ಸುನಂದಾ ಪುಷ್ಕರ್‌ ಪ್ರಕರಣ: ಶಶಿ ತರೂರ್‌ ವಿರುದ್ಧ ಆರೋಪ ನಿಗದಿ ಕುರಿತಾದ ತೀರ್ಪು ಆ.18ಕ್ಕೆ ಮುಂದೂಡಿಕೆ

“ಇನ್ನು ಮುಂದೆ ಯಾವುದೇ ಮನವಿ ಪರಿಗಣಿಸುವುದಿಲ್ಲ” ಎಂದು ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್‌ ಸ್ಪಷ್ಟಪಡಿಸಿದ್ದಾರೆ. ಸುನಂದಾ ಸಾವಿನ ಪ್ರಕರಣದಲ್ಲಿ ಐದನೇ ಬಾರಿಗೆ ಶಶಿ ತರೂರ್‌ ವಿರುದ್ಧ ಆರೋಪ ನಿಗದಿ ಕುರಿತಾದ ತೀರ್ಪು ಮುಂದೂಡಲ್ಪಟ್ಟಿದೆ.
Sunanda Pushkar and Shashi Tharoor
Sunanda Pushkar and Shashi Tharoor

ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಆರೋಪ ನಿಗದಿಗೆ ಸಂಬಂಧಿಸಿದ ತೀರ್ಪು ಪ್ರಕಟಣೆಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಮಂಗಳವಾರ ಮುಂದೂಡಿದೆ.

ಹಿಂದೆ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತರೂರ್‌ ಪರ ವಕೀಲರು ಸಲ್ಲಿಸಿದ ಪ್ರತಿಕ್ರಿಯೆಯನ್ನು ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್‌ ಅವರು ಸ್ವೀಕರಿಸಿದರು. ಆರೋಪ ನಿಗದಿಯ ಸಂದರ್ಭದಲ್ಲಿ "ಮೇಲ್ನೋಟಕ್ಕೆ ಕಂಡುಬರುವ" ಪ್ರಕರಣದ ಕುರಿತಾದ (ಮೇಲ್ನೋಟಕ್ಕೆ ಕಂಡುಬರುವ ಸಾಕ್ಷ್ಯಾಧಾರಗಳಿಂದ ನ್ಯಾಯಾಲಯವು ತಳೆಯುವ ನಿಲುವು) ಇತ್ತೀಚೆಗಿನ ತೀರ್ಪೊಂದನ್ನು ಆಧರಿಸಲು ಮತ್ತು ಆ ಸಂಬಂಧದ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸಲು ಬಯಸಿರುವುದಾಗಿ ಪ್ರಾಸಿಕ್ಯೂಷನ್‌ ಹೇಳಿತು.

ಆ ತೀರ್ಪನ್ನು ಅಧಿಕೃತವಾಗಿ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯವು ಅದರ ಪ್ರತಿಯನ್ನು ತರೂರ್‌ ವಕೀಲರಿಗೂ ಒದಗಿಸುವಂತೆ ನಿರ್ದೇಶಿಸಿತು. ಇದೇ ವೇಳೆ ನ್ಯಾಯಾಧೀಶರು, “ನಾನು ಮತ್ತಾವುದೇ ಮನವಿಗಳನ್ನು ಪರಿಗಣಿಸುವುದಿಲ್ಲ” ಎಂದೂ ಸ್ಪಷ್ಟಪಡಿಸಿದರು. ಅಲ್ಲದೇ ಆಗಸ್ಟ್‌ 18ರಂದು ಪ್ರಕರಣದ ಸಂಬಂಧ ತರೂರ್‌ ಅವರ ಮೇಲಿನ ಆರೋಪಗಳ ನಿಗದಿಯ ಕುರಿತಾದ ತೀರ್ಪನ್ನು ಪ್ರಕಟಿಸಲಾಗುವುದು ಎಂದು ಪ್ರಕರಣವನ್ನು ಮುಂದೂಡಿದರು.

ಶಶಿ ತರೂರ್‌ ವಿರುದ್ಧ ಆರೋಪ ನಿಗದಿಗೆ ಸಂಬಂಧಿಸಿದ ತೀರ್ಪನ್ನು ಐದನೇ ಬಾರಿಗೆ ನ್ಯಾಯಾಲಯವು ಮುಂದೂಡಿದೆ. ಏಪ್ರಿಲ್‌ 29, ಮೇ 19, ಜೂನ್‌ 16ರಂದು ಕೋವಿಡ್‌ನಿಂದಾಗಿ ಮುಂದೂಡಲಾಗಿತ್ತು. ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಪ್ರಾಸಿಕ್ಯೂಷನ್‌ ಕೋರಿದ ಹಿನ್ನೆಲೆಯಲ್ಲಿ ಜುಲೈ 2ರಂದು ಪ್ರಕರಣದ ತೀರ್ಪು ಪ್ರಕಟಣೆಯನ್ನು ಮುಂದೂಡಲಾಗಿತ್ತು.

Also Read
[ಸುನಂದಾ ಪುಷ್ಕರ್‌ ಪ್ರಕರಣ] ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ: ವಿಕಾಸ್‌ ಪಹ್ವಾ

2014ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್‌ನ ಕೋಣೆಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ದೆಹಲಿ ಪೊಲೀಸರು ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಥವಾ ಪರ್ಯಾಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ವಿಷದಿಂದ ಹಾಗೂ ಅಲ್‌ಪ್ರಾಕ್ಸ್ ಸೇವನೆಯಿಂದಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದಿಸಿದ್ದರು. ಆದರೆ ಆಕ್ಷೇಪಿಸಲಾದ ಔಷಧ ಸುನಂದಾ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ವಿಧಿ ವಿಜ್ಞಾನ ವರದಿಗಳು ಹೇಳುತ್ತಿರುವುದಾಗಿ ಹಿರಿಯ ವಕೀಲ ವಿಕಾಸ್ ಪಹ್ವಾ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com