
ಕೇಂದ್ರಾಡಳಿತ ಪ್ರದೇಶವಾಗಿ 2019ರಲ್ಲಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ಒದಗಿಸಲು ಗಡುವು ವಿಧಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ಜಹೂರ್ ಅಹ್ಮದ್ ಭಟ್ ಮತ್ತಿತರರು ಹಾಗೂ ಭಾರತ ಸರ್ಕಾರ ನಡುವಣ ಪ್ರಕರಣ].
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ತಿಳಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಚುನಾವಣೆ ಶಾಂತಿಯುತವಾಗಿ ನಡೆಸಲಾಗಿದ್ದು, ಚುನಾಯಿತ ಸರ್ಕಾರ ಸ್ಥಾಪಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಗಣನೀಯ ಪ್ರಗತಿ ಸಂಭವಿಸಿದೆ. ಆದರೆ, ಪಹಲ್ಗಾಮ್ ದಾಳಿ ಸೇರಿದಂತೆ ಕೆಲವು ಘಟನೆಗಳು ಸಂಭವಿಸಿದ್ದರಿಂದ, ರಾಜ್ಯದ ಸ್ಥಾನಮಾನ ಮರಳಿ ದೊರಕಿಸಿಕೊಡುವ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸಮಾಲೋಚನೆಯಲ್ಲಿವೆ ಎಂದು ಅವರು ಹೇಳಿದ್ದಾರೆ. ಎಸ್‌ಜಿ ಅವರು ಹೆಚ್ಚಿನ ಕಾಲಾವಕಾಶ ಕೇಳಿದ್ದಾರೆ. ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು 6 ವಾರಗಳ ಕಾಲಾವಕಾಶ ನೀಡಲಾಗುತ್ತಿದೆ ಎಂದು ನ್ಯಾಯಾಲಯ ವಿವರಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೋರಿ ಸಲ್ಲಿಸಲಾದ ಅರ್ಜಿಗಳೊಂದಿಗೆ ಈ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು. 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ನಂತರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆದರೂ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವವನ್ನು ನಿರ್ಧರಿಸಲು ನ್ಯಾಯಾಲಯದ ಸಾಂವಿಧಾನಿಕ ಪೀಠ ನಿರಾಕರಿಸಿತ್ತು.
ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕವಾಗಿದ್ದು ಶೀಘ್ರದಲ್ಲಿಯೇ ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ದೊರಕಿಸಿಕೊಡಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ತುಷಾರ್ ಮೆಹ್ತಾ ಹೇಳಿದ್ದರಿಂದ 2023ರಲ್ಲಿ ಕಾಯಿದೆಯ ಸಿಂಧುತ್ವ ನಿರ್ಧರಿಸುವುದು ಅನಗತ್ಯ ಎಂದು ನ್ಯಾಯಾಲಯ ಭಾವಿಸಿತ್ತು.
ಇಂದಿನ ವಿಚಾರಣೆ ವೇಳೆ ತುಷಾರ್ ಮೆಹ್ತಾ ಅವರು ಕಾಶ್ಮೀರದ ಶೇ 99.9ರಷ್ಟು ಜನ ಸಂತೋಷವಾಗಿದ್ದಾರೆ; ರಾಜ್ಯದ ಸ್ಥಾನಮಾನ ದೊರಕಿಸಿಕೊಡಬೇಕು ಎಂಬ ಕೂಗನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಜಹೂರ್ ಅಹ್ಮದ್ ಭಟ್ ಹಾಗೂ ಇನ್ನಿತರ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಕೇಂದ್ರ ಸರ್ಕಾರ ರಾಜ್ಯದ ಸ್ಥಾನಮಾನ ನೀಡುವುದಾಗಿ ಹೇಳಿ ಐದು ವರ್ಷ ಕಳೆದರೂ ಭರವಸೆ ಈಡೇರಿಲ್ಲ. ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂಬ ಕಾರಣಕ್ಕೆ ರಾಜ್ಯ ಸ್ಥಾನಮಾನ ವಿಳಂಬ ಮಾಡುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಸೂಕ್ತ ಗಡುವು ವಿಧಿಸಿ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಬೇಕು ಎಂದರು.
ಕಾಂಗ್ರೆಸ್ ಶಾಸಕ ಇರ್ಫಾನ್ ಲೋನ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಕೇಂದ್ರ ಭರವಸೆ ಈಡೇರಿಸದೆ ಇರುವುದು ಸಂವಿಧಾನದ ದೃಷ್ಟಿಯಿಂದ ಕೆಟ್ಟ ಉದಾಹರಣೆ. ಸಂವಿಧಾನದ ವಿಧಿಗಳು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಒಕ್ಕೂಟ ತತ್ವದ ಮೇಲೆ ಕೇಂದ್ರದ ವಿಳಂಬ ಧೋರಣೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮತ್ತೊಬ್ಬ ಹಿರಿಯ ವಕೀಲ ಪಿ ಸಿ ಸೇನ್ ವಾದ ಮಂಡಿಸಿ ಕೇಂದ್ರ ಸರ್ಕಾರ, ರಾಜ್ಯದ ಸ್ಥಾನಮಾನ ಒದಗಿಸಿಕೊಡುವ ಕುರಿತು ಸಂಸತ್ತಿನಲ್ಲಿ ಕನಿಷ್ಠ ಮಸೂದೆಯನ್ನಾದರೂ ಮಂಡಿಸಬೇಕು. ನ್ಯಾಯಮೂರ್ತಿ ಅಂಜನಾ ಪ್ರಕಾಶ್ ವರದಿಗಳು ಜಮ್ಮು-ಕಾಶ್ಮೀರದಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚುತ್ತಿದೆ ಎಂದು ತೋರಿಸುತ್ತವೆ. ಕೇಂದ್ರಾಡಳಿತದ ದೀರ್ಘಾವಧಿಯ ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳನ್ನುಈ ವರದಿಗಳು ಹೇಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿ ಎನ್ ಭಾರದ್ವಾಜ್ ಅವರು ಐದು ವರ್ಷಗಳು ಕಳೆದರೂ, ಕೇಂದ್ರ ಸರ್ಕಾರ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜಮ್ಮುವಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ, ಹಣದ ಕೊರತೆ ಇದೆ. ರಾಜ್ಯದ ಸ್ಥಾನಮಾನ ದೊರಕಿಸಿಕೊಡಲು ಗಡುವು ವಿಧಿಸಬೇಕು ಎಂದು ಕೋರಿದರು.