
ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಆರು ಮಂದಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 21 ರಂದು ಖುಲಾಸೆಗೊಳಿಸಿದೆ [ಧೀರೆಊಭಾಯಿ ಭೈಲಾಭಾಯಿ ಚೌಹಾಣ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].
ನಿರ್ದಿಷ್ಟವಾಗಿ ಗಲಭೆಯಂತಹ ಪ್ರಕರಣಗಳಲ್ಲಿ ಮುಗ್ಧ ಪ್ರೇಕ್ಷಕರನ್ನು ಅಪರಾಧಿಗಳೆಂದು ತಪ್ಪಾಗಿ ಭಾವಿಸುವ ಸಾಧ್ಯತೆಗಳಿರುವಾಗ ಅಪರಾಧ ನಡೆದ ಸ್ಥಳದಲ್ಲಿದ್ದರು ಎಂಬ ಅಂಶವಷ್ಟೇ ಆರೋಪ ಸಾಬೀತುಪಡಿಸಲು ಸಾಕಾಗದು ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎಚ್ಚರಿಕೆಯಿಂದಿರಬೇಕು. ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸದೆ ಅಥವಾ ಘಟನೆಯಲ್ಲಿ ಅವರ ಪಾತ್ರವನ್ನು ನಿರ್ದಿಷ್ಟಪಡಿಸದೆ ಅಸ್ಪಷ್ಟ, ಸಾಮಾನ್ಯೀಕೃತ ಹೇಳಿಕೆಗಳನ್ನು ನೀಡುವ ಸಾಕ್ಷಿಗಳನ್ನು ಅವಲಂಬಿಸುವುದನ್ನು ಅವು ತಪ್ಪಿಸಬೇಕು ಎಂದು ಪೀಠ ಹೇಳಿದೆ.
"ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಭಾಗಿಯಾಗಿರುವ ಗುಂಪು ಘರ್ಷಣೆ ಪ್ರಕರಣಗಳಲ್ಲಿ, ಯಾವುದೇ ನಿರಪರಾಧಿ ವ್ಯಕ್ತಿಯನ್ನು ಅಪರಾಧಿ ಎಂದು ನಿರ್ಣಯಿಸಿ ಅವನ ಸ್ವಾತಂತ್ರ್ಯವನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಮೇಲೆ ಇರುವ ಮಹತ್ವದ ಕರ್ತವ್ಯವಾಗಿದೆ. ಅಂತಹ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಜಾಗರೂಕರಾಗಿರಬೇಕು. ಆರೋಪಿ ಅಥವಾ ಆತ ವಹಿಸಿದ ಪಾತ್ರವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ ಸಾಮಾನ್ಯ ಹೇಳಿಕೆಗಳನ್ನು ನೀಡುವ ಸಾಕ್ಷಿಗಳನ್ನು ಅವಲಂಬಿಸಬಾರದು" ಎಂದು ನ್ಯಾಯಾಲಯ ನುಡಿದಿದೆ.
ಪ್ರಕರಣ 2002ರ ಫೆಬ್ರವರಿಯಲ್ಲಿ ಗುಜರಾತ್‌ನ ವಡೋದ್ ಗ್ರಾಮದಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಒಂದು ಸ್ಮಶಾನ ಮತ್ತು ಮಸೀದಿಯ ಸುತ್ತಲೂ 1,000 ಕ್ಕೂ ಹೆಚ್ಚು ಜನರ ಗುಂಪೊಂದು ಜಮಾಯಿಸಿತ್ತು. ಪೊಲೀಸರು ಬಂದು ಗುಂಪನ್ನು ಚದುರಿಸಲು ಆದೇಶಿಸಿದಾಗ, ಅವರ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ಇದರ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಗೆ ಗಾಯಗಳು ಮತ್ತು ಪೊಲೀಸ್ ವಾಹನಗಳಿಗೆ ಹಾನಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪೊಲೀಸರು ಅಶ್ರುವಾಯು ಪ್ರಯೋಗಿಸಿ ಮತ್ತು ಗುಂಡು ಹಾರಿಸಿದರು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು, ಈ ಸಮಯದಲ್ಲಿ ಏಳು ಜನರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು.
ತನಿಖೆಯ ನಂತರ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದವರು ಸೇರಿದಂತೆ 19 ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 153 (ಎ) (ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು), 295 (ಪೂಜಾ ಸ್ಥಳ ಅಪವಿತ್ರಗೊಳಿಸುವುದು), 436 (ಬೆಂಕಿ ಅಥವಾ ಸ್ಫೋಟಕಗಳಿಂದ ದುಷ್ಕೃತ್ಯ) ಮತ್ತು 332 (ಕರ್ತವ್ಯಕ್ಕೆ ಅಡ್ಡಿಪಡಿಸುವ ಸಲುವಾಗಿ ಸರ್ಕಾರಿ ಅಧಿಕಾರಿಗಳನ್ನು ಗಾಯಗೊಳಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
"ಮೇಲ್ಮನವಿ ಸಲ್ಲಿಸಿದವರು ಜನಸಮೂಹವನ್ನು ಪ್ರಚೋದಿಸಿದ್ದಾರೆ ಅಥವಾ ಅವರು ಕಾನೂನುಬಾಹಿರ ಸಭೆಯ ಭಾಗವಾಗಿದ್ದಾರೆಂದು ಸೂಚಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದಕ್ಕೆ ಇಲ್ಲಿ ಯಾವುದೇ ಪುರಾವೆಗಳು ದಾಖಲಾಗಿಲ್ಲ. ಆ ನಿಟ್ಟಿನಲ್ಲಿ ಪಿಡಬ್ಲ್ಯೂ-2 ಮತ್ತು ಪಿಡಬ್ಲ್ಯೂ-4 (ಪ್ರಾಸಿಕ್ಯೂಷನ್ ಸಾಕ್ಷಿಗಳು) ಮಾತ್ರ ಸಾಕ್ಷ್ಯವನ್ನು ನೀಡಿದ್ದರು, ಆದರೆ ಅದನ್ನು ಹೈಕೋರ್ಟ್ ಬಲವಾದ ಕಾರಣಗಳಿಗಾಗಿ ತಿರಸ್ಕರಿಸಿದೆ, ಅದನ್ನು ಇಲ್ಲಿ ಪುನರಾವರ್ತಿಸುವ ಅಗತ್ಯವಿಲ್ಲ, ”ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ಮೇಲ್ಮನವಿ ಸಲ್ಲಿಸಿದವರು ಅಪರಾಧದಲ್ಲಿ ನಿರ್ದಿಷ್ಟ ಪಾತ್ರ ವಹಿಸಿರದೆ ಇದ್ದರೆ ಘಟನಾ ಸ್ಥಳದಲ್ಲಿ ಅವರನ್ನು ಬಂಧಿಸಿದ ಮಾತ್ರಕ್ಕೆ ಕಾನೂನುಬಾಹಿರ ಸಭೆ ಸೇರಿದ್ದಾರೆ ಎಂಬ ಅವರ ಪಾತ್ರವನ್ನು ನಿರ್ಣಾಯಕವಾಗಿ ಸಾಬೀತುಪಡಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳನ್ನು ಬಂಧಿಸಿದ ಸಮಯದಲ್ಲಿ ಅವರಿಂದ ಶಸ್ತ್ರಾಸ್ತ್ರಗಳು, ಬೆಂಕಿ ಹಚ್ಚುವ ವಸ್ತುಗಳು ಅಥವಾ ಗಲಭೆಗೆ ಸಂಬಂಧಿಸಿದ ವಸ್ತುಗಳಂತಹ ಯಾವುದೇ ಆರೋಪ ಹೊರಿಸಬಹುದಾದ ಪುರಾವೆಗಳು ಪತ್ತೆಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪೊಲೀಸರು ಗುಂಡು ಹಾರಿಸಿದಾಗ ಜನರು ಎಲ್ಲಾ ದಿಕ್ಕುಗಳಲ್ಲಿಯೂ ಚದುರಿಹೋಗುತ್ತಿದ್ದಂತೆ ಅವ್ಯವಸ್ಥೆ ಉಂಟಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ನಂತರದ ಗದ್ದಲದಲ್ಲಿ ಮುಗ್ಧ ಪ್ರೇಕ್ಷಕನನ್ನು ಸಹ ದುಷ್ಕರ್ಮಿ ಎಂದು ತಪ್ಪಾಗಿ ಗ್ರಹಿಸಬಹುದು. ಆದ್ದರಿಂದ, ಮೇಲ್ಮನವಿ ಸಲ್ಲಿಸಿದವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂಬ ಅಂಶ ಅವರು ತಪ್ಪೆಸಗಿದ್ದಾರೆ ಎಂಬುದನ್ನು ಸ್ವಯಂ ಸಾಬೀತುಪಡಿಸುವುದಿಲ್ಲ ಎಂದಿತು.
ಹೀಗಾಗಿ ಮೇಲ್ಮನವಿದಾರರ ಪರವಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿತು. ಅಂತೆಯೇ ಅವರನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]