ಅಂಬಾಸಡರ್‌ ಕಾರು ಉತ್ಪಾದನೆಗೆ ನೀಡಿದ್ದ ಭೂಮಿ ಹಿಂಪಡೆಯಲು ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಅನುಮತಿ

ಹಿಂದೂಸ್ತಾನ್ ಮೋಟಾರ್ಸ್‌ ವಾಹನ ತಯಾರಿಕಾ ಸಂಸ್ಥೆಗೆ ಹೂಗ್ಲಿಯ ಉತ್ತರಪಾರದ ಸಮೀಪ ಪ.ಬಂಗಾಳ ಸರ್ಕಾರವು ಈ ಹಿಂದೆ 395 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.
ಅಂಬಾಸಡರ್‌ ಕಾರು ಉತ್ಪಾದನೆಗೆ ನೀಡಿದ್ದ ಭೂಮಿ ಹಿಂಪಡೆಯಲು ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಅನುಮತಿ
Published on

ಹಿಂದೂಸ್ತಾನ್ ಮೋಟಾರ್ಸ್‌ ವಾಹನ ತಯಾರಿಕಾ ಸಂಸ್ಥೆಗೆ ಹೂಗ್ಲಿಯ ಉತ್ತರಪಾರದಲ್ಲಿ ಈ ಹಿಂದೆ ಮಂಜೂರು ಮಾಡಲಾಗಿದ್ದ 395 ಎಕರೆ ಭೂಮಿಯನ್ನು ಹಿಂದಕ್ಕೆ ಪಡೆಯುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಹಿಂದೂಸ್ತಾನ್ ಮೋಟಾರ್ಸ್ ಲಿಮಿಟೆಡ್ & ಅನರ್. vs. ದಿ ಸ್ಟೇಟ್ ಆಫ್ ವೆಸ್ಟ್ ಬೆಂಗಾಲ್ & ಅದರ್ಸ್]. ತನಗೆ ನೀಡಲಾಗಿದ್ದ ಜಾಗದಲ್ಲಿ ಅಂಬಾಸಿಡರ್ ಕಾರು ಉತ್ಪಾದನಾ ಘಟಕವನ್ನು ಹಿಂದೂಸ್ತಾನ್‌ ಮೋಟಾರ್ಸ್‌ ಹೊಂದಿತ್ತು.

ಬಳಕೆಯಾಗದ ಭೂಮಿಯನ್ನು ಮರಳಿ ಪಡೆಯುವ ರಾಜ್ಯದ ಹಕ್ಕನ್ನು ಎತ್ತಿಹಿಡಿದಿದ್ದ ಕಲ್ಕತ್ತಾ ಹೈಕೋರ್ಟ್‌ನ ಮೇ 2025ರ ತೀರ್ಪನ್ನು ಪ್ರಶ್ನಿಸಿ ಹಿಂದೂಸ್ತಾನ್ ಮೋಟಾರ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರ ಸುಪ್ರೀಂ ಕೋರ್ಟ್‌ ಪೀಠವು ವಜಾಗೊಳಿಸಿತು. ಕಂಪನಿಯ ವಾದಗಳನ್ನು ತಿರಸ್ಕರಿಸಿದ ಪೀಠವು, ಆಟೋಮೊಬೈಲ್ ತಯಾರಕರು ದಶಕಗಳಿಂದ ಭೂಮಿಯನ್ನು ಬಳಸದೇ ಇರುವುದನ್ನು ಅವಲಂಬಿಸಿದ್ದ ಹೈಕೋರ್ಟ್‌ ತೀರ್ಪಿನ ತಾರ್ಕಿಕತೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರವಿಲ್ಲ ಎಂದು ಹೇಳಿತು.

ಪಶ್ಚಿಮ ಬಂಗಾಳ ಎಸ್ಟೇಟ್ ಸ್ವಾಧೀನ ಕಾಯ್ದೆಯ ಸೆಕ್ಷನ್ 6(3) ರ ಅಡಿಯಲ್ಲಿ ಭೂಮಿಯನ್ನು ದೀರ್ಘಕಾಲದವರೆಗೆ ಬಳಸದೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅದನ್ನು ಮರಳಿ ಪಡೆಯಲು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ದೀರ್ಘಕಾಲೀನ ಕಾನೂನು ವಿವಾದವು ಸುಪ್ರೀಂ ಕೋರ್ಟ್‌ ತೀರ್ಪಿನೊಂದಿಗೆ ಅಂತ್ಯ ಕಂಡಿದೆ. ಭೂಮಿ ಮರಳಿ ಪಡೆಯುವ ಸರ್ಕಾರದ ಆದೇಶವನ್ನು ಮೊದಲಿಗೆ ಪಶ್ಚಿಮ ಬಂಗಾಳ ಭೂ ನ್ಯಾಯಮಂಡಳಿ ಎತ್ತಿ ಹಿಡಿದಿತ್ತು. ನಂತರ ಈ ವರ್ಷದ ಮೇ ತಿಂಗಳಲ್ಲಿ ಕಲ್ಕತ್ತಾ ಹೈಕೋರ್ಟ್ ಇದಕ್ಕೆ ಸಹಮತ ವ್ಯಕ್ತಪಡಿಸಿತ್ತು. ಇದರ ವಿರುದ್ಧ ಹಿಂದೂಸ್ತಾನ್‌ ಮೋಟಾರ್ಸ್‌ ಸುಪ್ರೀಂ ಮೆಟ್ಟಿಲೇರಿತ್ತು.

ನಿಪ್ಕ್ರಿಯವಾಗಿರುವ ಭೂಮಿಯನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ಅನುಮತಿಸುವ ಶಾಸನ ಸಭೆಯ ಅಧಿಕಾರವನ್ನು ತಿಳಿಸುವ ಕಾಯಿದೆಯ ಸೆಕ್ಷನ್ 6(3) ರ ನಿಬಂಧನೆಗೆ ನೀಡಲಾದ ಸಾಂವಿಧಾನಿಕ ಸಿಂಧುತ್ವದ ವಿವರಣೆ II ಅನ್ನು ಹೈಕೋರ್ಟ್‌ ಅನುಮೋದಿಸಿರುವುದನ್ನು ಸಹ ಸುಪ್ರೀಂ ಕೋರ್ಟ್ ಸಮ್ಮತಿಸಿತು. ಹೈಕೋರ್ಟ್ ನಿಬಂಧನೆಯ ವ್ಯಾಖ್ಯಾನದಲ್ಲಿ ಯಾವುದೇ ಲೋಪವಿಲ್ಲ ಎಂದ ಅದು ಮಧ್ಯಪ್ರವೇಶಿಸಲು ನಿರಾಕರಿಸಿತು.

ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಹಿಂದೂಸ್ತಾನ್‌ ಮೋಟಾರ್ಸ್‌ ಪರ ವಾದಿಸಿದರು. ಹಿರಿಯ ವಕೀಲರಾದ ಅಭಿಷೇಕ್‌ ಮನುಸಿಂಘ್ವಿ, ರಾಕೇಶ್‌ ದ್ವಿವೇದಿ, ಶಾದಾನ್‌ ಫರಾಸತ್‌ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com