ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: ʼಒಂದು ಸಣ್ಣ ಸಾಕ್ಷಿಯೂ ಇಲ್ಲʼ ಎಂದು ಆರೋಪಿಯನ್ನು ಖುಲಾಸೆಗೊಳಿಸಿದ ಸುಪ್ರೀಂ

ಅಪರಾಧಕ್ಕೆ ಬಲಿಯಾದವರಿಗೆ ಆಗಿರುವ ಅನ್ಯಾಯ ಸರಿದೂಗಿಸಲು ನ್ಯಾಯಾಲಯಗಳು ಮತ್ತಾರನ್ನೋ ಅನ್ಯಾಯದ ಬಲಿಪಶುವಾಗಿ ಮಾಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್.
Justice AS Bopanna, Justice S Abdul Nazeer and Justice V Ramasubramanian
Justice AS Bopanna, Justice S Abdul Nazeer and Justice V Ramasubramanian

ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ಖುಲಾಸೆಗೊಳಿಸಿದೆ.

ಕೊಲೆ ಮತ್ತು ಅತ್ಯಾಚಾರ ಆರೋಪವನ್ನು ಎತ್ತಿ ಹಿಡಿದು, ಮರಣ ದಂಡನೆ ವಿಧಿಸಿದ್ದ ಉತ್ತರ ಪ್ರದೇಶ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಅಲಾಹಾಬಾದ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿದಾರ ಚೋಟ್ಕೌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌, ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ಆದೇಶ ಮಾಡಿತು.

“ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪಿಯ ಮೇಲೆ ದೋಷಾರೋಪಣೆಯನ್ನು ನಿಗದಿಪಡಿಸುವ ಮೂಲಕ ಪ್ರಾಸಿಕ್ಯೂಷನ್ ಆರೋಪಿಗೆ ಅನ್ಯಾಯ ಮಾಡಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಪರಿಶೀಲನೆಯನ್ನು ಜಯಿಸಬಲ್ಲಂತಹ ಯಾವೊಂದು ಸಣ್ಣ ಸಾಕ್ಷ್ಯ ಪುರಾವೆಗಳಿಲ್ಲದೆ ಮೇಲ್ಮನವಿದಾರರ ಮೇಲೆ ದೋಷಾರೋಪಣೆಯನ್ನು ನಿಗದಿಪಡಿಸುವ ಮೂಲಕ ಪ್ರಾಸಿಕ್ಯೂಷನ್ ಮೇಲ್ಮನವಿದಾರರಿಗೆ ಅನ್ಯಾಯ ಮಾಡಿದೆ. ಅಪರಾಧಕ್ಕೆ ಬಲಿಯಾದವರಿಗೆ ಆಗಿರುವ ಅನ್ಯಾಯ ಸರಿದೂಗಿಸಲು ನ್ಯಾಯಾಲಯಗಳು ಮತ್ತಾರನ್ನೋ ಅನ್ಯಾಯದ ಬಲಿಪಶುವಾಗಿ ಮಾಡಲು ಸಾಧ್ಯವಿಲ್ಲ" ಎಂದು ಪೀಠ ಹೇಳಿದೆ.

ಆರೋಪಿಯ ವಿರುದ್ಧದ ಪ್ರಕರಣವು ಸಾಂದರ್ಭಿಕ ಸಾಕ್ಷ್ಯವನ್ನು ಆಧರಿಸಿದೆ ಮತ್ತು ಅಂತಹ ಪ್ರಕರಣಗಳಲ್ಲಿ ವೈದ್ಯಕೀಯ ಸಾಕ್ಷ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಯಾವುದೇ ವೈದ್ಯಕೀಯ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿಲ್ಲ, ಇದು ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಅಪರಾಧ ಪ್ರಕರಣದಲ್ಲಿ ಸಂತ್ರಸ್ತರಿಗೆ ಆಗಿರುವ ಅನ್ಯಾಯ ಸರಿದೂಗಿಸಲು ನ್ಯಾಯಾಲಯವು ಮತ್ತಾರನ್ನೋ ಅನ್ಯಾಯದ ಸಂತ್ರಸ್ತರನ್ನಾಗಿಸಲಾಗದು” ಎಂದು ಆದೇಶದಲ್ಲಿ ಹೇಳಿದೆ. ಅಲ್ಲದೆ, ಎಫ್‌ಐಆರ್‌ ರವಾನಿಸುವಲ್ಲಿ ತನಿಖಾಧಿಕಾರಿ ವಿಳಂಬ ಮಾಡಿರುವುದನ್ನು ಗಮನಿಸಿರುವ ನ್ಯಾಯಾಲಯವು ತನಿಖೆಯ ಮೇಲೆ ಅಂತಹ ವಿಳಂಬಗಳು ಉಂಟು ಮಾಡುವ ಪರಿಣಾಮಗಳನ್ನು ಗಮನಿಸುವುದು ನ್ಯಾಯಾಲಯದ ಕರ್ತವ್ಯ ಎಂದಿದೆ. ಆರೋಪಿಯಿಂದ ಯಾವುದೇ ವಿಧವಾದ ಅಡ್ಡಿ ಇಲ್ಲದೇ ಹೋದಾಗಲೂ ತನಿಖಾಧಿಕಾರಿಯು ಸಾಕ್ಷ್ಯವನ್ನು ಸಂಗ್ರಹಿಸುವಲ್ಲಿ ವೈಫಲ್ಯತೆ ಮೆರೆದಿರುವುದು ಪ್ರಾಸಿಕ್ಯೂಷನ್‌ನ ಪ್ರಕರಣದ ಬಗ್ಗೆ ಗಂಭೀರ ಅನುಮಾನ ಉಂಟು ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Related Stories

No stories found.
Kannada Bar & Bench
kannada.barandbench.com