
ದೀಪಾವಳಿ ವೇಳೆಗೆ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ಅಕ್ಟೋಬರ್ 18ರಿಂದ ಅಕ್ಟೋಬರ್ 21 ರವರೆಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠ ಆದೇಶಿಸಿತು.
ದೀಪಾವಳಿಯ ಹಿಂದಿನ ದಿನ ಮತ್ತು ದೀಪಾವಳಿಯಂದು ಎರಡು ದಿನಗಳಲ್ಲಿ ಬೆಳಿಗ್ಗೆ 6ರಿಂದ 7ರವರೆಗೆ ಮತ್ತು ರಾತ್ರಿ 8ರಿಂದ ರಾತ್ರಿ 10 ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಬೇಕು ಎಂದು ಕೂಡ ನ್ಯಾಯಾಲಯ ನಿರ್ದೇಶನ ನೀಡಿತು.
ಅಕ್ಟೋಬರ್ 18 ರಿಂದ ಅಕ್ಟೋಬರ್ 21 ರವರೆಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶವಿರುತ್ತದೆ. ಕೇವಲ ಕ್ಯೂಆರ್ ಕೋಡ್ ಹೊಂದಿರುವ ಅನುಮೋದಿತ ಪಟಾಕಿಗಳೇ ಮಾರಾಟವಾಗುವಂತೆ ನೋಡಿಕೊಳ್ಳಲು ಪೊಲೀಸರು ಗಸ್ತು ತಂಡ ರಚಿಸಬೇಕು. ನಿಯಮ ಉಲ್ಲಂಘಿಸಿದರೆ ನೋಟಿಸ್ ನೀಡಬೇಕು. ದೀಪಾವಳಿಯ ಹಿಂದಿನ ದಿನ ಮತ್ತು ದೀಪಾವಳಿಯ ದಿನದಂದು ಮಾತ್ರವೇ ಬೆಳಿಗ್ಗೆ 6ರಿಂದ ಬೆಳಿಗ್ಗೆ 7ರವರೆಗೆ ಮತ್ತು ರಾತ್ರಿ 8ರಿಂದ ರಾತ್ರಿ 10ರವರೆಗೆ ಮಾತ್ರವೇ ಪಟಾಕಿಗಳನ್ನು ಬಳಸಬೇಕು ಎಂದು ನ್ಯಾಯಾಲಯ ವಿವರಿಸಿದೆ.
ಇ- ವಾಣಿಜ್ಯ ಜಾಲತಾಣಗಳು ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಅದು ಹೇಳಿದೆ. ಸಂಪೂರ್ಣ ನಿಷೇಧ ಹೇರಿದರೆ ಪಟಾಕಿಗಳನ್ನು ಕದ್ದು ಮಾರಲಾಗುತ್ತದೆ ಮತ್ತು ಗಾಳಿಯ ಗುಣಮಟ್ಟಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಈ ಆದೇಶ ನೀಡಿತು.
ಹಸಿರು ಪಟಾಕಿಗಳು ಕಳೆದ ಆರು ವರ್ಷಗಳಲ್ಲಿ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿವೆ. 14.10.2024 ರಿಂದ 1.1.2025 ರವರೆಗೆ ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿತ್ತು ಎಂದು ಪೀಠ ನಿಷೇಧ ಸಡಿಲಿಸಿತು.
ಅಂತೆಯೇ ಪಟಾಕಿ ಮಾರಾಟ, ಪೊಲೀಸರ ಹೊಣೆಗಾರಿಕೆ, ಪಟಾಕಿ ಬಳಕೆಯ ಸಮಯ, ಅನುಮತಿ ಪಡೆದ ವ್ಯಾಪರಿಗಳಷ್ಟೇ ಹಸಿರು ಪಟಾಕಿ ಮಾರಾಟ ಮಾಡಲು ಅವಕಾಶ ಅನಧಿಕೃತ ಪಟಾಕಿಗಳ ನಿಯಂತ್ರಣ ಸಂಬಂಧ ಅದು ವಿವಿಧ ನಿರ್ದೇಶನಗಳನ್ನು ನೀಡಿತು.