"ದೀಪಾವಳಿಗೆ ದೆಹಲಿ ಸುತ್ತಮುತ್ತ ಹಸಿರು ಪಟಾಕಿ ಸಿಡಿಸಲು ಅವಕಾಶ ಇದೆಯೇ?" ನಿರ್ಧರಿಸಲಿದೆ ಸುಪ್ರೀಂ ಕೋರ್ಟ್‌

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರಂತರವಾಗಿ ಕಳಪೆಯಾಗಿರುವ ಸಮಸ್ಯೆಯಿಂದಾಗಿ, ನ್ಯಾಯಾಲಯ ಈ ಹಿಂದೆ ಈ ಪ್ರದೇಶದಲ್ಲಿ ಪಟಾಕಿಗಳ ಬಳಕೆ ನಿಷೇಧಿಸಿತ್ತು.
Supreme Court, Firecrackers
Supreme Court, Firecrackers
Published on

ಈ ಬಾರಿಯ ದೀಪಾವಳಿ ಹೊತ್ತಿಗೆ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಅನುಮತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ಕಾಯ್ದಿರಿಸಿದೆ.

ಪಟಾಕಿಗಳ ಮೇಲಿನ ನಿಷೇಧ ತೆಗೆದುಹಾಕುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠವನ್ನು ಕೋರಿದರು.

Also Read
ದೆಹಲಿ ಸುತ್ತಮುತ್ತ ಹಸಿರು ಪಟಾಕಿ ತಯಾರಿಕೆಗಷ್ಟೇ ಅನುಮತಿ, ಮಾರಾಟಕ್ಕಿಲ್ಲ: ಸುಪ್ರೀಂ ಕೋರ್ಟ್‌

"ಪಟಾಕಿಗಳಿಂದಾಗಿ ಗಾಳಿಯ ಗುಣಮಟ್ಟ ಕಳಪೆಯಾಗುತ್ತದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ. ಪಟಾಕಿಗಳಿಗೆ ಯಾವುದೇ ನಿರ್ಬಂಧ ಇರಬಾರದು ಎಂದು ಕೋರುತ್ತೇನೆ. (ಪಟಾಕಿ ಸಿಡಿಸಲು) ಎರಡು ಗಂಟೆ ಕಾಲಾವಕಾಶ ಇದೆ ಎಂದಿಟ್ಟುಕೊಳ್ಳಿ... ಪೋಷಕರ ಮನವೊಲಿಸಲೆಂದೇ ಒಂದು ಗಂಟೆ ಬೇಕಾಗುತ್ತದೆ! ನಾವೆಲ್ಲರೂ ಮಕ್ಕಳಾಗಿದ್ದೆವು! ನನ್ನೊಳಗಿನ ಮಗು ನಿಮ್ಮೊಳಗಿನ ಮಗುವಿನ ಮನವೊಲಿಸಲು ಹಠ ಮಾಡುತ್ತಿದೆ " ಎಂದು ಮೆಹ್ತಾ ಕಾವ್ಯಾತ್ಮಕವಾಗಿ ವಿವರಿಸಿದರು.

ಮನವಿ ಪುರಸ್ಕರಿಸುವ ಸುಳಿವನ್ನು ನ್ಯಾಯಾಲಯ ನೀಡಿದೆ.  ಈಗ ಎರಡು ಗಂಟೆ ಅನುಮತಿ ಸಾಕು. ಮುಂದೆ ನೋಡೋಣ ಎಂದು ನ್ಯಾಯಾಲಯ ನುಡಿಯಿತು.

ತಯಾರಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ. ಪರಮೇಶ್ವರ್ , ಹರಿಯಾಣದ ಅರ್ಧದಷ್ಟು ಭಾಗದಲ್ಲಿ ವಿಚಾರಣೆಗೆ ಅವಕಾಶವಿಲ್ಲದೆ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಪೂರಕವಾಗಿ ವಾದ ಮಂಡಿಸಿದ ಹಿರಿಯ ವಕೀಲ ಜೆ ಸಾಯಿ ದೀಪಕ್ "ಈಗಾಗಲೇ ನಿಯಂತ್ರಿಸಲ್ಪಡುತ್ತಿದ್ದ ಉದ್ಯಮವನ್ನು ಮತ್ತಷ್ಟು ನಿಯಂತ್ರಿಸಿದಂತಾಗಿದೆ. ಎಲ್ಲರನ್ನೂ ಸಾಮಾನ್ಯೀಕರಿಸಿ ನೋಡಲಾಯಿತು. ಪಟಾಕಿ ತಯಾರಕರು ನಮ್ಮಲ್ಲಿರುವ ಅಪರಾಧಿಗಳನ್ನು ಗುರುತಿಸಿ ಅವರನ್ನು ಶಿಕ್ಷಿಸಿ ಎಂದು ಹೇಳಿದ್ದರು" ಎಂದರು.

Also Read
ಪಟಾಕಿ ಸಂಪೂರ್ಣ ನಿಷೇಧ: ದೆಹಲಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅನ್ವಯವಾಗಲಿ ಎಂದ ಸುಪ್ರೀಂ ಕೋರ್ಟ್

ದೆಹಲಿಯಲ್ಲಿ ನಿರಂತರವಾಗಿ ಕಳಪೆ ಗಾಳಿಯ ಗುಣಮಟ್ಟದ ಸಮಸ್ಯೆ ಇರುವುದರಿಂದ, ನ್ಯಾಯಾಲಯ ಈ ಹಿಂದೆ ದೆಹಲಿಯಲ್ಲಿ ಪಟಾಕಿ ಬಳಕೆ ನಿಷೇಧಿಸಿತ್ತು. ಮತ್ತೊಂದೆಡೆ ಹಸಿರು ಪಟಾಕಿಗಳಿಂದ  ಉಂಟಾಗುವ ಮಾಲಿನ್ಯ ಕಡಿಮೆ ಎಂದು ಸಾಬೀತಾಗದ ಹೊರತು ಹಿಂದಿನ ಆದೇಶಗಳನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಕಳೆದ ಏಪ್ರಿಲ್‌ನಲ್ಲಿ ಅದು ಹೇಳಿತ್ತು.

ಆದರೆ ಕಳೆದ ತಿಂಗಳು ಹಸಿರು ಪಟಾಕಿಗಳ ತಯಾರಿಕೆಗಷ್ಟೇ ಅನುಮತಿ ನೀಡಿದ್ದ ನ್ಯಾಯಾಲಯ ಅವುಗಳ ಮಾರಾಟದ ಮೇಲಿನ ನಿರ್ಬಂಧ  ಮುಂದುವರೆಸಿತ್ತು. ಗಮನಾರ್ಹ ಅಂಶವೆಂದರೆ, ದೆಹಲಿ ಮತ್ತು ನೆರೆಯ ರಾಜ್ಯಗಳ ಸರ್ಕಾರಗಳು ಮತ್ತು ತಯಾರಕರು ದೀಪಾವಳಿಯಂದು ದೆಹಲಿ ಇನ್ನಿತರ ಪ್ರದೇಶಗಳಲ್ಲಿ ಹಸಿರು ಪಟಾಕಿಗಳ ಬಳಕೆಗೆ ಅನುಮತಿ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕ್ರಿಸ್‌ಮಸ್, ಗುರು ಪುರಬ್ ಹಾಗೂ ಹೊಸ ವರ್ಷದ ಹಿಂದಿನ ದಿನ ಇದೇ ರೀತಿಯ ಸಡಿಲಿಕೆ ಮಾಡುವಂತೆ  ಅವರು ಸಲಹೆ ನೀಡಿದ್ದರು.

Kannada Bar & Bench
kannada.barandbench.com