ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 2021ರಲ್ಲಿ ನೀಡಿದ್ದ ತೀರ್ಪಿನಂತೆ ನೋಯ್ಡಾದಲ್ಲಿರುವ ಸೂಪರ್‌ಟೆಕ್ ಅವಳಿ ಗೋಪುರ ಕೆಡವುವ ಬದಲು ವಿಶ್ವವಿದ್ಯಾಲಯ ಅಥವಾ ಆಸ್ಪತ್ರೆಯಂತಹ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಎನ್‌ಜಿಒಗೆ ಸುಪ್ರೀಂ ಕೋರ್ಟ್ ಸೋಮವಾರ ₹ 5 ಲಕ್ಷ ದಂಡ ವಿಧಿಸಿದೆ [ಸೆಂಟರ್ ಫಾರ್ ಲಾ ಅಂಡ್ ಗುಡ್ ಗವರ್ನೆನ್ಸ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].
ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಗೆ ಪಿಐಎಲ್ ಸಲ್ಲಿಸಲು ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಪ್ರಶ್ನಿಸಿತು.
“ಮನವಿಯ ಉದ್ದೇಶ ಸ್ಪಷ್ಟವಾಗಿ ನ್ಯಾಯಾಲಯದ ತೀರ್ಪನ್ನು ಮತ್ತು ನಿರ್ದೇಶನಗಳನ್ನು ಜಾರಿಗೆ ತರದಂತೆ ತಡೆಯುವುದಾಗಿದೆ. ಸಂವಿಧಾನದ 32ನೇ ವಿಧಿಯಡಿ ನ್ಯಾಯವ್ಯಾಪ್ತಿ ಕೋರಿರುವುದು ವಿಚಾರಣೆಯ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ. ಆದ್ದರಿಂದ ಅರ್ಜಿ ವಜಾಗೊಳಿಸುದಲ್ಲದೆ ದಂಡ ವಿಧಿಸುವ ಆದೇಶ ನೀಡಲಾಗುತ್ತಿದೆ. ನಿಷ್ಪ್ರಯೋಜಕ ಮತ್ತು ಪ್ರಚೋದನೆಗೊಳಗಾದ ಅರ್ಜಿ ಸಲ್ಲಿಸಿ ಅಧಿಕಾರ ವ್ಯಾಪ್ತಿ ಚಲಾಯಿಸುವಂತೆ ಕೋರಿದಾಗ ನ್ಯಾಯಾಲಯ ದಂಡ ವಿಧಿಸಬಹುದಾಗಿದೆ” ಎಂದು ಪೀಠ ತಿಳಿಸಿತು.
ಹೀಗಾಗಿ ಕೋವಿಡ್ ಪೀಡಿತ ಸುಪ್ರೀಂ ಕೋರ್ಟ್ ವಕೀಲರ ಸಂಘದ ಸದಸ್ಯರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆಂದು ದಂಡದ ರೂಪದಲ್ಲಿ ₹ 5 ಲಕ್ಷ ಠೇವಣಿ ಇಡುವಂತೆ ನ್ಯಾಯಾಲಯ ಸೂಚಿಸಿತು.
ನಿಯಮ ಮೀರಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸೂಪರ್‌ಟೆಕ್ ಲಿಮಿಟೆಡ್‌ನ 40 ಅಂತಸ್ತಿನ ಅವಳಿ ಗೋಪುರ ಕಟ್ಟಡವನ್ನು ಕೆಡವಲು ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್‌ನ 2014ರ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಎತ್ತಿ ಹಿಡಿದಿತ್ತು. ಬಿಲ್ಡರ್ ವೆಚ್ಚದಲ್ಲಿ ಅವಳಿ ಗೋಪುರಗಳ ನೆಲಸಮ ಕಾರ್ಯವನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಅದು ಆದೇಶಿಸಿತ್ತು.
ಅವಳಿ ಗೋಪುರಗಳಲ್ಲಿನ ಎಲ್ಲಾ ಫ್ಲಾಟ್ ಮಾಲೀಕರಿಗೆ ಶೇ 12ರ ಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಎತ್ತಿಹಿಡಿದಿತ್ತು.