ಜಾತಿ ಗಣತಿ - 2011ರ ದತ್ತಾಂಶ ಬಹಿರಂಗ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ - 2011ರ ಮಾಹಿತಿ ನಿಖರವಾಗಿಲ್ಲ ಅಥವಾ ಅದನ್ನು ಬಳಸಲು ಯೋಗ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಜಾತಿ ಗಣತಿ - 2011ರ ದತ್ತಾಂಶ ಬಹಿರಂಗ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court, Caste census

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ - 2011ರ (ಎಸ್‌ಇಸಿಸಿ-2011) ಮೂಲ ದತ್ತಾಂಶವನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಅಂಕಿ-ಅಂಶಗಳು ನಿಖರವಾಗಿಲ್ಲ ಅಥವಾ ಬಳಸಲು ಯೋಗ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ "ಮೀಸಲಾತಿಗಾಗಿ ಮಹಾರಾಷ್ಟ್ರಕ್ಕೆ ದತ್ತಾಂಶ ಕೊಡಿ ಎಂದು ಕೇಂದ್ರಕ್ಕೆ ಹೇಗೆ ಆದೇಶ ನೀಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಅಂತಹ ನಿರ್ದೇಶನ ಕೇವಲ ಗೊಂದಲ ಸೃಷ್ಟಿಸುತ್ತದೆ. ಹೀಗಾಗಿ ಪ್ರಕರಣದಲ್ಲಿ ನಮ್ಮ ರಿಟ್ ನ್ಯಾಯವ್ಯಾಪ್ತಿಯನ್ನು ಬಳಸಲು ನಿರಾಕರಿಸುತ್ತೇವೆ..." ಎಂದಿದೆ.

Also Read
ಕೊಡವರಿಗೆ ಮೀಸಲಾತಿ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್, ಆಯೋಗದ ಶಿಫಾರಸು ಒಪ್ಪಲು ನಿರ್ದೇಶನ

ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (ಎಂಎಸ್‌ಸಿಬಿಸಿ) ಮೂಲಕ ರಾಜ್ಯದಾದ್ಯಂತ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ ನಂತರ 2011ರ ಗಣತಿಯ ಮೂಲ ಮಾಹಿತಿಯನ್ನು ಪಡೆಯಲು ಸುಪ್ರೀಂ ಕೋರ್ಟ್‌ ತನ್ನ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸುವಂತೆ ಮಹಾರಾಷ್ಟ್ರ ಸರ್ಕಾರ ಕೋರಿತ್ತು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಯ ಪ್ರಾಯೋಗಿಕ ಮಾಹಿತಿಯನ್ನು ಕಲೆಹಾಕಲು 2011ರ ಜನಗಣತಿ ದತ್ತಾಂಶಕ್ಕಾಗಿ ಕೇಂದ್ರವನ್ನು ಕೋರಲು ರಾಜ್ಯ ವಿಧಾನಸಭೆ ಈ ವರ್ಷ ಸದನದಲ್ಲಿ ನಿರ್ಣಯ ಅಂಗೀಕರಿಸಿತ್ತು. ಆದರೆ ದೋಷಗಳ ಕಾರಣವನ್ನು ನೀಡಿ ಕೇಂದ್ರ ಸರ್ಕಾರ ಈವರೆಗೆ ದತ್ತಾಂಶವನ್ನು ಬಿಡುಗಡೆ ಮಾಡಿಲ್ಲ.

ಕೇಂದ್ರ ಸರ್ಕಾರವು ಜನವರಿ 7, 2020ರಂದು ಅಧಿಸೂಚನೆಯೊಂದನ್ನು ಹೊರಡಿಸಿದ್ದು ಅದರಲ್ಲಿ 2021ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಹಿತಿಯನ್ನು ಕಲೆ ಹಾಕಲು ಸೂಚಿಸಿದ್ದು ಬೇರಾವುದೇ ಜಾತಿ ವರ್ಗೀಕರಣದ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ತಿಳಿಸಿಲ್ಲ. ಬೇರೆ ಜಾತಿಗಳ ಮಾಹಿತಿಯನ್ನು ಗಣತಿಯಿಂದ ಹೊರಗಿಡುವ ನಿರ್ಧಾರವು ಸರ್ಕಾರದ "ಪ್ರಜ್ಞಾಪೂರ್ವಕ ನೀತಿಯ ನಿರ್ಧಾರವಾಗಿದೆ" ಎಂದು ಕೇಂದ್ರವು ಹೇಳಿದೆ.

ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ಶೇಖರ್ ನಾಫಡೆ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com