ಗಲ್ಲುಶಿಕ್ಷೆಗೊಳಗಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರಿಂಕೋರ್ಟ್‌: ಕೆಳಹಂತದ ನ್ಯಾಯಾಲಯಗಳ ತೀರ್ಪಿಗೆ ಅಸಮಾಧಾನ

"ಅಸಂಗತತೆ ಮತ್ತು ಲೋಪಗಳಿಂದ ತುಂಬಿರುವ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ" ಎಂದು ಪೀಠ ಹೇಳಿದೆ.
Supreme Court, Justice BR Gavai, Justice Nageshwara Rao and Justice BV Nagarathna

Supreme Court, Justice BR Gavai, Justice Nageshwara Rao and Justice BV Nagarathna

Published on

ಕೊಲೆ ಪ್ರಕರಣವೊಂದರಲ್ಲಿ ಕೆಳ ಹಂತದ ನ್ಯಾಯಾಲಯಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್‌ ಬುಧವಾರ ಖುಲಾಸೆಗೊಳಿಸಿದೆ (ಜೈಕಂ ಖಾನ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ).

"ಅಸಂಗತತೆ ಮತ್ತು ಲೋಪಗಳಿಂದ ತುಂಬಿರುವ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ" ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ತ್ರಿಸದಸ್ಯ ಪೀಠ ತಿಳಿಸಿದೆ.

ನಾಲ್ವರ ಸಾವು ಬದುಕಿನ ಪ್ರಶ್ನೆ ನಿರ್ಣಯಿಸುವಾಗ ಗಾಂಭೀರ್ಯರಹಿತ ಧೋರಣೆಯನ್ನು ಅನುಸರಿಸಲಾಗಿದೆ ಎಂದು ಸೆಷನ್ಸ್ ನ್ಯಾಯಾಲಯ ಮತ್ತು ಅಲಾಹಾಬಾದ್‌ ಹೈಕೋರ್ಟ್‌ ವಿರುದ್ಧ ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು. "ಪ್ರಸಕ್ತ ಪ್ರಕರಣವನ್ನು ನ್ಯಾಯಾಲಯ ನಿರ್ವಹಿಸಿರುವ ರೀತಿ ನಮ್ಮನ್ನು ಅಚ್ಚರಿಗೆ ದೂಡಿದೆ," ಎಂದಿತು. ”ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ನಿರ್ದೇಶಿಸುವಾಗ ಹೆಚ್ಚಿನ ಪರಿಶೀಲನೆ ಕಾಳಜಿ ಮತ್ತು ಸೂಕ್ಷ್ಮತೆ ಕಾಯ್ದುಕೊಳ್ಳಬೇಕು” ಎಂದು ಅದು ಹೇಳಿತು.

Also Read
ಜಾತಿ ಗಣತಿ - 2011ರ ದತ್ತಾಂಶ ಬಹಿರಂಗ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೌಟುಂಬಿಕ ಕಲಹದ ಪ್ರಕರಣ ಇದಾಗಿದ್ದು ನಾಲ್ವರು ಆರೋಪಿಗಳು ಒಂದೇ ಕುಟುಂಬದ ಆರು ಮಂದಿಯನ್ನು ಕೊಂದ ಆರೋಪ ಎದುರಿಸುತ್ತಿದ್ದರು. ಸಾಕ್ಷ್ಯ ಮತ್ತು ಕಕ್ಷೀದಾರರ ವಾದಗಳನ್ನು ಪರಿಶೀಲಿಸಿದ ಪೀಠ, (ಘಟನೆಯನ್ನು ಕಂಡ ಅನೇಕರು ಇದ್ದರೂ) “ಕೇವಲ ಇಬ್ಬರು ಸಾಕ್ಷಿಗಳನ್ನು ಆಧರಿಸಿ ಆದೇಶ ನೀಡಲಾಗಿದ್ದು ಅವರನ್ನು ಸಂಪೂರ್ಣ ವಿಶ್ವಾಸಾರ್ಹರು ಎಂದು ಪರಿಗಣಿಸಲಾಗದು” ಎಂದಿತು. ಇವರು ಹತ್ಯೆ ಮಾಡಿದ್ದನ್ನು ನೋಡಿದ್ದಾರೆ ಎಂದು ನಂಬುವುದು ಕಷ್ಟ ಎಂದು ಅಪರಾಧ ಸ್ಥಳದ ನಕಾಶೆಯನ್ನು ಉಲ್ಲೇಖಿಸಿ ಪೀಠ ಹೇಳಿದೆ.

ಸಾಕ್ಷ್ಯಾಧಾರದ ಬೆಂಬಲ ಇಲ್ಲದಿರುವುದರಿಂದ ಹೈಕೋರ್ಟ್‌ ಅವಲೋಕನಗಳು ಕೇವಲ "ಊಹೆಗಳು” ಮತ್ತು ಊಹೆಗಳು ಎಂದು ಪರಿಗಣಿಸಬಹುದಾದ ವ್ಯಾಪ್ತಿಯೊಳಗೆ ಬರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ “ಕ್ರಿಮಿನಲ್‌ ವಿಚಾರಣೆ ಎಂಬುದು ಒಬ್ಬರ ಕಲ್ಪನೆ ಮತ್ತು ಕಲ್ಪನಾಶಕ್ತಿಗೆ ರೆಕ್ಕೆ ನೀಡುವ ಕಾಲ್ಪನಿಕ ಕಥೆಯಂತಲ್ಲ” ಎಂದು ಪೀಠ ನ್ಯಾಯಾಲಯಗಳಿಗೆ ಈ ಸಂದರ್ಭದಲ್ಲಿ ನೆನಪಿಸಿತು.

Kannada Bar & Bench
kannada.barandbench.com