
ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆ ದೆಹಲಿ ಸುತ್ತಮುತ್ತ ಹಸಿರು ಪಟಾಕಿ ತಯಾರಿಕೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಹಸಿರು ಪಟಾಕಿಗಳು ಕಡಿಮೆ ಮಾಲಿನ್ಯ ಉಂಟುಮಾಡಲಿದ್ದು ಹೆಚ್ಚು ಪರಿಸರ ಸ್ನೇಹಿ ಎಂದು ಪರಿಗಣಿಸಲಾಗಿದೆ. ಆದರೆ ವಾಯುಮಾಲಿನ್ಯ ಪೀಡಿತ ದೆಹಲಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹಸಿರು ಪಟಾಕಿಗಳನ್ನು ಕೂಡ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂತಹ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿತು.
"ಪಟಾಕಿ ತಯಾರಕರು ಸೂಕ್ತ ಮಾನದಂಡಗಳನ್ನು ಪಾಲಿಸಿದರೆ ಅವರಿಗೆ (ಪಟಾಕಿ ತಯಾರಕರು) ಉತ್ಪಾದನೆಗೆ ಅವಕಾಶ ನೀಡುವುದಕ್ಕೆ ಸಮಸ್ಯೆ ಏನಿದೆ? ವಿಪರೀತವಾದ ಆದೇಶಗಳು ಸಮಸ್ಯೆ ಸೃಷ್ಟಿಸುತ್ತವೆ. ಅವರು ಉತ್ಪಾದನೆ ಮಾಡಲಿ. ಮುಂದಿನ ಆದೇಶದವರೆಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಯಾವುದೇ ಪಟಾಕಿ ಮಾರಾಟ ಮಾಡುವಂತಿಲ್ಲ " ಎಂದು ಸಿಜೆಐ ಹೇಳಿದರು.
ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರ ಅಂತಹ ವಿಷಯಗಳಲ್ಲಿ ಸಮತೋಲಿತ ಪರಿಹಾರ ಕಂಡುಕೊಳ್ಳುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
"ಎಲ್ಲಾ ಭಾಗೀದಾರರಿಗೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಸಂಪೂರ್ಣ ನಿಷೇಧ ಇದ್ದರೂ ನಿಷೇಧ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ವಿವರಿಸಲಾಗಿದೆ. ಬಿಹಾರದಲ್ಲಿ ಗಣಿಗಾರಿಕೆ ಮೇಲೆ ನಿಷೇಧ ಇದ್ದರೂ ಅದು ಅಕ್ರಮ ಗಣಿ ಮಾಫಿಯಾಗಳಿಗೆ ಎಡೆ ಮಾಡಿಕೊಟ್ಟಿತು. ಆದ್ದರಿಂದ ಸಮತೋಲನ ವಿಧಾನ ಕಂಡುಕೊಳ್ಳುವ ಅಗತ್ಯವಿದೆ. ಎಲ್ಲಾ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ತಿಳಿಸಬೇಕು" ಎಂದು ಅದು ಆದೇಶಿಸಿತು.
ಈ ಮಧ್ಯೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹಸಿರು ಪಟಾಕಿ ಮಾರಾಟ ಮಾಡಬಾರದು ಆದರೆ ತಯಾರಿಸಬಹುದು ಎಂದು ನ್ಯಾಯಾಲಯ ಅನುಮತಿ ನೀಡಿತು.
ಅಲ್ಲದೆ ಪಟಾಕಿ ತಯಾರಕರು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಮತ್ತು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧಣಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆಯಬೇಕು ಎಂದು ಅದು ತಾಕೀತು ಮಾಡಿತು. ಜೊತೆಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವಂತೆಯೂ ನ್ಯಾಯಾಲಯ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 8ಕ್ಕೆ ನಿಗದಿಯಾಗಿದೆ.