ಚಂಡೀಗಢ ಮೇಯರ್ ಚುನಾವಣೆ: ವೀಕ್ಷಕರನ್ನು ನೇಮಿಸಿದ ಸುಪ್ರೀಂ ಕೋರ್ಟ್

ರಹಸ್ಯ ಮತದಾನದ ಬದಲು 'ಕೈ ಮೇಲೆತ್ತಿ' ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಚಂಡೀಗಢ ಮೇಯರ್ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Supreme Court
Supreme Court
Published on

ಜನವರಿ 30 ರಂದು ನಡೆಯಲಿರುವ ಚಂಡೀಗಢ ಮೇಯರ್ ಚುನಾವಣೆಯ ಮತದಾನದ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಸೋಮವಾರ ಸ್ವತಂತ್ರ ವೀಕ್ಷಕರನ್ನು ನೇಮಿಸಿದೆ.

ರಹಸ್ಯ ಮತದಾನದ ಬದಲು 'ಕೈ ಮೇಲೆತ್ತಿ' ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಚಂಡೀಗಢ ಮೇಯರ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Also Read
ಕೈಗಾರಿಕಾ ಮದ್ಯ ಕೂಡ ಅಮಲೇರಿಸುವ ಮದ್ಯ: ರಾಜ್ಯಗಳು ತೆರಿಗೆ ವಿಧಿಸಬಹುದು ಎಂದ ಸುಪ್ರೀಂ ಕೋರ್ಟ್

ಆದರೆ ಸ್ವತಂತ್ರ ವೀಕ್ಷಕರನ್ನು ನೇಮಿಸುವ ಸೀಮಿತ ಉದ್ದೇಶಕ್ಕಾಗಿ ಚುನಾವಣೆಗಳು ನ್ಯಾಯಯುತವಾಗಿ ನಡೆಯಲು ಕುಮಾರ್ ಅವರ ಕೋರಿಕೆಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿರುವುದನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ಗಮನಿಸಿತು.

ರಾಜ್ಯ ಸರ್ಕಾರದಿಂದ ಈ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ, ವೀಕ್ಷಕರ ಸಮ್ಮುಖದಲ್ಲಿ ಚುನಾವಣೆಯನ್ನು ನಡೆಸಬೇಕು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಸರಿಯಾಗಿ ವೀಡಿಯೊಗ್ರಾಫ್ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೈ ಶ್ರೀ ಠಾಕೂರ್ ಅವರನ್ನು ಸ್ವತಂತ್ರ ವೀಕ್ಷಕರನ್ನಾಗಿ ಪೀಠ ನೇಮಿಸಿದೆ.

ಕುಮಾರ್ ಪರವಾಗಿ ಈ ಹಿಂದೆ ವಾದ ಮಂಡಿಸಿದ್ದ ಹಿರಿಯ ವಕೀಲ ಗುರ್ಮಿಂದರ್ ಸಿಂಗ್ ಅವರು ಚಂಡೀಗಢದಲ್ಲಿ 2024ರ ಮೇಯರ್ ಚುನಾವಣೆಯ ಸಂದರ್ಭದಲ್ಲಿ ನಡೆದ ಅಕ್ರಮಗಳನ್ನು ವಿವರಿಸಿದ್ದರು.  ಬಿಜೆಪಿ ಅಭ್ಯರ್ಥಿ ವಿಜೇತ ಎಂದು ಘೋಷಿಸಲು ಚುನಾವಣಾಧಿಕಾರಿ ಅನಿಲ್ ಮಸೀಹ್‌ ಅವರು ಮತಪತ್ರಗಳನ್ನು ವಿರೂಪಗೊಳಿಸಿದ್ದರು.

Also Read
ಚಂಡೀಗಢ ಮೇಯರ್ ಚುನಾವಣೆ: 'ಕೈ ಮೇಲೆ ಎತ್ತಿ' ಮಾಡುವ ಮತದಾನಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಸ್ವತಂತ್ರ ವೀಕ್ಷಕರನ್ನಾಗಿ ಯಾವುದೇ ಮಾಜಿ ನ್ಯಾಯಾಧೀಶರನ್ನು ನೇಮಿಸಬಹುದು ಎಂದು ಇಂದಿನ ವಿಚಾರಣೆಯ ಸಂದರ್ಭದಲ್ಲಿ ಸಿಂಗ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಕಳೆದ ವರ್ಷದಂತೆ ವಿವಾದ ಏಳುವುದನ್ನು ತಪ್ಪಿಸಲು ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದೂ ಸಹ ಸಿಂಗ್ ತಿಳಿಸಿದರು.

ವೀಕ್ಷಕರ ನೇಮಕ ಕುರಿತಂತೆ ಚಂಡೀಗಢ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಪ್ರತಿ ಬಾರಿಯೂ ಇತಿಹಾಸ ಮರುಕಳಿಸದೆ ಇರಬಹುದು. ಇದಲ್ಲದೆ, ವೀಕ್ಷಕರ ನೇಮಕವು ಇತರ ಪುರಸಭೆಗಳ ಚುನಾವಣೆಗೆ ಪೂರ್ವನಿದರ್ಶನವಾಗಬಾರದು ಎಂದು ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ ಹೇಳಿದರು. 

Kannada Bar & Bench
kannada.barandbench.com