ಸುಪ್ರೀಂ ಕೋರ್ಟ್‌ 2021ರಲ್ಲಿ ಹೊರಡಿಸಿದ ಮಹತ್ವದ ತೀರ್ಪುಗಳು

ಪ್ರಸಕ್ತ ವರ್ಷದಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ಗಮನಾರ್ಹ ತೀರ್ಪು ಮತ್ತು ಆದೇಶಗಳು ಇಂತಿವೆ.
ಸುಪ್ರೀಂ ಕೋರ್ಟ್‌ 2021ರಲ್ಲಿ ಹೊರಡಿಸಿದ ಮಹತ್ವದ ತೀರ್ಪುಗಳು

Supreme Court images with 2021

ಕಳೆದ 2020ಕ್ಕೆ ಹೋಲಿಕೆ ಮಾಡಿದರೆ 2021 ಸಾಕಷ್ಟು ಬದುಕುಗಳನ್ನು ಬದಲಿಸಿತು. ಸುಪ್ರೀಂ ಕೋರ್ಟ್‌ನಲ್ಲೂ ಸಾಕಷ್ಟು ಅಭೂತಪೂರ್ವ ಬದಲಾವಣೆಗಳು ಕಂಡುಬಂದಿದ್ದಲ್ಲದೆ, ಒಂದೇ ಬಾರಿಗೆ ಒಂಭತ್ತು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದ ಘಟನೆ ನಡೆಯಿತು. ಒಬ್ಬರು ಹಾಲಿ ನ್ಯಾಯಮೂರ್ತಿ ಮರಣವನ್ನಪ್ಪಿದ ಘಟನೆಯೂ ನಡೆದು ಹೋಯಿತು. ಈ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ಮೂಡಿ ಬಂದ ಮಹತ್ವದ ತೀರ್ಪು ಮತ್ತು ಆದೇಶಗಳು ಇಂತಿವೆ.

ರಾಜಕೀಯವಾಗಿ ಸೂಕ್ಷ್ಮವಾದ ಪ್ರಕರಣಗಳು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೆಂಟ್ರಲ್‌ ವಿಸ್ತಾ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು.

ನ್ಯಾ. ಸಂಜೀವ್‌ ಖನ್ನಾ ಅವರು “ಭೂ ಬಳಕೆಯ ಬದಲಾವಣೆಗೆ ಸಮ್ಮತಿ ಸೂಚಿಸಿದುದರ ಸಂಬಂಧ ನಾನು ಭಿನ್ನ ಅಭಿಪ್ರಾಯ ಹೊಂದಿದ್ದೇನೆ. ಪಾರಂಪರಿಕ ತಾಣಗಳ ರಕ್ಷಣಾ ಸಮಿತಿಯಿಂದ ಯಾವುದೇ ಪೂರ್ವ ಅನುಮೋದನೆ ಪಡೆಯಲಾಗಿಲ್ಲ. ಇದು ಸೂಕ್ತ ಕಾನೂನಿನ ಪಾಲನೆಯಲ್ಲ. ಆದ್ದರಿಂದ ಪ್ರಕರಣವನ್ನು ಸಾರ್ವಜನಿಕ ವಿಚಾರಣೆಗೆ ಮರಳಿಸಬೇಕು. ಪರಿಸರ ಸಂಬಂಧಿ ಒಪ್ಪಿಗೆ ವಿಚಾರದಲ್ಲಿ ಇದು ವಿವರಣಾರಹಿತ (ನಾನ್ ಸ್ಪೀಕಿಂಗ್) ಆದೇಶವಾಗಿದೆ” ಎಂದು ಭಿನ್ನಮತೀಯ ತೀರ್ಪಿನಲ್ಲಿ ಹೇಳಿದ್ದರು.

ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರವು ಈಚೆಗೆ ಹಿಂಪಡೆದಿತ್ತು. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ರಾಕೇಶ್‌ ವೈಷ್ಣವ್‌ ಪ್ರಕರಣದಲ್ಲಿ ವಿವಾದಿತ ಕೃಷಿ ಕಾಯಿದೆಗಳ ಜಾರಿಗೆ ತಡೆ ನೀಡಿತು.

ಲಿಂಗ ಸಮಾನತೆ 

ಕುಟುಂಬದ ಸದಸ್ಯರೇ ಮನೆಯ ಕೆಲಸಗಳನ್ನು ಮಾಡುವುದರಿಂದ ಅದಕ್ಕೆ ಯಾವುದೇ ತೆರನಾದ ಆರ್ಥಿಕ ಮೌಲ್ಯವನ್ನು ನಿಗದಿಪಡಿಸುವುದಿಲ್ಲ. ಕೀರ್ತಿ ವರ್ಸಸ್‌ ಓರಿಯಂಟಲ್‌ ಇನ್ಶೂರೆನ್ಸ್‌ ಪ್ರಕರಣದಲ್ಲಿ ಗೃಹ ಕೆಲಸಗಳಲ್ಲಿ ಲಿಂಗ ಸ್ವಭಾವವನ್ನು ಗುರುತಿಸಿದ್ದ ನ್ಯಾಯಾಲಯವು ಅದಕ್ಕೆ ಆರ್ಥಿಕ ಮೌಲ್ಯವಿದೆ ಎಂದಿತು.

ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಕಳೆದ ಜುಲೈನಲ್ಲಿ ನೀಡಿದ್ದ ತೀರ್ಪು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅರ್ಪಣಾ ಭಟ್‌ ವರ್ಸಸ್‌ ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಿದ್ದ ಸುಪ್ರೀಂ ಕೋರ್ಟ್‌ ಲಿಂಗ ಏಕರೂಪತೆ ಮತ್ತು ಜಾಮೀನು ಷರತ್ತುಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿತು.

ಮಕ್ಕಳ ಸ್ತನವನ್ನು ಬಟ್ಟೆ ತೆಗೆಯದೆ ಸ್ಪರ್ಶಿಸಿದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ಬದಿಗೆ ಸರಿಸಿತು.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನ

ಹಾಸ್ಯದ ಕಾರ್ಯಕ್ರಮದಲ್ಲಿ‌ ಕಲಾವಿದ ಮುನಾವರ್ ಫಾರೂಖಿ ಅವರು ಹಿಂದೂ ದೇವರುಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಹಿಂದ್‌ ರಕ್ಷಕ್‌ ಸಂಘಟನೆಯ ಮುಖ್ಯಸ್ಥ ಏಕಲವ್ಯ ಸಿಂಗ್‌ ಗೌರ್‌ ಅವರು ದೂರು ದಾಖಲಿಸಿದ್ದರು. ಒಂದು ತಿಂಗಳ ಬಳಿಕ ಸಿಆರ್‌ಪಿಸಿ ಸೆಕ್ಷನ್‌ 41ರ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತು.

ಕೋವಿಡ್‌ ಸಾಂಕ್ರಾಮಿಕ ನಿಭಾಯಿಸಿದ್ದ ಸರ್ಕಾರವನ್ನು ಟೀಕಿಸಿದ್ದ ಹಿರಿಯ ಪತ್ರಕರ್ತ ವಿನೋದ್‌ ದುವಾ ಅವರ ವಿರುದ್ಧ ದಾಖಲಿಸಿದ್ದ ರಾಷ್ಟ್ರದ್ರೋಹ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿತು.

ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನಾಗರಿಕರ ಮೇಲೆ ಕಣ್ಣಿಡುವ ಪೆಗಸಸ್‌ ಬೇಹುಗಾರಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಆರ್‌ ವಿ ರವೀಂದ್ರನ್‌ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿತು.

2020ರ ಆರಂಭದಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ ಪಾತ್ರವನ್ನು ಆಲಿಸಲು ದೆಹಲಿ ವಿಧಾನಸಭೆಯ ಸಮಿತಿಯು ಫೇಸ್‌ಬುಕ್‌ಗೆ ಸಮನ್ಸ್‌ ನೀಡಿತ್ತು. ಈ ಸಮನ್ಸ್‌ ಅನ್ನು ಫೇಸ್‌ಬುಕ್‌ ಪ್ರಶ್ನಿಸಿ ವಿಫಲವಾಗಿತ್ತು. ಸುದೀರ್ಘ ವಾದಕ್ಕೆ ಸಂಬಂಧಿಸಿದಂತೆ ಕೆಲವು ಪ್ರತಿಕ್ರಿಯೆಗಳನ್ನೂ ನ್ಯಾಯಾಲಯ ವ್ಯಕ್ತಪಡಿಸಿತು.

ದೇಶದ ಕೋವಿಡ್‌ ಸ್ಥಿತಿಗೆ ಕೇಂದ್ರ ಚುನಾವಣಾ ಆಯೋಗವೇ ಕಾರಣ, ಚುನಾವಣಾ ಸಮಾವೇಶಗಳ ವೇಳೆ ಕೋವಿಡ್‌ ಮಾರ್ಗಸೂಚಿ ಪಾಲಿಸದ ಕಾರಣಕ್ಕೆ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿತು.

ಮದ್ರಾಸ್ ಹೈಕೋರ್ಟ್ ಮಾಡಿದ ಟೀಕೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, "... ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ನ್ಯಾಯಾಲಯ ಎದುರಿಸುತ್ತಿತ್ತು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಟೀಕೆಗಳು ಕಠಿಣ ಮತ್ತು ರೂಪಕ ಅಸಮರ್ಪಕವಾಗಿದ್ದವು. ಕೋವಿಡ್‌ ಹರಡಿದ್ದಕ್ಕಾಗಿ ಇಸಿಐ ಅಪರಾಧಿ ಎಂದು ಹೈಕೋರ್ಟ್ ಆರೋಪಿಸಿಲ್ಲ ..." ಎಂದಿತು. ಆದರೆ, ಮದ್ರಾಸ್‌ ಹೈಕೋರ್ಟ್‌ನ ಅಭಿಪ್ರಾಯವನ್ನು ತೆಗೆದು ಹಾಕುವುದಕ್ಕಾಗಲಿ, ಮಾಧ್ಯಮವನ್ನು ನಿರ್ಬಂಧಿಸುವುದಕ್ಕಾಗಲಿ ಒಲವು ತೋರಲಿಲ್ಲ.

ಸ್ವಯಂಪ್ರೇರಿತ ಪ್ರಕರಣಗಳು

ಅಧೀನ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಚೆಕ್‌ ಬೌನ್ಸ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್‌ ಪ್ರಕರಣ ದಾಖಲಿಸಿಕೊಂಡು ಹಲವು ನಿರ್ದೇಶನಗಳನ್ನು ನೀಡಿತು.

ಕ್ರಿಮಿನಲ್‌ ವಿಚಾರಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌ ಕ್ರಿಮಿನಲ್‌ ವಿಚಾರಣೆಯ ನಿರ್ವಹಣೆ ಮತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವು ನಿರ್ದೇಶನಗಳನ್ನು ನೀಡಿದೆ.

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಅಳಲಿನ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಪಡಿತರ ವಿತರಣೆ ಮಾಡಲು ಆದೇಶಿಸಿತು.

ಕೋವಿಡ್‌ ಎರಡನೇ ಅಲೆ ವ್ಯಾಪಕವಾಗುತ್ತಿದ್ದ ಸಂದರ್ಭದಲ್ಲಿ ಕಾವಡಿ ಯಾತ್ರೆಯ ಕುರಿತು ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್‌ ಪ್ರಕರಣ ದಾಖಲಿಸಿತ್ತು. ಉತ್ತರ ಪ್ರದೇಶ ಸರ್ಕಾರ ಕಾವಡಿ ಯಾತ್ರೆ ಮುಂದೂಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಮುಕ್ತಾಯಗೊಳಿಸಿತು.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆ ವ್ಯಾಪಕವಾಗಿದ್ದರಿಂದ ನ್ಯಾಯಾಲಯವು ಹಲವು ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಬೇಕಾದ ಸಂದರ್ಭ ನಿರ್ಮಾಣವಾಯಿತು.

ಮೀಸಲಾತಿ ವಿಚಾರ

ಹಿಂದುಳಿದ ವರ್ಗಗಳ ವಿಭಾಗದ ಮೀಸಲಾತಿಯಲ್ಲಿ ಕೆನೆಪದರವನ್ನು ಹೊರಗಿರಿಸಲಾಯಿತು. ಕೆನೆ ಪದರವೆನ್ನುವುದು ಕೇವಲ ಆರ್ಥಿಕ ಮಾನದಂಡವನ್ನು ಮಾತ್ರವೇ ಅಲ್ಲ ಸಾಮಾಜಿಕ ಮುಂದುವರಿಕೆಯನ್ನೂ ಆಧರಿಸಿರುತ್ತದೆ ಎಂದು ನ್ಯಾಯಾಲಯ ಹೇಳಿತು.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ (ಇಡಬ್ಲ್ಯುಎಸ್‌) ಅರ್ಹತೆಯ ಮಾನದಂಡಗಳನ್ನು ಮರುಪರಿಶೀಲಿಸಲಾಗುವುದು ಎಂದು ನ್ಯಾಯಾಲಯದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಸರ್ಕಾರ ಹೇಳಿತು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಬಿಸಿಗೆ ಮೀಸಲಾತಿ ನೀಡಿದ್ದನ್ನು ನ್ಯಾಯಾಲಯ ವಜಾ ಮಾಡಿತು.

ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯದವರಿಗೆ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತು. ಅಲ್ಲದೇ, ಒಬಿಸಿಗಳನ್ನು ಗುರುತಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದಿತು.

ಸಾಂವಿಧಾನಿಕ ವಿಚಾರ

ಸಹಕಾರಿ ವಲಯದ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತರಲಾಗಿದ್ದ 97ನೇ ತಿದ್ದುಪಡಿಯನ್ನು ನ್ಯಾಯಾಲಯ ಭಾಗಶಃ ವಜಾ ಮಾಡಿತು. ಇದುವರೆಗೆ ಎಂಟು ಬಾರಿ ಮಾತ್ರ ಸಾಂವಿಧಾನಿಕ ತಿದ್ದುಪಡಿಯನ್ನು ನ್ಯಾಯಾಲಯಗಳು ವಜಾ ಮಾಡಿದ್ದವು.

ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂವಿಧಾನದ 224ಎ ವಿಧಿಯಡಿ ನಿವೃತ್ತ ನ್ಯಾಯಮೂರ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡುವ ಸಲಹೆ ನೀಡಲಾಗಿದೆ.

ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳು

ಕೇರಳ ವಿಧಾನಸಭೆಯಲ್ಲಿ2015ರಲ್ಲಿ ಆರು ಶಾಸಕರು ದಾಂಧಲೆ ಸೃಷ್ಟಿಸಿದ್ದರು. ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಅವರ ವಿರುದ್ಧ ಪ್ರಕರಣ ಹಿಂಪಡೆಯಲು ಪ್ರಾಸಿಕ್ಯೂಟರ್‌ ಮುಂದಾಗಿದ್ದರು. ಮ್ಯಾಜಿಸ್ಟ್ರೇಟ್‌ ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮ್ಯಾಜಿಸ್ಟ್ರೇಟ್‌ ನಿಲುವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ ಕೇರಳ ಸರ್ಕಾರದ ಮೇಲ್ಮನವಿಯನ್ನು ವಜಾ ಮಾಡಿತು.

ಮತ್ತೊಂದು ಪ್ರಕರಣದಲ್ಲಿ, ಹೈಕೋರ್ಟ್‌ಗಳ ಅನುಮತಿ ಪಡೆದು ಹಾಲಿ ಅಥವಾ ಮಾಜಿ ಶಾಸಕ, ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತು.

ಮಧ್ಯಸ್ಥಿಕೆ

ಅಮೆಜಾನ್‌ ಮತ್ತು ಫ್ಯೂಚರ್‌ ಸಮೂಹದ ನಡುವೆ ಪ್ರತಿಷ್ಠಿತವಾದ ಕಾರ್ಪೊರೇಟ್‌ ದಾವೆ ನಡೆಯುತ್ತಿದೆ. ವಿವಾದದ ಒಂದು ಅಂಶ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಭಾರತೀಯ ಕಾನೂನಿನ ಪ್ರಕಾರ ತುರ್ತು ಮಧ್ಯಸ್ಥಿಕೆ ಸಿಂಧು ಎಂದು ನ್ಯಾಯಾಲಯ ಹೇಳಿದೆ.

ತೀರ್ಪು ಬರೆಯುವುದು ಹೇಗೆ?

ಶಕುಂತಲಾ ಶುಕ್ಲಾ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಜಾಮೀನು ರದ್ದುಪಡಿಸುವಂತೆ ಕೋರಿ ಮನವಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬರೆಯುವ ಪ್ರಾಥಮಿಕ ವಿಚಾರಗಳು, ತೀರ್ಪಿನ ವಿವಿಧ ಅಂಶಗಳು ಮತ್ತು ತೀರ್ಪು ಸರಳ ಮತ್ತು ಸ್ಪಷ್ಟವಾಗಿರುವ ಅಗತ್ಯತೆಯನ್ನು ವಿವರಿಸಿತು.

Related Stories

No stories found.
Kannada Bar & Bench
kannada.barandbench.com