'ಲೈಂಗಿಕ ಕಾರ್ಯಕರ್ತೆ' ಬದಲು 'ಮಾನವ ಕಳ್ಳಸಾಗಣೆ ಸಂತ್ರಸ್ತೆ' ಪದ ಬಳಕೆ: ಸುಪ್ರೀಂ ಕೋರ್ಟ್ ಕೈಪಿಡಿಗೆ ತಿದ್ದುಪಡಿ

ಮಹಿಳೆಯರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮಾಹಿತಿ ನೀಡಿದ ಪೀಠ.
Supreme Court
Supreme Court

ಕಳ್ಳಸಾಗಣೆ-ವಿರೋಧಿ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಸಲಹೆಯ ಮೇರೆಗೆ, 'ಲೈಂಗಿಕ ಕಾರ್ಯಕರ್ತೆ' ಪದದ ಬದಲು ಹೆಚ್ಚು ಸೂಕ್ಷ್ಮ ಪದ ಬಳಸುವುದಕ್ಕಾಗಿ ತಾನು ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದ ಕೈಪಿಡಿಗೆ ಸುಪ್ರೀಂ ಕೋರ್ಟ್‌ ತಿದ್ದುಪಡಿ ಮಾಡಿದೆ [ಅಮಿತ್‌ ಪಾಂಚಾಲ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ, 'ಮಾನವ ಕಳ್ಳಸಾಗಣೆ ಸಂತ್ರಸ್ತೆ', “ವಾಣಿಜ್ಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ಮಹಿಳೆʼ ಹಾಗೂ ʼವಾಣಿಜ್ಯ ಲೈಂಗಿಕ ಶೋಷಣೆಗೆ ಬಲವಂತದಿಂದ ದೂಡಲ್ಪಟ್ಟ ಮಹಿಳೆʼ ಪದಗಳನ್ನು ಕೈಪಿಡಿ ಒಳಗೊಂಡಿದೆ.

ಈ ಪದಗಳ ಬಳಕೆಯನ್ನು ಬದಲಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆಗಳು ಕಳೆದ ಆಗಸ್ಟ್ 28 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದವು. "ಲೈಂಗಿಕ ಕಾರ್ಯಕರ್ತೆ" ಎಂಬ ರೀತಿಯ ಸಾಮಾನ್ಯ ಪದ ಬಳಸಿದರೆ, ವಾಣಿಜ್ಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲಾ ಮಹಿಳೆಯರು ಮುಕ್ತ ಮತ್ತು ಸಕಾರಾತ್ಮಕ ನಿಲುವಿನಿಂದ ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಭಾವನೆ ಮೂಡಬಹುದು ಎಂದು ಎನ್‌ಜಿಒಗಳು ಆತಂಕ ವ್ಯಕ್ತಪಡಿಸಿದ್ದವು.  

ಹೆಚ್ಚಿನ ಮಹಿಳೆಯರು ಬಲಪ್ರಯೋಗ ಅಥವಾ ವಂಚನೆಗೊಳಗಾಗಿ ಈ ವೃತ್ತಿಯಲ್ಲಿ ಸಿಲುಕುತ್ತಾರೆ ಎಂಬ  ವಾಸ್ತವವನ್ನು ಇದು ನಿರಾಕರಿಸುತ್ತದೆ. ಜೊತೆಗೆ ಪರ್ಯಾಯವಾಗಿ ಉತ್ತಮ ಪದಗಳು ಇಲ್ಲದೇ ಇರುವುದರಿಂದ ಅನೇಕರು ವಿಧಿಯಿಲ್ಲದೆ ಆ ಪದದ ವ್ಯಾಪ್ತಿಗೆ ಬರುತ್ತಾರೆ ಎಂದು ಪತ್ರಿಕಾ ಪ್ರಕಟಣೆ ಹೇಳಿತ್ತು.

ಮನವಿ ಅಂಗೀಕರಿಸಿರುವುದಾಗಿ ಶನಿವಾರ ಎನ್‌ಜಿಒಗಳಿಗೆ ಪತ್ರ ಬರೆದಿರುವ ಸುಪ್ರೀಂ ಕೋರ್ಟ್‌ ಸಂಶೋಧನಾ ಮತ್ತು ಯೋಜನಾ ಕೇಂದ್ರದ ಉಪ ರಿಜಿಸ್ಟ್ರಾರ್ ಅನುರಾಗ್ ಭಾಸ್ಕರ್ ಅವರು ʼಲೈಂಗಿಕ ಕಾರ್ಯಕರ್ತೆʼ ಪದವನ್ನು ಬದಲಿಸಲಾಗುವುದು ಎಂದಿದ್ದಾರೆ.

ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅಸೂಕ್ಷ್ಮ ಮತ್ತು ಬಿಡುಬೀಸಾದ ಊಹೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಲಿಂಗತ್ವ ಅಸೂಕ್ಷ್ಮತೆ ತಪ್ಪಿಸುವ ಕೈಪಿಡಿಯೊಂದನ್ನು ಸುಪ್ರೀಂಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ  ಚಂದ್ರಚೂಡ್‌ ಅವರು ಕೈಪಿಡಿಗೆ ಮುನ್ನುಡಿ ಬರೆದಿದ್ದು ಇದು ನ್ಯಾಯಾಧೀಶರು ಸ್ವೀಕರಿಸುವ ಪ್ರಮಾಣವಚನದ ಪಾವಿತ್ರ್ಯತೆಯನ್ನು ನೆನಪಿಸುತ್ತದೆ. ಜೊತೆಗೆ ಹಾನಿಕಾರಕ ಅಸೂಕ್ಷ್ಮತೆಗಳನ್ನು ಬಲಪಡಿಸುವಂತಹ ತನ್ನದೇ ಆದ ಕಲ್ಪನೆಗಳನ್ನು ನ್ಯಾಯಾಂಗ ಬದಿಗೆ ಸರಿಸುವ ನಿಟ್ಟಿನಲ್ಲಿ ಏನು ಮಾಡಬೇಕೆಂಬುದನ್ನು ವಿವರಿಸುತ್ತದೆ.

ಆ ಕೈಪಿಡಿ ಕುರಿತು ಬಾರ್‌ ಅಂಡ್‌ ಬೆಂಚ್‌ ಪ್ರಕಟಿಸಿದ್ದ ವರದಿ ಓದಲು ಇಲ್ಲಿ ಕ್ಲಿಕ್ಕಿಸಿ.

Kannada Bar & Bench
kannada.barandbench.com