ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಅಸ್ತು ಎಂದ ಸುಪ್ರೀಂಕೋರ್ಟ್‌

ಮೂರು ತಿಂಗಳ ಹಿಂದೆ ಮೂವರು ವಕೀಲರು ಸಲ್ಲಿಸಿದ್ದ ಇಂತಹುದೇ ಮವನಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಅಸ್ತು ಎಂದ ಸುಪ್ರೀಂಕೋರ್ಟ್‌
UU Lalit, Indira Banerjee and KM Joseph, Section 124A Sedition

ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ಧರಿಸಿದೆ. (ಕಿಶೋರ್‌ಚಂದ್ರ ವಾಂಗ್‌ಖೇಮ್ಚಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ಮಣಿಪುರದ ಕಿಶೋರ್‌ಚಂದ್ರ ವಾಂಗ್‌ಖೇಮ್ಚಾ ಮತ್ತು ಛತ್ತೀಸ್‌ಗಡದ ಕನ್ಹಯ್ಯ ಲಾಲ್ ಶುಕ್ಲಾ ಎಂಬ ಇಬ್ಬರು ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಇಂದಿರಾ ಬ್ಯಾನರ್ಜಿ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು. ಮೂರು ತಿಂಗಳ ಹಿಂದೆ ಮೂವರು ವಕೀಲರು ಸಲ್ಲಿಸಿದ್ದ ಇಂತಹುದೇ ಮವನಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು.

ತಮ್ಮ ವಿರುದ್ಧ ಐಪಿಸಿ ಸೆಕ್ಷನ್‌ 124 ಎ ಅಡಿಯಲ್ಲಿ ಪ್ರಕರಣ ಹೂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಪ್ರಶ್ನಿಸಿ ವಾಂಗ್‌ಖೇಮ್ಚಾ ಮತ್ತು ಶುಕ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವರು ಹೇಳಿಕೆಗಳನ್ನು ನೀಡಿದ್ದು ಮತ್ತು ವ್ಯಂಗ್ಯಚಿತ್ರ ಹಂಚಿಕೊಂಡದ್ದನ್ನು ಪ್ರಶ್ನಿಸಿ ಸೆಕ್ಷನ್ 124 ಎ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Also Read
ಜೆಎನ್‌ಯು ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ್, ಉಮರ್ ಖಾಲಿದ್‌ಗೆ ಸಮನ್ಸ್ ನೀಡಿದ ದೆಹಲಿ ನ್ಯಾಯಾಲಯ

ಎಲ್ಲಾ ನಾಗರಿಕರಿಗೆ ಭಾರತ ಸಂವಿಧಾನದ 19 (1) (ಎ) ಅಡಿಯಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಐಪಿಸಿ ಸೆಕ್ಷನ್‌ 124 ಎ ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಅಲ್ಲದೆ ಸೆಕ್ಷನ್‌ ವಿಧಿಸಿರುವ ನಿರ್ಬಂಧ ಅಸಮಂಜಸವಾಗಿದ್ದು ಸಂವಿಧಾನದ 19 (2) ವಿಧಿಯ ಪ್ರಕಾರ ಅನುಮತಿಸಬಹುದಾದ ನಿರ್ಬಂಧ ಇದರಲ್ಲಿ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸುಮಾರು ಅರವತ್ತು ವರ್ಷಗಳ ಹಿಂದೆ ಕೇದಾರ್ ನಾಥ್ ಸಿಂಗ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪು ಸಮಂಜಸವಾಗಿದ್ದರೂ ಈಗ ಸೆಕ್ಷನ್ 124 ಎ ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಕೇದಾರನಾಥ್‌ ಪ್ರಕರಣದಲ್ಲಿ, ಸೆಕ್ಷನ್‌ 124 ಎ ಅನ್ನು ಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಲು ಕಾರಣ ಅದು ಸಕಾರಣವಾಗಿ 19 (1) (ಎ) ವಿಧಿಗೆ ನಿರ್ಬಂಧವನ್ನು ವಿಧಿಸಿತ್ತು ಹಾಗೂ 19 (2) ವಿಧಿಯ (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಕಾರಣವಾಗಿ ನಿರ್ಬಂಧ ವಿಧಿಸಲು ಸರ್ಕಾರಕ್ಕೆ ಇರುವ ಅಧಿಕಾರ) ವ್ಯಾಪ್ತಿಗೆ ಒಳಪಟ್ಟಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ಮಂಡಿಸಿದ ಪ್ರಮುಖ ಅಂಶಗಳು ಹೀಗಿವೆ;

  • ಸಾರ್ವಜನಿಕ ಹಿಂಸಾಚಾರ ಮತ್ತು ಸಾರ್ವಜನಿಕ ಅವ್ಯವಸ್ಥೆ ತಡೆಯಲು 1962 ರಲ್ಲಿ ಜಾರಿಗೆ ಬಂದ ಸೆಕ್ಷನ್‌ 124 ಎ, 2021ನೇ ಇಸವಿಗೆ ಪ್ರಸ್ತುತ ಎನಿಸುವುದಿಲ್ಲ.

  • ಯುಎಪಿಎ ಕಾಯಿದೆ, ಸಾರ್ವಜನಿಕ ಸುರಕ್ಷತಾ ಕಾಯಿದೆ, ರಾಷ್ಟ್ರೀಯ ಭದ್ರತಾ ಕಾಯಿದೆಯಂತಹ ವಿವಿಧ ಪ್ರಕರಣಗಳು ಸುರಕ್ಷತೆ, ಭದ್ರತೆ, ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಹಾಗೂ ಭಯೋತ್ಪಾದನೆ ನಿಗ್ರಹದಂತಹ ವಿಚಾರಗಳಲ್ಲಿ ನೇರವಾಗಿ ವ್ಯವಹರಿಸುತ್ತಿರುವುದರಿಂದ ಸೆಕ್ಷನ್ 124-ಎ ಬಳಸುವ ಪ್ರಮೇಯ ಬರುವುದಿಲ್ಲ.

  • ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದ 19 ನೇ ವಿಧಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜಗತ್ತಿನ ಎಲ್ಲ ವ್ಯಕ್ತಿಗಳ ಹಕ್ಕಾಗಿ ನೀಡಿದೆ. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಒದಗಿಸಲಾದ ಅವಕಾಶಗಳಿಗಿಂತಲೂ ಕೆಳಮಟ್ಟದಲ್ಲಿ ಸೆಕ್ಷನ್ 124-ಎ ನಿಬಂಧನೆಗಳಿವೆ.

  • 1962ರಿಂದಲೂ 124-ಎ ಸೆಕ್ಷನ್‌ ದುರ್ಬಳಕೆ, ದುರನ್ವಯ ಹಾಗೂ ದುರುಪಯೋಗಕ್ಕೆ ಒಳಗಾದ ವಿದ್ಯಮಾನಗಳು ನಡೆಯುತ್ತಲೇ ಇವೆ ಇತ್ಯಾದಿ ಅಂಶಗಳನ್ನು ಅರ್ಜಿದಾರರು ಪ್ರಸ್ತಾಪಿಸಿದ್ದಾರೆ.

ಕೇದಾರನಾಥ್ ಪ್ರಕರಣದಲ್ಲಿ ತೀರ್ಪನ್ನು ಐವರು ನ್ಯಾಯಮೂರ್ತಿಗಳಿರುವ ಪಂಚ ಪೀಠವು ನೀಡಿದ್ದರಿಂದ, ಸೆಕ್ಷನ್‌ 124 ಎ ಯ ಸಿಂಧುತ್ವಕ್ಕೆ ಸಂಬಂಧಿಸಿದ ತೀರ್ಪನ್ನು ಏಳು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳಿರುವ ಪೀಠ ನೀಡಬೇಕಾಗುತ್ತದೆ.

ವಕೀಲರಾದ ತಾನಿಮಾ ಕಿಶೋರ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

No stories found.
Kannada Bar & Bench
kannada.barandbench.com