿಯೇ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಬಿಎಪಿಎಸ್‌ ಜೊತೆ ಗುರುತಿಸಿಕೊಂಡಿದ್ದ ಮೇಲ್ವಿಚಾರಕರಿಲ್ಲದೆ ಕೆಲಸಗಾರರು ಹೊರಹೋಗುವಂತಿರಲಿಲ್ಲ ಎಂದು ದೂರಲಾಗಿದೆ.

ಕೆಲಸಗಾರರು ಅಮೆರಿಕ ತಲುಪಿದ ತಕ್ಷಣ ಅವರುಗಳ ಪಾಸ್‌ಪೋರ್ಟ್‌ ಅನ್ನು ಬಿಎಪಿಎಸ್‌ ವಶಪಡಿಸಿಕೊಂಡಿತ್ತು. ನ್ಯೂಜೆರ್ಸಿಯಿಂದ ಅವರು ಹೊರಹೋಗದಂತೆ ಹಾಗೂ ಅಲ್ಲಿನ ಕೆಲಸ ಪೂರ್ಣಗೊಳ್ಳುವವರೆಗೂ ಅವರ ಪೋಸ್‌ಪೋರ್ಟ್‌ಗಳನ್ನು ತನ್ನ ಬಳಿ ಇಟ್ಟುಕೊಂಡಿತ್ತು.

“ದೇವಾಲಯಕ್ಕೆ ಬರುವ ಹೊರಗಿನ ಸಂದರ್ಶಕರೊಂದಿಗೆ ಮಾತನಾಡದಂತೆ ಕಾರ್ಮಿಕರಿಗೆ ನಿಷೇಧ ವಿಧಿಸಲಾಗಿತ್ತು. ಈ ನಿಯಮವನ್ನು ಪಾಲಿಸಲು ವಿಫಲವಾದರೆ ಕಾರ್ಮಿಕರಿಗೆ ಪಾವತಿಸಲಾಗುತ್ತಿದ್ದ ಕಡಿಮೆ ವೇತನದಲ್ಲಿ ಮತ್ತಷ್ಟುನ್ನು ಕಡಿತಗೊಳಿಸುವ ಅಥವಾ ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಕ್ರಮ ಕೈಗೊಳ್ಳಲಾಗುತ್ತಿತ್ತು. ಇಲ್ಲಿಂದ ಹೊರಬಿದ್ದರೆ ಪೊಲೀಸರು ಅವರನ್ನು ಬಂಧಿಸಲಿದ್ದಾರೆ ಎಂದು ಮೇಲ್ವಿಚಾರಕರು ಕಾರ್ಮಿಕರಿಗೆ ಭಯ ಹುಟ್ಟಿಸುತ್ತಿದ್ದರು. ಆರ್ -1 ಕೆಲಸಗಾರರಾದ ಮೊಹಮ್ ಲಾಲ್ ಅವರು ದೇವಾಲಯದಲ್ಲಿ ಬಲವಂತದ ದುಡಿಮೆಯಿಂದ ಸಾವನ್ನಪ್ಪಿದ್ದರು. ಮೊಹಮ್‌ ಲಾಲ್‌ ಅಂತ್ಯಸಂಸ್ಕಾರವನ್ನು ಪ್ರತಿವಾದಿಗಳ ಧರ್ಮದ ರೀತಿಯಲ್ಲದೆ ಆತನ ಧರ್ಮದ ರೀತಿಯಲ್ಲಿ ನಡೆಸಬೇಕು ಹಾಗೂ ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕು ಎಂದು ಇತರ ಕಾರ್ಮಿಕರು ಒತ್ತಾಯಿಸಿದಾಗ ಅವರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ದಾವೆಯಲ್ಲಿ ತಿಳಿಸಲಾಗಿದೆ.

ಬಿಎಪಿಎಸ್‌ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿ ಸಮುದಾಯದಿಂದ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದು, “ಸಮಾಜದ ಅಂಚಿನಲ್ಲಿ ಆ ಕಾರ್ಮಿಕರ ಸಾಮಾಜಿಕ ಶ್ರೇಣಿಯನ್ನು ನೆನಪಿಸಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಿದ್ದಾರೆ” ಎಂದೂ ಆರೋಪಿಸಲಾಗಿದೆ.

ಅಮೆರಿಕದಲ್ಲಿ ದುಡಿಯುತ್ತಿರುವಾಗ ತಮ್ಮ ವೇತನ ಪಡೆಯಲು ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಬದಲಿಗೆ, ಭಾರತದ ತಮ್ಮ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದು, ಅದರಿಂದ ತಕ್ಷಣ ಹಣ ಪಡೆಯಲಾಗುತ್ತಿರಲಿಲ್ಲ. ಕೆಲಸದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎನ್ನುತ್ತಿದ್ದ ಬಿಎಪಿಎಸ್‌, ಇದಾಗಲೇ ಕಡಿಮೆ ನೀಡುತ್ತಿದ್ದ ವೇತನದಲ್ಲಿ ಮತ್ತೂ ಕಡಿತ ಮಾಡುತ್ತಿತ್ತು ಎಂದು ದೂರಲಾಗಿದೆ.

“…ತಮಗಾದ ಅನ್ಯಾಯಕ್ಕೆ ಪರಿಹಾರ ಪಡೆಯಲು ಪ್ರತಿಯೊಬ್ಬ ವ್ಯಕ್ತಿಗೂ ಕಷ್ಟವಾಗುತ್ತದೆ. ಪ್ರತಿಯೊಬ್ಬ ಸದಸ್ಯನೂ ಕ್ರಮಕ್ಕೆ ಆಗ್ರಹಿಸಿದರೆ ಅದು ಬಹು ಕ್ರಮಗಳಿಗೆ ಕಾರಣವಾಗುವ ಮೂಲಕ ಅನ್ಯಾಯಕ್ಕೊಳಗಾದ ಕಾರ್ಮಿಕರು, ನ್ಯಾಯಾಲಯ ಮತ್ತು ಪ್ರತಿವಾದಿಗಳು ಹೀಗೆ ಎಲ್ಲರಿಗೂ ಸಮಸ್ಯೆಯಾಗಲಿದೆ… ಕಾರ್ಮಿಕರು ವಿದೇಶಿಯರಾಗಿದ್ದು, ಪ್ರತ್ಯೇಕವಾಗಿ ಕಾನೂನಿನ ನೆರವು ಪಡೆಯಲು ಅವರಿಗೆ ಸಂಪನ್ಮೂಲದ ಕೊರತೆ ಇದೆ. ಅವರಿಗೆ ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತವಿಲ್ಲ. ಅಲ್ಲದೇ ಅಮೆರಿಕಾದ ಕಾನೂನು ವ್ಯವಸ್ಥೆಯ ಬಗ್ಗೆ ಅರಿವಿಲ್ಲ” ಎಂದು ಫಿರ್ಯಾದುದಾರರು ಕಾರ್ಮಿಕರ ಪರವಾಗಿ ಮೊಕದ್ದಮೆ ಹೂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಎಪಿಎಸ್‌ನ ಕ್ರಮಗಳು ಬಲವಂತದ ದುಡಿಮೆ, ಕಾರ್ಮಿಕರಿಗೆ ಸಂಬಂಧಿಸಿದಂತೆ ಕಳ್ಳಸಾಗಣೆ, ಗುಲಾಮಗಿರಿ, ಪಿತೂರಿ ಮತ್ತು ವಲಸೆ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ವಿದೇಶಿ ಕಾರ್ಮಿಕ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಜಾಫಿ ಗ್ಲೆನ್ ಲಾ ಸಮೂಹ ಸಲ್ಲಿಸಿರುವ ಮೊಕದ್ದಮೆಯಲ್ಲಿ ಹೇಳಲಾಗಿದೆ.

Also Read
ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 27 ಹಿಂದೂ, ಜೈನ ದೇವಾಲಯ; ದೇವರ ಮರು ಪ್ರತಿಷ್ಠಾಪನೆ, ಪೂಜೆಗೆ ಮನವಿ ಸಲ್ಲಿಕೆ

ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಕೆಳಗಿನ ಪರಿಹಾರ ಕೋರಲಾಗಿದೆ:

  • ಪ್ರತಿವಾದಿಯಾದ ಬಿಎಪಿಎಸ್ ನ್ಯಾಯಯುತ ಕಾರ್ಮಿಕ ಮಾನದಂಡ ಕಾಯಿದೆ (ಎಫ್‌ಎಲ್‌ಎಸ್‌ಎ), ನ್ಯೂಜೆರ್ಸಿ ವೇತನ ಪಾವತಿ ಕಾನೂನುಗಳು ಮತ್ತು ಕಳ್ಳಸಾಗಣೆ ಸಂತ್ರಸ್ತರ ಸಂರಕ್ಷಣಾ ಕಾಯಿದೆಯನ್ನು (ಟಿವಿಪಿಎ) ಉಲ್ಲಂಘಿಸಿದೆ ಎಂದು ಘೋಷಿಸಬೇಕು.

  • ಎಫ್‌ಎಲ್‌ಎಸ್‌ಎ, ನ್ಯೂಜೆರ್ಸಿ ವೇತನ ಪಾವತಿ ಕಾನೂನುಗಳು ಮತ್ತು ಟಿವಿಪಿಎಗಳನ್ನು ಉಲ್ಲಂಘಿಸದಂತೆ ಪ್ರತಿವಾದಿಗಳಿಗೆ ಶಾಶ್ವತವಾಗಿ ಆದೇಶಿಸಬೇಕು.

  • ತಮ್ಮ ಟಿವಿಪಿಎ ಹಕ್ಕಿನ ಮೇಲೆ ಫಿರ್ಯಾದುದಾರರು ಮತ್ತು ಇತರ ಆರ್ -1 ಕಾರ್ಮಿಕರಿಗೆ ತೀರ್ಪು ಮತ್ತು ಅವರಿಗೆ ಪರಿಹಾರ ನೀಡಬೇಕು ಮತ್ತು ದಂಡ ತುಂಬಿಕೊಡುವಂತೆ ಆದೇಶಿಸಬೇಕು.

  • ಈ ಕ್ರಮವನ್ನು ಅನುಸರಿಸುವ ಫಿರ್ಯಾದುದಾರರು ಮತ್ತು ಇತರ ಆರ್ -1 ಕಾರ್ಮಿಕರಿಗೆ ತೀರ್ಪು ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಅವರಿಗೆ ಪಾವತಿಯಾಗದ ವೇತನ ಮತ್ತು ಕಾಂಟ್ರಾಕ್ಟ್‌ ರೀತ್ಯಾ ಉಲ್ಲಂಘನೆಯಾದ ನಿಯಮಗಳಿಗೆ ನೀಡಲಾಗುವ ಪರಿಹಾರವನ್ನು ಪಾವತಿಸಲು ಆದೇಶಿಸಬೇಕು ಎಂದು ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com