ರದ್ದತಿ ಹೊರತಾಗಿಯೂ ಸೆಕ್ಷನ್ 66 ಎ ಬಳಕೆ: ಕ್ರಮ ಕೈಗೊಳ್ಳಲು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಸೂಚನೆ

ಅಪರಾಧಗಳು ದಾಖಲಾಗಿರುವ ಅಥವಾ ಬಾಕಿ ಇರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ಸೂಚಿಸಿದೆ.
Computer, Supreme Court
Computer, Supreme Court

ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ರದ್ದುಪಡಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಎಯನ್ನು ಈಗಲೂ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಅಪರಾಧಗಳು ದಾಖಲಾಗಿರುವ ಅಥವಾ ಬಾಕಿ ಇರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ನಿರ್ದೇಶಿಸಿತು.

"ಅಪರಾಧಗಳು ದಾಖಲಾಗಿರುವ ಅಥವಾ ಬಾಕಿ ಉಳಿದಿರುವ ರಾಜ್ಯಗಳ ಸಂಬಂಧಿತ ಮುಖ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಲು ನಾವು ಕೇಂದ್ರ ಸರ್ಕಾರದ ಪರ ವಕೀಲ ಜೊಹೆಬ್ ಹೊಸೈನ್ ಅವರಿಗೆ ನಿರ್ದೇಶಿಸುತ್ತೇವೆ, ಇದರಿಂದಾಗಿ ಮುಖ್ಯ ಕಾರ್ಯದರ್ಶಿಗಳು ಪರಿಹಾರ ಕ್ರಮ ತೆಗೆದುಕೊಳ್ಳುತ್ತಾರೆ. ಹೊಸೈನ್ ಅವರು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಬಹುದು, ಅಲ್ಲದೆ ಸಂಬಂಧಪಟ್ಟ ವಕೀಲರು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಕೋರಬಹುದು" ಎಂದು ಕೋರ್ಟ್ ಆದೇಶಿಸಿದೆ.

Also Read
ರದ್ದಾದರೂ ಐಟಿ ಕಾಯಿದೆಯ ಸೆಕ್ಷನ್ 66 ಎ ಬಳಕೆ: ರಾಜ್ಯ, ಕೇಂದ್ರಾಡಳಿತ ಪ್ರದೇಶ, ಹೈಕೋರ್ಟ್‌ಗಳಿಗೆ ʼಸುಪ್ರೀಂʼ ನೋಟಿಸ್

ಸೆಕ್ಷನ್ 66 ಎ ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಾರ್ಚ್ 24, 2015 ರಂದು ಘೋಷಿಸಿತ್ತು. ಈ ಸೆಕ್ಷನ್‌ ಅಡಿ ಎಫ್ಐಆರ್‌ ನೋಂದಾಯಿಸದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಲಹೆ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ ಪಿಯುಸಿಎಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವಕೀಲೆ ಅಪರ್ಣಾ ಭಟ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಸೆಕ್ಷನ್ 66 ಎ ಪೊಲೀಸ್‌ ಠಾಣೆಗಳಲ್ಲಿ ಮಾತ್ರವಲ್ಲದೆ ದೇಶದ ವಿಚಾರಣಾ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿದೆ ಎಂದು ಸಂಸ್ಥೆ ಹೇಳಿತ್ತು.

Also Read
ಲೀಗಲ್ ಜಾಂಬಿ ಎಂಬ ಕಾನೂನು ಲೋಕದ ʼನಿಗೂಢ ಜೀವಿʼಯ ಸುತ್ತ…

ಐಟಿ ಕಾಯಿದೆಯ ಸೆಕ್ಷನ್ 66 ಎ ಅಡಿಯಲ್ಲಿ ಮಾರ್ಚ್ 10, 2021ಕ್ಕೆ ಸುಮಾರು 745 ಪ್ರಕರಣಗಳು ಇನ್ನೂ ಬಾಕಿ ಉಳಿದಿದ್ದು ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳು ಜಿಲ್ಲಾ ನ್ಯಾಯಾಲಯಗಳಲ್ಲಿ ಸಕ್ರಿಯವಾಗಿವೆ ಎಂದು ಹೇಳಲು ಜಾಂಬಿ ಟ್ರ್ಯಾಕರ್ ಜಾಲತಾಣದ ಸಂಶೋಧನೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಇಂದು ಪ್ರಕರಣದ ವಿಚಾರಣೆ ನಡೆದಾಗ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ನಿಬಂಧನೆಯ ಮುಂದುವರಿದ ಬಳಕೆಯನ್ನು ಎತ್ತಿ ತೋರಿಸಿದರು.

"ರಾಜ್ಯಗಳಿಂದ ಬಂದಿರುವ ಫಲಿತಾಂಶಗಳು ನಿಜವಾಗಿಯೂ ಆಘಾತಕಾರಿಯಾಗಿದೆ. ದಯವಿಟ್ಟು ಪರಿಸ್ಥಿತಿಯ ಗಹನತೆಯನ್ನು ವಿವರಿಸುವ ರಾಜ್ಯಗಳ ಉತ್ತರ ನೋಡಿ. ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಗೆ ತರದಿದ್ದರೆ ಕಾನೂನು ಆಡಳಿತದ ಸ್ಥಿತಿ ಏನಾಗುತ್ತದೆ, ಗಮನಿಸಿ. ಸೆಕ್ಷನ್‌ 66 ಎ ಅಡಿ ಜಾರ್ಖಂಡ್ ನ್ಯಾಯಾಲಯಗಳಲ್ಲಿ 40 ಪ್ರಕರಣಗಳು, ಮಧ್ಯಪ್ರದೇಶ ನ್ಯಾಯಾಲಯಗಳಲ್ಲಿ 145 ಪ್ರಕರಣಗಳನ್ನು ಪರಿಗಣಿಸಲಾಗಿದೆ, ವಿಚಾರಣೆಯಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 113" ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಪರ ವಕೀಲ ಹೊಸೈನ್ ಅವರು ತೀರ್ಪನ್ನು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪನ್ನು ಅನುಷ್ಠಾನಗೊಳಿಸದಿರುವುದು ಅರ್ಜಿದಾರರ ಅಳಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳೊಡನೆ ಸಂಪರ್ಕದಲ್ಲಿರಲು ಕೇಂದ್ರಕ್ಕೆ ನ್ಯಾಯಾಲಯ ಇದೇ ವೇಳೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com