ಜಾಮೀನು ಷರತ್ತು ಸಡಿಲಿಕೆ: ಪತ್ರಕರ್ತ ಸಿದ್ದಿಕ್ ಕಪ್ಪನ್ ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್

ಪ್ರತಿ ವಾರ ಉತ್ತರ ಪ್ರದೇಶದ ಪೊಲೀಸ್ ಠಾಣೆಗೆ ಕೇರಳ ಮೂಲದ ತಾನು ಹಾಜರಾಗಬೇಕು ಎಂಬ ಜಾಮೀನು ಷರತ್ತನ್ನು ಸಡಿಲಿಸುವಂತೆ ಕೋರಿ ಸಿದ್ದಿಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Siddique kappan and Supreme Court
Siddique kappan and Supreme Court
Published on

ಉತ್ತರ ಪ್ರದೇಶದ ಪೊಲೀಸ್ ಠಾಣೆಗೆ ಪ್ರತಿ ವಾರ ಹಾಜರಿ ಹಾಕಬೇಕೆಂಬ ಜಾಮೀನು ಷರತ್ತು ಸಡಿಲಿಸುವಂತಗೆ ಕೋರಿ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪುರಸ್ಕರಿಸಿದೆ [ಸಿದ್ದಿಕ್‌ ಕಪ್ಪನ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಸೆಪ್ಟೆಂಬರ್ 2022ರಂದು ನೀಡಿದ ಆದೇಶದಲ್ಲಿ ಅಲಾಹಾಬಾದ್‌ ಸುಪ್ರೀಂ ಕೋರ್ಟ್‌ ವಿಧಿಸಿದ್ದ ಷರತ್ತನ್ನು  ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಸಡಿಲಿಸಿದೆ.  

Also Read
ಕಪ್ಪನ್‌ ವಿರುದ್ಧದ ಆರೋಪ ನಿಗದಿ ಆದೇಶ ರದ್ದು: ಆರೋಪ ವಿಮುಕ್ತಿ ಅರ್ಜಿ ಮೊದಲು ಆಲಿಸಲು ಅಲಾಹಾಬಾದ್ ಹೈಕೋರ್ಟ್ ಸೂಚನೆ

ಯುಎಪಿಎ ಅಡಿಯಲ್ಲಿ ಉತ್ತರ ಪ್ರದೇಶ (ಯುಪಿ) ಪೊಲೀಸರು ಕಪ್ಪನ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2022 ರಲ್ಲಿ ಕಪ್ಪನ್ ಅವರಿಗೆ ಜಾಮೀನು ನೀಡಿತ್ತು .

ಹಾಥ್‌ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ಮಲಯಾಳಂ ಸುದ್ದಿತಾಣ www.azhimukham.comನ ಪತ್ರಕರ್ತ ಮತ್ತು ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್‌ ಹಾಗೂ ಇತರ ಮೂವರನ್ನು ಟೋಲ್‌ ಪ್ಲಾಜಾದಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಸೌಹಾರ್ದತೆ ಕದಡುವ ಸಲುವಾಗಿ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಹ ದೋಷಯುಕ್ತ ಮಾಹಿತಿ ಇರುವ ಜಾಲತಾಣ ನಡೆಸುವುದಕ್ಕಾಗಿ ಹಣ ಸಂಗ್ರಹಿಸಲು ಕಪ್ಪನ್‌ ಅವರು ಹಾಥ್‌ರಸ್‌ಗೆ ಪ್ರಯಾಣಿಸುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು.

Also Read
[ಸಿದ್ದೀಕ್ ಕಪ್ಪನ್ ಜಾಮೀನು ಅರ್ಜಿ] ಉತ್ತರ ಪ್ರದೇಶಕ್ಕೆ ಸುಪ್ರೀಂ ನೋಟಿಸ್; ಸೆ. 9ರಂದು ಪ್ರಕರಣ ನಿರ್ಧಾರ

ಕಪ್ಪನ್ ಅವರು  ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ (ಪಿಎಫ್‌ಐ) ನಿಕಟ ಸಂಪರ್ಕ ಹೊಂದಿದ್ದು ದೇಶದಲ್ಲಿ ಧಾರ್ಮಿಕ ವೈಷಮ್ಯ ಮತ್ತು ಭಯೋತ್ಪಾದನೆಯನ್ನು ಹರಡುವ ದೊಡ್ಡ ಪಿತೂರಿಯ ಭಾಗವಾಗಿದ್ದರು ಎಂದು ಉತ್ತರ ಪ್ರದೇಶ ಸರ್ಕಾರ ವಾದಿಸಿತ್ತು.

ಯುಎಪಿಎ ಮಾತ್ರವಲ್ಲದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿಯೂ ಕಪ್ಪನ್‌ ಅವರನ್ನು ಬಂಧಿಸಿ ಡಿಸೆಂಬರ್ 2020 ರಿಂದ ಲಖನೌ ಜೈಲಿನಲ್ಲಿ ಇರಿಸಲಾಗಿತ್ತು. ಸೆಪ್ಟೆಂಬರ್‌ 2022ರಲ್ಲಿ ಸುಪ್ರೀಂ ಕೋರ್ಟ್‌ ಕಪ್ಪನ್‌ಗೆ ಜಾಮೀನು ನೀಡಿತ್ತು.

Kannada Bar & Bench
kannada.barandbench.com