ಐಐಟಿ ಜೆಇಇ ತೇರ್ಗಡೆಯಾದರೂ ಸೀಟು ವಂಚಿತನಾಗಿದ್ದ ದಲಿತ ವಿದ್ಯಾರ್ಥಿಯ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್

ನ್ಯಾಯಾಲಯ ಕೆಲವೊಮ್ಮೆ ಕಾನೂನು ಮೀರಿ ಮಾನವೀಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು.
Justice DY Chandrachud, AS Bopanna and Supreme Court
Justice DY Chandrachud, AS Bopanna and Supreme Court
Published on

ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಅರ್ಹತೆ ಪಡೆದಿದ್ದರೂ ತಾಂತ್ರಿಕ ದೋಷದಿಂದಾಗಿ ಗಡುವಿನೊಳಗೆ ಶುಲ್ಕ ಪಾವತಿಸಲಾಗದೆ ಸೀಟು ವಂಚಿತನಾಗಿದ್ದ ದಲಿತ ಸಮುದಾಯದ 17 ವರ್ಷದ ಬಾಲಕನಿಗೆ ಸುಪ್ರೀಂಕೋರ್ಟ್‌ ನ್ಯಾಯ ದೊರಕಿಸಿಕೊಟ್ಟಿದೆ.

“ಕಾನೂನಿನ ದೃಷ್ಟಿಯಲ್ಲಿ ಪ್ರಕರಣ ದುರ್ಬಲವಾಗಿದ್ದರೂ ನ್ಯಾಯಾಲಯ ಇಂತಹ ಸಂದರ್ಭಗಳಲ್ಲಿ ಮಾನವೀಯ ಧೋರಣೆ ತಳೆಯಬೇಕು ಮತ್ತು ಕಾನೂನನ್ನು ಮೀರಿ ನಿಲ್ಲಬೇಕು” ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು.

Also Read
[ನೀಟ್‌ ಪ್ರಕರಣ] ಘಟನೆ ಬಗ್ಗೆ ಮರುಕವಿದೆ, ಆದರೆ ಇಬ್ಬರಿಗಾಗಿ ಮರುಪರೀಕ್ಷೆ ನಡೆಸಲಾಗದು: ಸುಪ್ರೀಂ ಕೋರ್ಟ್‌

“ಈತ ಐಐಟಿ ಬಾಂಬೆಗೆ ಪ್ರವೇಶ ಪಡೆದ ದಲಿತ ಬಾಲಕ. ಇನ್ನು 10 ವರ್ಷಗಳಲ್ಲಿ ಈತ ದೇಶದ ನಾಯಕನಾಗಬಹುದು” ಎಂದು ನ್ಯಾ. ಚಂದ್ರಚೂಡ್‌ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅರ್ಜಿದಾರ ಬಾಲಕನಿಗೆ ಅವಕಾಶ ಕಲ್ಪಿಸಬಹುದೇ ಎಂದು ಪರಿಶೀಲಿಸಲು ಐಐಟಿ ಬಾಂಬೆಯ ಪ್ರವೇಶ ಪಟ್ಟಿಯ ವಿವರಗಳನ್ನು ಪಡೆಯುವಂತೆ ಕೇಂದ್ರ ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

ಇದೇ ವೇಳೆ ಪ್ರಕರಣವನ್ನು ಪೂರ್ವ ನಿದರ್ಶನವಾಗಿ ಬಳಸಲು ಅವಕಾಶ ನೀಡುವುದಿಲ್ಲ. ಇದೊಂದು ಪ್ರಕರಣದಲ್ಲಿ ಮಾತ್ರ ಸಂವಿಧಾನದ 142ನೇ ವಿಧಿಯಡಿ ನಮ್ಮ ವಿಶೇಷ ಅಧಿಕಾರ ಬಳಸುತ್ತಿದ್ದೇವೆ ಎಂದು ಪ್ರತಿವಾದಿಗಳ ಪರ ಹಾಜರಾದ ವಕೀಲರಿಗೆ ನ್ಯಾ. ಚಂದ್ರಚೂಡ್‌ ತಿಳಿಸಿದರು.

Kannada Bar & Bench
kannada.barandbench.com