ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಕ್ಷೇತ್ರದ ಏಕೈಕ ಮಧ್ಯಸ್ಥಗಾರರನ್ನಾಗಿ ವಕೀಲೆ ಶ್ರದ್ಧಾ ದೇಶಮುಖ್ ಅವರನ್ನು ಸುಪ್ರೀಂ ಕೋರ್ಟ್ ಈಚೆಗೆ ನೇಮಿಸಿದೆ [ಏಸರೆರ್ ಮೆಟಲ್ ಸನಾಯಿ ವೆ ಟಿಕರೆಟ್ ಎಎಸ್ ಮತ್ತು ಲಾಲ್‌ವಾನಿ ಫೆರೋ ಅಲಾಯ್ಸ್ ಲಿಮಿಟೆಡ್ ನಡುವಣ ಪ್ರಕರಣ].
ನಿವೃತ್ತ ನ್ಯಾಯಾಧೀಶರನ್ನಷ್ಟೇ ಮಧ್ಯಸ್ಥಗಾರರನ್ನಾಗಿ ಮಾಡಲಾಗುತ್ತದೆ ಎಂಬ ಟೀಕೆಗೆ ಅಪವಾದ ಎಂಬಂತೆ ಶ್ರದ್ಧಾ ಅವರ ನೇಮಕಾತಿ ನಡೆದಿದ್ದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನೇಮಕಾತಿ ಆದೇಶ ನೀಡಿದೆ.
ಪುಣೆಯ ಇಂಡಿಯನ್ ಲಾ ಸೊಸೈಟಿಯ (ILS) ಕಾನೂನು ಕಾಲೇಜಿನಿಂದ ಶ್ರದ್ಧಾ 2010ರಲ್ಲಿ ಪದವಿ, ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2011ರಿಂದ 2014ರವರೆಗೆ, ಅವರು ಕಾರಂಜಾವಾಲಾ ಅಂಡ್ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದ ಅವರು ನಂತರ ಅಮರಚಂದ್ ಮತ್ತು ಮಂಗಳದಾಸ್ ಮತ್ತು ಸುರೇಶ್ ಎ ಶ್ರಾಫ್ ಅಂಡ್ ಕಂಪೆನಿಯಲ್ಲಿ ವಕೀಲರಾಗಿ ಪ್ರವರ್ಧಮಾನಕ್ಕೆ ಬಂದಿದ್ದರು.
2014 ಮತ್ತು 2018ರ ನಡುವೆ, ಆ ಸಮಯದಲ್ಲಿ ಭಾರತದ ಅಟಾರ್ನಿ ಜನರಲ್ ಆಗಿದ್ದ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರ ಬಳಿ ಕೆಲಸ ನಿರ್ವಹಿಸುವ ಮುನ್ನ ಶ್ರದ್ಧಾ ಅವರು ಹಿರಿಯ ವಕೀಲ ಅಖಿಲ್ ಸಿಬಲ್ ಅವರೊಂದಿಗೆ ಕೆಲಸ ಮಾಡಿದ್ದರು.
2018 ರಿಂದ, ಅವರು ಸುಪ್ರೀಂ ಕೋರ್ಟ್‌ನಲ್ಲಿ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.